ವರದಿ : ವಿಜಯ ವಾಜಂತ್ರಿ        

ತೇರದಾಳ ಪಟ್ಟಣದ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಮುಖಂಡ ರಾಮಣ್ಣ ಹಿಡಕಲ್ ಮಾತನಾಡಿದರು.

ತೇರದಾಳದಲ್ಲಿ ಒಂದು ವಾರ ಸ್ವಯಂ ಲಾಕ್‍ಡೌನ್‍ಗೆ ಒಪ್ಪದ ವ್ಯಾಪಾರಸ್ಥರು

ಸರಕಾರದ ನಿಯಮಗಳಂತೆ ಲಾಕ್‍ಡೌನ್ ಮುಂದುವರಿಕೆ ನಿರ್ಧಾರ

ತೇರದಾಳ : ಗ್ರಾಮಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳು ಸ್ವಯಂ ಆಗಿ ಲಾಕಡೌನ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮಲ್ಲಿಯೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಟ್ಟಣವನ್ನು ಸ್ವಯಂ ಆಗಿ ಲಾಕ್‍ಡೌನ್ ಮಾಡಬೇಕಾಗಿರುವುದರಿಂದ ಪಟ್ಟಣದ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ಪುರಸಭೆ ಅಧ್ಯಕ್ಷರನ್ನೊಳಗೊಂಡಂತೆ ಸದಸ್ಯರು ಹಾಗೂ ಪಟ್ಟಣದ ಮುಖಂಡರು ಸಾರ್ವಜನಿಕ ಸಭೆಯನ್ನು ಕರೆದಿದ್ದರು. ಒಮ್ಮತದ ನಿರ್ಧಾರ ಬರದೆ ಇರುವ ಕಾರಣ ಸರಕಾರದ ನಿಯಮಗಳಂತೆ ಕಡ್ಡಾಯವಾಗಿ ಮಾಸ್ಕ್ ಧರಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನದಟ್ಟಣೆಯಾಗದಂತೆ ಬೆಳಿಗ್ಗೆ 6ಗಂಟೆಯಿಂದ ಮುಂಜಾನೆ9-45ರವರೆಗೆ ದಿನ ನಿತ್ಯದ ಅಗತ್ಯ ಸಾಮಾನುಗಳನ್ನು ಖರೀದಿಗೆ ಅವಕಾಶವಿರುವುದು ಎಂದು ಸೇರಿದ ಸಭೆಯಲ್ಲಿ ನಿರ್ಧರಿಸಲಾಯಿತು.

   ಪಟ್ಟಣದಲ್ಲಿ ಕಳೆದ ಒಂದುವರೆ ತಿಂಗಳಲ್ಲಿ ಸುಮಾರು 96 ಜನರು ಸಾವನ್ನಪ್ಪಿದ್ದಾರೆ ಎಂದು ಪುರಸಭೆಯಲ್ಲಿ ದಾಖಲೆಯಾಗಿವೆ. ಇನ್ನೂ ಕೊರೊನಾ ಸೋಂಕಿತರು ಕೆಲವರು ಬೇರೆ ಕಡೆಗಳ ಆಸ್ಪತ್ರೆಗಳಲ್ಲಿ ಮರಣ ಹೊಂದಿದ್ದಾರೆ. ಅವುಗಳು ನಮ್ಮ ಪುರಸಭೆಯಲ್ಲಿ ದಾಖಲಾಗಿಲ್ಲ. ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸಾವಿನ ಪ್ರಮಾಣವು ಹೆಚ್ಚಾಗುತ್ತಿರುವುದರಿಂದ ಸ್ವಯಂ ಆಗಿ ಲಾಕ್‍ಡೌನ್ ಮಾಡುವ ಸಲುವಾಗಿ ಸಭೆಯನ್ನು ಕರೆಯಲಾಗಿತ್ತು ಎಂದು ಶಂಕರ ಕುಂಬಾರ ಸಭೆಗೆ ತಿಳಿಸಿದರು. ಕಿರಾಣಿ ವರ್ತಕರು ಹಾಗೂ ಜವಳಿ ವ್ಯಾಪಾರಸ್ಥ ಮುಖಂಡರು ಮತನಾಡಿ ವಾರದಲ್ಲಿ ಮೂರು ದಿನಗಳ ಕಾಲ ಸ್ವಯಂ ಆಗಿ ಎಲ್ಲವೂ ಬಂದ್ ಮಾಡೋಣ ಎಂದರು. ಅದಕ್ಕೆ ಮುಖಂಡರು ಒಂದು ವಾರ ಬಂದ್ ಮಾಡೋಣವೆಂದರು. ಇದಕ್ಕೆ ಒಪ್ಪದ ವ್ಯಾಪಾರಸ್ಥರು ಸರಕಾರದ ನಿಯಮಗಳ ಪಾಲನೆಯ ಜೊತೆಗೆ ಈಗಿದ್ದಂತೆ ಮುಂದುವರೆಸಿಕೊಂಡು ಹೋಗೋಣವೆಂದು ನಿರ್ಧಾರವನ್ನು ಕೈಗೊಳ್ಳಲಾಯಿತು.

   ಸದಾಶಿವ ಹೊಸಮನಿ, ರಾಮಣ್ಣ ಹಿಡಕಲ್, ಸಚೀನ ಕೊಡತೆ, ಬಬ್ರು ಹಜಾರೆ, ಸಂಜು ಖವಾಸಿ, ಉಸ್ಮಾನ ಜಮಾದಾರ ಸಭೆಯಲ್ಲಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ರಾಜೇಸಾಬ ನಗಾರ್ಜಿ, ಫಜಲ್ ಅತಾರಾವುತ, ಸಿದ್ದು ಅಮ್ಮಣಗಿ, ಪ್ರಭು ಬಾಗಿ ಸೇರಿದಂತೆ ಕಿರಾಣಿ ಜವಳಿ, ತರಕಾರಿ ವ್ಯಾಪಾರಸ್ಥರು ಇದ್ದರು.