ಸಕ್ರಿಯ ಕೊವಿಡ್ ಪ್ರಕರಣಗಳಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಬರೆದದ್ದು.
- - - - - - - - -
ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ಕೊರೊನಾ ಮ್ಯಾನೇಜ್ಮೆಂಟ್
------
ಕರ್ನಾಟಕ ಸುದ್ದಿಯಲ್ಲಿದೆ. ಕೋವಿಡ್ ಎರಡನೇ ಅಲೆಯ ಅಬ್ಬರದ ಕಾರಣಕ್ಕೆ ಈಗ ಸಾವು-ನೋವಿನಲ್ಲಿ ಜಗತ್ತಿನ ಮುಂಚೂಣಿಯ ದೇಶ ಭಾರತ. ಭಾರತದೊಳಗೆ ಇಂದು ಕೋವಿಡ್ ಅಬ್ಬರಕ್ಕೆ ತುತ್ತಾಗಿರುವ ನಂಬರ್ ಒಂದು ರಾಜ್ಯ ಕರ್ನಾಟಕ. ಯಾಕೆ ಹೀಗಾಯ್ತು?
ಕರ್ನಾಟಕದ ಕೊವಿಡ್ ಅಂಕಿಅಂಶಗಳನ್ನು ಗಮನಿಸಿದಾಗ, ಸ್ಪಷ್ಟವಾಗಿ ಅನ್ನಿಸುವುದು, ಸರ್ಕಾರಗಳು ಮತ್ತು ಕೊವಿಡ್ ನಿರ್ವಹಣೆಯ ಹೊಣೆಹೊತ್ತವರು ತಮ್ಮ ಕರ್ತವ್ಯಪಾಲನೆಯಲ್ಲಿ ಸೋತಿದ್ದಾರೆ ಎಂದು. ಯಾವುದೇ ಯುದ್ಧವನ್ನು ಮಾಡುವಾಗ ನಮ್ಮಲ್ಲಿರುವ ಮದ್ದುಗುಂಡುಗಳ ಪ್ರಮಾಣ ನಮಗೆ ಅರಿವಿಲ್ಲದಿದ್ದರೆ ಏನಾಗುತ್ತದೆಯೋ, ಅದು ಕೊವಿಡ್ ನಿರ್ವಹಣೆಯಲ್ಲಿ ಆಗಿದೆ. ರಾಜ್ಯಕ್ಕೆ ಕೊವಿಡ್ ನಿರ್ವಹಣೆಯಲ್ಲಿದ್ದ ದೊಡ್ಡ ಸವಾಲು, ಸೀಮಿತ ಸೌಲಭ್ಯಗಳಿರುವ ರಾಜ್ಯವೊಂದು ತನ್ನ ಪ್ರಜೆಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದು. 

ದೇಶದ ಮಟ್ಟದಲ್ಲೂ, ಆರಂಭದಲ್ಲೇ ಪ್ರಧಾನಮಂತ್ರಿಗಳು ಲಾಕ್‌ಡೌನ್ ಘೋಷಿಸಿದಾಗ ದೇಶ ಊಹಿಸಿದ್ದು, ನಮ್ಮಲ್ಲಿರುವ ಮದ್ದುಗುಂಡುಗಳನ್ನು ಯುದ್ಧಸನ್ನದ್ಧಗೊಳಿಸುವ ತನಕ ಕೋಟೆಯ ಬಾಗಿಲು ಹಾಕಲಾಗುತ್ತಿದೆ ಎಂದು. ಹಾಗೆ ಬಾಗಿಲು ಹಾಕಿಕೊಂಡಾಗ ದೇಶವು ಕೊವಿಡ್ ಜಗನ್ಮಾರಿಯನ್ನು ಎದುರಿಸಲು ತನ್ನ ತಂತ್ರ-ಯೋಜನೆಗಳೊಂದಿಗೆ ಸನ್ನದ್ಧವಾಗಬೇಕಿತ್ತು. ದುರದೃಷ್ಟವಶಾತ್ ಹಾಗಾಗಲಿಲ್ಲ. ರಾಜ್ಯದಲ್ಲೂ ಸನ್ನದ್ಧತೆ ನಡೆಯಲಿಲ್ಲ. ಲಾಕ್‌ಡೌನ್ ಮಾಡುವುದೇ ಕೊರೊನಾಕ್ಕೆ ಮದ್ದು ಎಂಬಂತೆ ಬಿಂಬಿಸಲಾಯಿತು; ಇಂದು ಕೂಡ ಎರಡನೇ ಅಲೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಿರುವವರು ಅದನ್ನೇ ಹೇಳತೊಡಗಿದ್ದಾರೆ.

ಬದಿಗೆ ಸರಿದ ವಿಜ್ಞಾನ
ಆರಂಭದಿಂದಲೇ ವೈದ್ಯಕೀಯ ವಿಜ್ಞಾನ ತನ್ನ ಮಿತಿಯೊಳಗೆ ತನಗೆ ಗೊತ್ತಾದದ್ದದ್ದನ್ನು ಹೇಳುತ್ತಲೇ ಬಂದಿದೆ.
>> ಕೊರೊನಾ, ಅದು ಸೋಂಕಿದವರಿಗೆಲ್ಲರಿಗೂ ಮಾರಣಾಂತಿಕ ಕಾಯಿಲೆ ಅಲ್ಲ. ಅದರಲ್ಲಿ ಸಾವಿನ ಪ್ರಮಾಣ ಜಾಗತಿಕವಾಗಿ 2%ಗಿಂತ ಕಡಿಮೆ.
>>ವೈರಸ್‌ಗೆ ಚಿಕಿತ್ಸೆ ಎಂಬುದಿಲ್ಲ. ಅದು ಒಂದು ನಿರ್ದಿಷ್ಟ ಸಮಯಾವಧಿಯಲ್ಲಿ ಸ್ವಯಂ ಗುಣವಾಗಬಲ್ಲ ಕಾಯಿಲೆ. ಯಾವುದೇ ವೈರಲ್ ಸೋಂಕಿನಲ್ಲಿ ಚಿಕಿತ್ಸೆ ಕೊಡುವುದು ಕಾಣಿಸಿಕೊಳ್ಳುವ ರೋಗಲಕ್ಷಣಗಳಿಗೆ ಮಾತ್ರವೇ ಹೊರತು, ವೈರಸ್ ನಾಶಕ್ಕಲ್ಲ.
>>ಕೊರೊನಾ ವೈರಸ್ ಯಾರಿಗೆ ಗಂಭಿರವಾದ ಹಾನಿ ಮಾಡಲಿದೆಯೋ ಅಂತಹ ಜನರನ್ನು (ವೃದ್ಧರು, ಮಧುಮೇಹಿಗಳು, ರಕ್ತದೊತ್ತಡ, ಶ್ವಾಸಕೋಶಗಳ ದೀರ್ಘಕಾಲಿಕ ತೊಂದರೆ, ಬೇರೆ ರೋಗನಿರೋಧಕ ಶಕ್ತಿ ಕುಂದಿರುವವರು) ಸಂರಕ್ಷಿಸಿದರೆ, ಜೀವಹಾನಿಯನ್ನು ಕನಿಷ್ಠಗೊಳಿಸಿಕೊಳ್ಳಬಹುದು.
>>ಕೊರೊನಾ ವೈರಸ್ ಹೊಸದಲ್ಲ. ಅದು ಅನಾದಿಯಿಂದಲೂ ಇದೆ. ಅದನ್ನು ಪೂರ್ಣ ಇಲ್ಲದಾಗಿಸುವುದೂ ಸಾಧ್ಯವಿಲ್ಲ. ಈ ಹಿಂದೆ ಬಂದ ಸಾರ್ಸ್, ಮರ್ಸ್ ಇತ್ಯಾದಿ ಕೊರೊನಾ ವೈರಸ್‌ಗಳ ಹಾಗೆಯೇ ಇದೂ ಕೂಡ. ಇದು ಇನ್ನು ಮುಂದೆಯೂ ಮ್ಯುಟೇಷನ್ ಆಗುತ್ತಲೇ ಇರುತ್ತದೆ. ಅದು ಅದರ ಸಹಜ ಗುಣ.
>>ಲಾಕ್‌ಡೌನ್ ಮಾಡಿಕೊಳ್ಳುವುದು, ಹಠಾತ್ ಬಂದೆರಗಿದ ಜಗನ್ಮಾರಿಯ ವಿರುದ್ಧ ಹೋರಾಟಕ್ಕೆ ಸನ್ನದ್ಧವಾಗುವುದಕ್ಕಾಗಿಯೇ ಹೊರತು, ಲಾಕ್‌ಡೌನ್ ಮಾಡಿಕೊಳ್ಳುವುದೇ ರೋಗಕ್ಕೆ ಮದ್ದಲ್ಲ.

ಹೊಣೆ ಹೊತವರ ಮೈಮರೆವು
ಐಟಿ ಹಬ್ ಆಗಿರುವ ಕಾರಣಕ್ಕೆ ಇದು ದೇಶದ ಅತಿದೊಡ್ಡ ವಲಸೆ ಉದ್ಯೋಗಸ್ಥರ ನಗರವಾಗಿರುವ ಬೆಂಗಳೂರು, ಕಳೆದ ನಾಲ್ಕೈದು ತಿಂಗಳು ಅವಧಿಯಲ್ಲಿ ವಿಜ್ಞಾನ ಕೊಟ್ಟ ಮುನ್ನೆಚ್ಚರಿಕೆಗಳನ್ನು ಮರೆತು ವ್ಯವಹರಿಸಿದ್ದು, ಇಂದು ಕರ್ನಾಟಕ ಕೊವಿಡ್ ಸಾವು-ನೋವುಗಳಲ್ಲಿ ಮುಂಚೂಣಿಯ ರಾಜ್ಯವಾಗಲು ಮುಖ್ಯ ಕಾರಣ. ಕೊವಿಡ್ ಪ್ರಕರಣಗಳ ನಿರ್ವಹಣೆಯ ಹೊಣೆ ಹೊತ್ತವರಿಗೆ ಟೆಸ್ಟ್-ಟ್ರೇಸ್-ಟ್ರೀಟ್ ಸೂತ್ರವಾಗಲೀ, ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಸಿದ್ಧಪಡಿಸಿದ ಆರೋಗ್ಯ ಸೇತುವಾಗಲೀ ನೆನಪೇ ಆಗಲಿಲ್ಲ. ಲಸಿಕೆಯಂತೂ ಮೊಣಕೈಗೆ ಹಚ್ಚಿದ ಬೆಲ್ಲದಂತಾಯಿತು. ಮದುವೆ-ಮೇಳ-ಚುನಾವಣೆ ಎಂದು ಸಾರ್ವಜನಿಕ ಜಂಗುಳಿಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಪ್ರಕರಣಗಳು ಏರತೊಡಗಿದಂತೆ ಜನ, ರಾಜ್ಯದೊಳಗೆ ತಮ್ಮ ಮನೆಗಳಿಗೆ ಹೊರಟು ನಿಂತರು, ಹೊರರಾಜ್ಯಗಳಿಂದಲೂ ಜನ ತಾಯ್ನೆಲಕ್ಕೆ ಮರಳಿದರು; ಹಾಗೆ ಮರಳಿದವರು ರಾಜ್ಯದ ಉದ್ದಗಲಕ್ಕೂ ವ್ಯವಸ್ಥಿತವಾಗಿ ಸೋಂಕು ಹರಡಿದರು.

ಕಳೆದ ಎಂಟು ತಿಂಗಳುಗಳಿಂದ ಆರೋಗ್ಯ ವ್ಯವಸ್ಥೆಯ ವಿಸ್ತರಣೆಗೆ ಕೊವಿಡ್ ಹೊಣೆಹೊತ್ತವರು ಬದ್ಧತೆ ತೋರಿಸಲಿಲ್ಲ. ಆಕ್ಸಿಜನ್ ಹಾಸಿಗೆಗಳ ಹೆಚ್ಚಳ, ಆಕ್ಸಿಜನ್, ಔಷಧಿ, ವಿಕೋಪದ ಸ್ಥಿತಿಯಲ್ಲಿ ನಿರ್ವಹಣಾ ಯೋಜನೆ ಯಾವುದನ್ನೂ ಸಿದ್ಧಪಡಿಸಿಟ್ಟುಕೊಳ್ಳಲಿಲ್ಲ. ಕಡೆಗೆ, ಆರ್ಥಿಕವಾಗಿ-ಸಾಮಾಜಿಕವಾಗಿ ಸಂಕಷ್ಟಕ್ಕೀಡಾಗಿರುವ ಬಡಪಾಯಿಗಳತ್ತಲೂ ಗಮನ ಹರಿಸಲಿಲ್ಲ. ಹಾಗಾಗಿ ಈಗ ಇರುವ ಸೌಲಭ್ಯದ ಗಾತ್ರವನ್ನು ಮೀರಿ, ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಸೋಂಕಿತರ ಒಳಹರಿವು ಆರಂಭ ಆಗಿದೆ. ಸಹಜವಾಗಿಯೇ ಅದನ್ನು ನಿರ್ವಹಿಸಬಲ್ಲ ಶಕ್ತಿ ಇರದ ವ್ಯವಸ್ಥೆ ಶರಣಾಗತಿ ಸೂಚಿಸಿದೆ. ಇದು ಕರ್ನಾಟಕ ಇಂದು ಕೊವಿಡ್ ಪ್ರಕರಣಗಳಲ್ಲಿ ನಂಬರ್ ಒಂದು ಸ್ಥಾನಕ್ಕೇರಲು ಬಹುಮುಖ್ಯ ಕಾರಣ.
ಈ ಗೊಂದಲದ ಸ್ಥಿತಿಯನ್ನು ಭ್ರಷ್ಟರು, ಕಾಳಸಂತೆ ಕೋರರು, ಲಾಭಬಡುಕರು ತಮ್ಮ ಲಾಭಕ್ಕೆ ಬಳಸಿಕೊಂಡದ್ದು, ಸೋಂಕಿತರು-ಬಡಪಾಯಿಗಳು ಇನ್ನಷ್ಟು ಕಂಗೆಡುವಂತೆ ಮಾಡಿತು. ಜನ ಕೊರೊನಾಕ್ಕೆ ಸಂಬಂಧಿಸಿದಂತೆ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡು, ಮನೆಯಲ್ಲೇ ಉಳಿದರು. ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗತೊಡಗಿದರು. ಇದು ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡಕ್ಕೆ ಕಾರಣವಾಯಿತು.

ಇಷ್ಟು ಮಾಡಿದರೆ ಸಾಕಿತ್ತು
ರಾಜ್ಯದಲ್ಲಿ ಕೊವಿಡ್ ಹೊಣೆ ಹೊತ್ತವರು ವಿಜ್ಞಾನ ಹೇಳಿದ್ದರಲ್ಲಿ ವಿಶ್ವಾಸ ಇರಿಸಿ, ಸ್ವಲ್ಪ ಪ್ರಜ್ಞಾವಂತಿಕೆ ತೋರಿಸಿದ್ದರೆ, ಕೊಮಾರ್ಬಿಡಿಟಿ ಇರುವವರನ್ನು ರಕ್ಷಿಸಿ, ಉಳಿದವರನ್ನು ತಮ್ಮ ಪಾಡಿಗೆ ತಮ್ಮ ಚಟುವಟಿಕೆಗಳನ್ನು ಮಾಡಿಕೊಂಡಿರಲು ಬಿಡಬಹುದಿತ್ತು. ಆಗ ಹೆಚ್ಚೆಂದರೆ ಬೇರೆ ಫ್ಲೂ ಜ್ವರಗಳಂತೆಯೇ, ಈ ಜ್ವರವೂ ಬಂದು ಹೋಗುತ್ತಿತ್ತು. ಚಿಕಿತ್ಸೆ ಅಗತ್ಯ ಇರುವವರಿಗೆ ಚಿಕಿತ್ಸೆಯೂ ಸುಲಭ ಲಭ್ಯ ಆಗುತ್ತಿತ್ತು ಮತ್ತು ತೀವ್ರ ನಿಗಾ ಘಟಕಗಳಲ್ಲೂ ಒತ್ತಡದ ಕಾರಣಕ್ಕೆ (ಆಕ್ಸಿಜನ್/ವೆಂಟಿಲೇಟರ್ ಕೊರತೆ) ಜೀವಹಾನಿ ಆಗುತ್ತಿರಲಿಲ್ಲ.
ಈಗ ಉಂಟಾಗಿರುವ ಸಾವು-ನೋವುಗಳಿಗೆ ಸ್ಪಷ್ಟ ಕಾರಣ, ಸೀಮಿತ ಆರೋಗ್ಯ ವ್ಯವಸ್ಥೆಯ ಮೇಲೆ ಉಂಟಾದ ಒತ್ತಡದಿಂದಾಗಿ ಅದು ಕುಸಿದಿರುವುದು. ಸಾವು-ನೋವಿಗೆ ವ್ಯವಸ್ಥೆಯ ಪರ ಇರುವವರು, ಮಾಧ್ಯಮಗಳು ವರದಿ ಮಾಡುತ್ತಿರುವಂತೆ “ಡಬಲ್ ಮ್ಯೂಟೆಂಟ್” ಕೊರೊನಾ ಕಾರಣ ಅಲ್ಲ!

#COVID19