ಗಾಂಧಿ ಬಜಾರಿನ ಗಲ್ಲಿಗಲ್ಲಿಗಳಲಿ ಮನಸು ನೆಟ್ಟವರೇ
ಸಂಜೆ ಐದರ ಬಿರುಮಳೆಯಲಿ ತೊಯ್ದು ತೊಪ್ಪೆಯಾದವರೇ
ನವೋಲ್ಲಾಸದಿಂದ ಅತ್ಯುತ್ಸಾಹದಲಿ ನಿತ್ಯೋತ್ಸವ ಆಚರಿಸಲು ಸುಮಹೂರ್ತ ಇಟ್ಟವರೇ
ಕರೋನಾ ಕಾಡುತ್ತಿರುವ ಕಹಿದಿನಗಳಲ್ಲೇ
ಎತ್ತ ಹೋಗಿಬಿಟ್ಟಿರಿ ದಿಢೀರನೇ ಚಾಚಾ!
ಎತ್ತ ಹೋದಿರಿ ಕಾರಣವ ತಿಳಿಸದೇ?
ನಾರಾಯಣತ್ವದಿ ನೇತು ಬಿದ್ದ ನಮ್ಮೊಳಗೆ ಕವಿತ್ವದ ಹುಚ್ಚು ಹಚ್ಚಿದ ನೀವೇ ಅಚ್ಚುಮೆಚ್ಚು
ತುರ್ತಾಗಿ ಹೊರಡುವ ಜರೂರತ್ತೇನಿತ್ತು ಚಾಚಾ?
ಮೊನ್ನೆಯಷ್ಟೇ ಅಲ್ಲವೇ ಸರ್ವೇಂದ್ರಿಯಗಳಿಗೂ ನೀವು ಡ್ರಿಲ್ಲು ಮಾಡಿಸಿಕೊಂಡಿದ್ದು!
ಟಾಕು ಟೀಕಿನ ಕೋಟು ಪ್ಯಾಂಟು ಧರಿಸಿ ಪಾರ್ಕಿಗೆ ವಾಕಿಂಗ್ ಹೋದವರು
ದಾರಿಯಲ್ಲಿ ಎದುರಾದ ರಂಗಮಂದಿರದಲ್ಲಿ ಸಾಹಿತ್ಯ ಮಂಟಪದಲ್ಲಿ ಚರ್ಚೆಗೆ ಕೂತುಬಿಟ್ರಿ
ಮುಂದಿನ ಪರಿಣಾಮವೇನಾಯ್ತು ಗೊತ್ತಾ?
ಗೋಷ್ಟಿಗೆ ಬಂದಿದ್ದ ನೂರರಲಿ ತೊಂಬತ್ತಾರು ತೂಕಡಿಸುತ್ತಿದ್ದ ಸಭಿಕರು (ಉಳಿದ ನಾಲ್ವರು ಆಯೋಜಕರು)
ದಡಬಡಿಸಿ ಎದ್ದು ಹತ್ತಿರದ ಸಿಕ್ಕ ಸಿಕ್ಕ ಪುಸ್ತಕದಂಗಡಿಗಳಿಗೆ ಓಡಿದರು
ಅವರೆಲ್ಲರೂ ಈಗ ಏಕಾಂತ ಲೋಕಾಂತ ಪದ್ಯಗಳೊಳಗಿನ ವೇದಾಂತ ವಿಭ್ರಾಂತ ಸುಖಾಂತ ಎನ್ನುತ್ತಾ
ನಖಶಿಖಾಂತ ಚಿಂತನ ಮಂಥನದಲಿ ತೊಡಗಿದ್ದಾರೆ
ಒಂದು ಪೀಳಿಗೆಯನ್ನೇ ಓದುಗರನ್ನಾಗಿಸಿದ ಅಪವಾದ ಹೊರಲಾರಿರಾ?
ಉಳಿದದ್ದೇನೆ ಇರಲಿ ನೀವು ತುಂಬಾ ರಸಿಕರಪ್ಪಾ!
ಆಗುಂಬೆಯವಳ ಕೆನ್ನೆ ತುಟಿಗಳ ಮೇಲೆ ಕಣ್ಣು ನಟಿಯ ಸಾರ್ವಜನಿಕ ಕಟಿಯ ಒನಪು
ಕೊಪ್ಪದವಳ ಮೈಬಣ್ಣದ ಹೊಳಪು ಮೈಗಂಧದ ಕಂಪು
ಹೆಗ್ಗಡತಿಯರ ಗತ್ತು ಗೈರತ್ತಿನ ಬಿಂಕದ ಝಳಪು
ಸಕೀನಾಳ ಮಂಡಿ ಮೊಣಕಾಲಿನ ತಳುಕು
ನಿಮಗೆ ಸದಾ ಮನೆಜವಾನಿಯದ್ದೇ ನೆನಪು
ಮಲೆಯಾಳಿ ಮಂಗಳೆಯನ್ನೂ ಬಿಡದೇ
ಎಡಬೈತಲೆ, ತುಂಬು ತುರುಬುಗಳನೆಲ್ಲಾ ವರ್ಣಿಸುವ ನಿಮ್ಮನ್ನು ಪೋಲಿ ಎಂದೆನ್ನುತ್ತೀವಾ! ಹಾಗಂದವರು ಅರಸಿಕರು
ನಿಮ್ಮೊಡನೆ ಹಲಕಾಲ ಇದ್ದವರು ನಿಮ್ಮಂತಾಗಲಿಲ್ಲ ನೋಡಿ ಚಾಚಾ!
ಜಯನಗರದ ಹದಿನಾರನೆ ಬೀದಿ ಹುಡುಕಿಕೊಂಡು ಅಂಡಲೆಯಲಿಲ್ಲ
ಮಡಿವಂತ ಸಂಸಾರಸ್ಥರ ಕೇರಿಯಲ್ಲಿ ವೇಶ್ಯಾಗೃಹವ ಬೆಟ್ಟು ಮಾಡಿ ತೋರಿಸಲಿಲ್ಲ
ಮುಸುಕ ಮರೆಯಲ್ಲಿ ತಮ್ಮ ವಾಂಛೆಗಳನ್ನು ಅದುಮಿಟ್ಟು; ಗೌಪ್ಯ ಅಜೆಂಡಾಗಳನು ಅಡಗಿಸಿಕೊಂಡ ಮುಖವಾಡಗಳಿಗೆ
ನಿಮ್ಮ ಮೌಲ್ಯ ಮಹತ್ವ ತಿಳಿಯಲಿಲ್ಲ
ಹಾಗಾಗೇ ನೀವು ರಾಷ್ಟ್ರ ಕವಿಯಾಗಲಿಲ್ಲ
ಪದವಿ ಪಟ್ಟ ಪ್ರಚಾರ ಬಿರುದಾವಳಿ ನಾಮಾಂಕಿತ ಹಲಗೆಗಳ ಬಯಸದೇ ದೂರ ಉಳಿದಿರಿ
ಬಾಜ ಭಜಂತ್ರಿ ಶಂಕ ತುತ್ತೂರಿ ಊದುವ ಚಾನೆಲ್ಲುಗಳಿಗೆ ಬೆನ್ನು ತೋರಿಸಿದಿರಿ
'ನನ್ನೆದುರೆ ನನ್ನ ನೆತ್ತರ ಚೆಲ್ಲಿ ನನ್ನ ರಾಷ್ಟ್ರೀಯತೆಯ ಧಾತು ಹುಡುಕಬೇಡಿ
ನಾನದನ್ನು ಹುಸಿನಗೆಯಲ್ಲಿ ಎದುರಿಸಲಾರೆ'
ಎಷ್ಟು ಖಡಾಖಂಡಿತವಾಗಿ ನುಡಿದುಬಿಟ್ರಿ!
ನಿಮ್ಮಂತೆ ಬಾಗದೇ ಬದುಕುವುದು ಬಲು ಕಷ್ಟ ಚಾಚಾ!
'ಉದಯದನುಭವಗಳನು ಆಸ್ವಾಧಿಸಲು ಭಾಗ್ಯವಿರಬೇಕು'
ನೀವಂದಿದ್ದು ನಿಜ ಚಾಚಾ
ಕನ್ನಡ ಮಣ್ಣನು ನುಡಿಯನು ಜಲವನು
ಅಮೃತ ತೀರ್ಥ ಪಾವನ ಸದೃಶವೆಂದವರು ನೀವು
ನಿಮ್ಮತನದ ನೆರಳಲಿ ನಮ್ಮ ನೆರಳುಗಳ ಹಿಂಬಾಲಿಸ ಹೊರಟಿದ್ದು ನಮ್ಮಗಳ ಸುಕೃತ
ನಿಜ ನಿಜ! ಎಲ್ಲರಿಗು ದೊರಕಲಾರದಿಂತಹ ಸ್ವತ್ತು
ಅಖಂಡ ಕನ್ನಡ ಸಾರಸ್ವತ ವ್ಯಾಪ್ತಿಗೆ ನೀವೊಂದು ಅನರ್ಘ್ಯ ಮುತ್ತು
ನಮ್ಮೊಳಗೆ ಅವಿತಿರುವ ನಿಮಗೆ ಅಲ್ವಿದಾ ಹೇಳಲಾರೆವು ಚಾಚಾ!
#ಕಳೆದವರ್ಷನಮ್ಮನ್ನುತೊರೆದನಿಸಾರ್_ನುಡಿನಮನ
______________________________________
Social Distancing: Stay Home, Stay Safe & Protect Others
👆SWARUPA SANDARSHAN
ಸ್ವರೂಪ ಸಂದರ್ಶನ

Social Plugin