ಬನಹಟ್ಟಿಯ ಕಾಡಸಿದ್ಧೇಶ್ವರ ಮಾರ್ಗದಲ್ಲಿ ನಡೆಯುತ್ತಿರುವ ಸಂತೆಯಲ್ಲಿ ಅಪಾರ ಪ್ರಮಾಣದ ಜನರು ಸೇರಿರುವುದು.

ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಕೂಡಾ ಮಾಯ

ಇಕ್ಕಟ್ಟಾಗದ ಮಾರುಕಟ್ಟೆ ಸ್ಥಳ
ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿದ ಜನರು

ರಬಕವಿ-ಬನಹಟ್ಟಿ,ಮೇ22: ಕೋವಿಡ್-19 ರೋಗವು ಹರಡದಂತೆ ಸರ್ಕಾರ ಲಾಕ್‍ಡೌನ್ ಜೂನ್ 7 ರವರೆಗೆ ವಿಸ್ತರಿಸಿದೆ. ಆದರೆ ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದ ಮಾರ್ಗದಲ್ಲಿ ಹಾಗೂ ಮಂಗಳವಾರ ಪೇಟೆಯಲ್ಲಿ ನಡೆಯುವ ಸಂತೆಯಲ್ಲಿ ಕೊರೊನಾ ವೈರಸ್ಗೆ ಸ್ಥಳವೇ ಇಲ್ಲದಂತೆ ಜನರು ಸೇರಿರುತ್ತಾರೆ. ಇದರಿಂದ ಈ ಮಾರ್ಗದ ಸುತ್ತ ಮುತ್ತಲಿನ ಜನರು ಆತಂಕಗೊಂಡಿದ್ದಾರೆ. 
 ಬೆಳಗ್ಗೆ ಗ್ರಾಮೀಣ ಪ್ರದೇಶಗಳಿಂದ ತರಕಾರಿ ತೆಗೆದುಕೊಂಡು ಬರುವ ಮಾರಾಟಗಾರರು ಯಾವುದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕುಳಿತುಕೊಂಡಿರುತ್ತಾರೆ. ಅದೇ ರೀತಿಯಾಗಿ ಖರೀದಿದಾರರು ಕೂಡಾ ಸಿಗುತ್ತದೆ ಇಲ್ಲವೋ ಎನ್ನುವಂತೆ ಮುಗಿ ಬೀಳುತ್ತಾರೆ.
 ಬಹಳಷ್ಟು ಮಾರಾಟಗಾರರು ಮಾಸ್ಕ್ ಹಾಕದೆ ಹಾಗೆ ಕುಳಿತಿರುತ್ತಾರೆ. ಈ ಸ್ಥಳ ಬಹಳಷ್ಟು ಇಕ್ಕಟ್ಟಾಗಿದೆ. ದಿನ ನಿತ್ಯ ನೂರಾರು ಜನರು ಓಡಾಡುವ ಸ್ಥಳ ಇದಾಗಿದೆ. ನೂರಾರು ದ್ವಚಿಕ್ರ ವಾಹನಗಳು ಇಲ್ಲಿ ಓಡಾಡುವುದರಿಂದ ಸಾಕಷ್ಟು ಜನ ಸಂದಣಿ ಉಂಟಾಗುತ್ತಿದೆ. ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡುವವರು ಕೂಡಾ ಇಲ್ಲಿಯೇ ನಿಂತು ಮಾರಾಟ ಮಾಡುತ್ತಾರೆ.
  ಬೆಳಗಿನ ಮೂರುವರೆ ಗಂಟೆಗಳ ಕಾಲ ಇಲ್ಲಿ ಬಹಳಷ್ಟು ಜನ ಸಂದಣಿ ಉಂಟಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಇಲ್ಲಿ ಇನ್ನಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ಮಾಸ್ಕ್ ಧರಿಸುವಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ.