ಆಸ್ಪತ್ರೆಗಳಲ್ಲಿ ಅಲೆದಾಡಿದವರಿಗೆ ಆ ನರಕಯಾತನೆ ಎಂತಹದ್ದು ಅನ್ನುವುದು ಗೊತ್ತಿರುತ್ತೆ. ಅದ್ರಲ್ಲೂ ಬಡವರ ಪಾಡು ಕೇಳುವವರಿಲ್ಲ. ಲಕ್ಷ ಲಕ್ಷ ಸುರಿದು ಖಾಸಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕನಸಿನ ಮಾತು, ಅವುಗಳ ನಡುವೆ ಕೆಟ್ಟ ವ್ಯವಸ್ಥೆ, ಜನರನ್ನ ಸುಲಿಗೆ ಮಾಡುವುದು, ಹೊಲಸು ರಾಜಕೀಯ ನಡೆಸುವುದು, ಅಕ್ಷರಷಃ ಕೆಲವೊಂದು ನಗರಗಳಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದೆ. ಈ ಎಲ್ಲ ಬೆಳವಣಿಗೆಯ ನಡುವೆಯೂ ಕೆಲವರು ಪಕ್ಷ, ನಾಯಕ, ಜಾತಿ, ಧರ್ಮದ ಪರ ಮಾತನಾಡುವುದು ನಮ್ಮ ದುರಂತ.
ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಯಾರೇ ಆಗಲಿ ಜನರ ಸಂಕಷ್ಟದ ಸಮಯದಲ್ಲಿ ಅವರ ನಡುವೆಯೇ ಇರಬೇಕೇ ಹೊರತು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವುದಲ್ಲ, ನಿಜಕ್ಕೂ ಏನಾಗ್ತಿದೆ ಅನ್ನುವುದನ್ನ ಗ್ರೌಂಡ್ ಲೆವೆಲ್ ಗೆ ಬಂದು ಅರ್ಥಮಾಡಿಕೊಳ್ಳಬೇಕು. ಅಂತಹ ಒಂದೇ ಒಂದು ಕೆಲಸ ಯಾರಿಂದಲೂ ಆಗ್ತಿಲ್ಲ ಅನ್ನುವುದು ಸತ್ಯ. ರಾಜ್ಯದ ಪ್ರಮುಖ ರಾಜಕಾರಿಣಿಗಳ ಮನೆ ಮುಂದೆ “ವಿಸಿಟರ್ಸ್ ನಾಟ್ ಎಲವುಡ್” ಅನ್ನುವ ಬೋರ್ಡ್ ನೇತಾಡುತ್ತಿದೆ ವಿನಹಃ ಸಾಮಾನ್ಯರ ಕಷ್ಟವನ್ನ ಕೇಳಲು ಯಾರಿಗೂ ವ್ಯವಧಾನವಿಲ್ಲ.
ಒಂದು ಬೆಡ್, ಆಕ್ಸಿಜನ್ ವ್ಯವಸ್ಥೆ ಬೇಕು ಎಂದಾದರೆ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆಗೆ ಕೂರಬೇಕಾದ ಕೆಟ್ಟ ಸ್ಥಿತಿಗೆ ಬಂದು ತಲುಪಿಯಾಗಿದೆ. ಮೊಬೈಲ್ ನ ಎಬಿಸಿಡಿ ಗೊತ್ತಿಲ್ಲದ ಅದೆಷ್ಟೋ ಬಡವರಿಗೆ ಕೊರೊನಾ ಸೋಂಕು ತಗುಲಿದರೆ, ಅವರು ವ್ಯವಸ್ಥೆಗಾಗಿ ಆನ್ ಲೈನ್ ನಲ್ಲಿ ಏನನ್ನು ಬುಕ್ ಮಾಡಲು ಸಾಧ್ಯ.? ಬೆಡ್ ಮತ್ತೊಂದು ಪಕ್ಕಕ್ಕೆ ಇರಲಿ.. ಕೈಯಲ್ಲಿ ಹಣವಿಲ್ಲ, ಹೊಟ್ಟೆ ಹಸಿವು, ಒಂದೆಡೆ ಸೋಂಕು, ರಾಜ್ಯ, ದೇಶದ ಒಟ್ಟಾರೆ ಸ್ಥಿತಿಗತಿ ನಿಜಕ್ಕೂ ತುಂಬಾನೆ ಶೋಚನಿಯ.
ಇವುಗಳ ನಡುವೇ ಅರ್ಧ ಹೊಟ್ಟೆ ತುಂಬಿಸಿಕೊಂಡವರು ತಮ್ಮ ರಾಜಕೀಯ ನಾಯಕರ ಪರ ಬಹುಪರಾಕ್ ಎನ್ನುತ್ತಿದ್ದಾರೆ, ಅವರವರ ಧರ್ಮವೇ ಮೇಲೂ ಎಂಬಂತ ವಾದ ಮಂಡಿಸುತ್ತಿದ್ದಾರೆ. ಇವರುಗಳು ಹೆಸರು ಹೇಳುವ ಆ ನಾಯಕರು ದೈಹಿಕವಾಗಿ ಗೂಡು ಸೇರಿಕೊಂಡು ದಿನಗಳು ಉರುಳಿವೆ, ಅಲ್ಲಿಂದಲೇ ಬಡವರ ಪರ ಕಾಳಜಿ ವ್ಯಕ್ತವಾಗುತ್ತಿದೆ ವಿನಹಃ ವಾಸ್ತವಾಗಿ ಎಲ್ಲವೂ ಶೂನ್ಯ.
ಇನ್ನೂ ಪಂಚಾಯತ್ ವ್ಯವಸ್ಥೆಯಿಂದ ಹಿಡಿದು ಎಲ್ಲ ಕಡೆಯೂ ಶೇಕಡಾ 75ರಷ್ಟು ಕಳ್ಳರೆ ತುಂಬಿ ಹೋಗಿರುವುದರಿಂದ ನಾವೆಲ್ಲರೂ ನಾಟಕವನ್ನೇ ನೋಡುವ ಸ್ಥಿತಿ ಎದುರಾಗಿದೆ ಎಂದು ನೊಂದ ಮತದಾರನ ಅಳಲು.
_______________________________________
Social Distancing: Stay Home, Stay Safe & Protect Others
👆SWARUPA SANDARSHAN
ಸ್ವರೂಪ ಸಂದರ್ಶನ

Social Plugin