ನೀವೇನು ಚಿತ್ರ ಉಳಿಸಿ ಹೋಗ್ತೀರಿ ಸರ್ಕಾರ್?
- - - - - - - -
1918ರಲ್ಲಿ ಸ್ಪ್ಯಾನಿಷ್ ಫ್ಲೂ ಜಗನ್ಮಾರಿಯಾಗಿ ಹರಡಿದಾಗ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು, ಆರೋಗ್ಯ ಸೌಕರ್ಯಗಳು ತೀರಾ ತೀರಾ ಕಡಿಮೆ ಇದ್ದವು. ವಿಜ್ಞಾನವೂ ಸೀಮಿತ. ಎರಡು ಕೋಟಿಗೂ ಮಿಕ್ಕಿ ಜನ ತೀರಿಕೊಂಡರು. ಆದರೆ, ಅದರೊಳಗೇ ಜನ ಮತ್ತು ವ್ಯವಸ್ಥೆ ಸೇರಿ ಒಂದು ವ್ಯವಸ್ಥಿತವಾದ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ಅಂದಿನ ಚಿತ್ರಗಳು ನಮಗೆ ತೋರಿಸುತ್ತಿವೆ.

ಇಲ್ಲಿಂದ 100ವರ್ಷ ಮುಂದೆ ಇನ್ನೆಂದಾದರೂ ನಿಮ್ಮ ಮೊಮ್ಮಕ್ಕಳೋ ಮರಿಮಕ್ಕಳೋ 2021ರ ಕೋವಿಡ್ ಜಗನ್ಮಾರಿಯ ಕಾಲದಲ್ಲಿ ನಮ್ಮ ಮೋದಿಅಜ್ಜಯ್ಯ, ಯಡಿಯೂರಪ್ಪಜ್ಜಯ್ಯ (ಹಾಗೇ ಎಲ್ಲ ಜನಪ್ರತಿನಿಧಿಗಳು. ಎಲ್ಲರ ಹೆಸರೂ ಸೇರಿಸಿಕೊಳ್ಳಿ) ಏನು ಮಾಡಿದ್ದರು ಎಂದು ಇಂಟರ್ನೆಟ್‌ನಲ್ಲಿ ಹುಡುಕಾಡಿದರೆ ಅವರಿಗೆ ಎಂತಹ ಚಿತ್ರ ತೋರಿಸುತ್ತೀರಿ ಎಂದು ನಿರ್ಧರಿಸಿಕೊಳ್ಳಿ. ಈಗಂತೂ ಇಂಟರ್ನೆಟ್‌ನಲ್ಲಿ ಮುಂದಿನ ಜನಾಂಗ ನಿಮ್ಮ ಜನ್ಮ ಜಾಲಾಡುವಂತಹ ಚಿತ್ರಗಳು, ವೀಡಿಯೊಗಳು ಓಡಾಡುತ್ತಿವೆ.

ನನ್ನಂತವರಿಗೆ ಇಂದು ದಿನ ಬೆಳಗಾದರೆ ನಿಮ್ಮನ್ನು ದೂರದೇ ಬೇರೆ ದಾರಿ ಉಳಿದಿಲ್ಲ. ಕನಿಷ್ಠ ನಿಮ್ಮದೇ ಮೊಮ್ಮಕ್ಕಳು-ಮರಿಮಕ್ಕಳು ನಿಮಗೆ ಹಿಡಿಶಾಪ ಹಾಕುವ ಸ್ಥಿತಿ ತಂದುಕೊಳ್ಳಬೇಡಿ.

ಒಂದು ಸಂಗತಿ ಗಮನಿಸಿದ್ದೀರಾ?
1918ರಲ್ಲಿ, ಅಂತಹ ಭಯಾನಕ ಸ್ಥಿತಿಯಲ್ಲೂ ಹಳ್ಳಿಹಳ್ಳಿಗಳು ಒಂದಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ್ದವು. ಈವತ್ತು ಜನ (ನಿಮ್ಮ ಭಕ್ತರನ್ನು, ಚೇಲಾಗಳನ್ನು ಬಿಟ್ಟು ಉಳಿದವರು) ಯಾಕೆ ನಿಮ್ಮ (ರಾಜಕಾರಣಿಗಳ) ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂದು ಯೋಚಿಸಿದ್ದೀರಾ? ನೀವು ಕೊರೊನಾ ಹೆಸರಲ್ಲಿ ಅಜೀರ್ಣ ಆಗುವಷ್ಟು ದೋಚುತ್ತಿರುವುದು ಕಾಣಿಸದಷ್ಟು ಮೂರ್ಖರಲ್ಲ ಜನ.

 ಕಳೆದ ವರ್ಷ ಕೊರೊನಾ ಮೊದಲ ಬಾರಿಗೆ ಸದ್ದುಮಾಡಿದಾಗ ದೇಶದಾದ್ಯಂತ ಜನ ಒಗ್ಗಟ್ಟಾಗಿ ಎದ್ದುನಿಂತಿದ್ದರು. ಈಗ ಎರಡನೇ ಅಲೆಗೆ ಯಾಕೆ ಆ ಉತ್ಸಾಹ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ನಿಮ್ಮಂತಹ ಮೂರ್ಖರು ಬೇರಾರೂ ಇಲ್ಲ. ಜನ ಒಗ್ಗಟ್ಟಾಗಿ ಶ್ರಮ ಹಾಕಿದರೆ, ನೀವು ಅಲ್ಲೂ ಕಾಸು ಹೆಕ್ಕಿತಿನ್ನುವವರು, ಪ್ರತಿಯೊಂದು ದುರಂತ ಕೂಡ ನಿಮಗೆ ಕಾಂಚಾಣ ಎಂಬುದು ಜನಕ್ಕೆ ಗೊತ್ತಾಗಿದೆ. ಹಾಗಾಗಿ ಈಗ ಊರೆಲ್ಲ ನಿಮಗೆ ಹಿಡಿಶಾಪ ಹಾಕುವವರೇ.
ಇನ್ನೂ ಕಾಲ ಮಿಂಚಿಲ್ಲ. ಒಂದೋ ಸರಿಯಾಗಿ; ಇಲ್ಲವೇ ನಾಶವಾಗಿ.
_______________________________________

Social Distancing: Stay Home, Stay Safe & Protect Others
👆SWARUPA SANDARSHAN
      ಸ್ವರೂಪ ಸಂದರ್ಶನ