ಚಾರಾಣೆ ಕೀ “ಡೇಟಾ”; ಬಾರಾ ಆಣೇ ಕಾ “ಬ್ಯುಸಿನೆಸ್”
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದ ಸಂಗತಿಯ ವಿಚಾರದಲ್ಲಿ ಪ್ರಾಮಾಣಿಕವಾಗಿ ಅವರನ್ನು ಅಭಿನಂದಿಸುತ್ತೇನೆ.
- - - - - - - -- 
  ನಿನ್ನೆ ಸಂಸದ ಸೂರ್ಯ ಮತ್ತು ಅವರ ತಂಡದ “ಬೆಡ್ ಬ್ಲಾಕಿಂಗ್” ಹಗರಣದ ಕಾರ್ಯಾಚರಣೆ ಒಂದು ಪಂಡೋರಾ ಬಾಕ್ಸ್ ತೆರೆದಂತಿದೆ.. ಆ ಕುರಿತು ಈ ಲೇಖನ .
ಕೊರೊನಾ ಬೆಂಕಿಯಲ್ಲಿ ಬೀಡಿ ಹಚ್ಚಿಕೊಳ್ಳುವ, ಚಹಾ ಕಾಯಿಸಿಕೊಳ್ಳುವ ಮತ್ತು ಮೃಷ್ಟಾನ್ನ ಭೋಜನವನ್ನೇ ಬೇಯಿಸಿಕೊಳ್ಳುವ ಜನಗಳು, ವ್ಯವಸ್ಥೆಗಳು ತಲೆಯಿಂದ ಬುಡದ ತನಕವೂ ದೊಡ್ಡ ಸಂಖ್ಯೆಯಲ್ಲಿವೆ. ಸರ್ಕಾರಿ ಡೇಟಾ ಹೀಗೆ “ಔಟ್ ಸೋರ್ಸ್” ಆಗುವುದು ಮತ್ತದರ ಅಪಾಯಗಳ ಅರಿವಿರುವ ಯಾವುದೇ ಸರ್ಕಾರ ಇಂತಹ ತೀರ್ಮಾನಗಳಿಗೆ ಇಳಿಯುವುದಿಲ್ಲ. ಸರ್ಕಾರ ತುರ್ತಾಗಿ ಇಂತಹ ಡೇಟಾಗಳನ್ನು ಹೊರಗೆ ಸೋರಿಹೋಗದಂತೆ ಪ್ರತಿಬಂಧಿಸದಿದ್ದರೆ ನಾಳೆ “ಬೆಡ್ ಬ್ಲಾಕಿಂಗ್” ಅಲ್ಲ “ಲೈಫ್ ಬ್ಲಾಕಿಂಗ್” ಗಾತ್ರದ ಹಗರಣಗಳು ತಲೆ ಎತ್ತಲಿವೆ.

ಒಬ್ಬ ಸಂಶೋಧಕರಿಗೆ ನ್ಯಾಯವಾದ ಹಾದಿಯಲ್ಲಿ ಒಂದು ವೈದ್ಯಕೀಯ ಸಂಶೋಧನೆ ಮಾಡಬೇಕಿದ್ದರೆ, ಅದರ ರೋಗ-ರೋಗಿ ಸಂಬಂಧಿ ಡೇಟಾ ದೊರಕಬೇಕಿದ್ದರೆ, ಆಸ್ಪತ್ರೆ, ನೈತಿಕತೆ ಸಮಿತಿ, ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಆಫ್ ಇಂಡಿಯಾ (CTRI) ಅನುಮತಿ ಬೇಕು, ಅದಾಗಿ ಸಿಗುವುದು ಕೇಳಿದ ಡೇಟಾ ಮಾತ್ರ.

ಆದರೆ, ಸದ್ಯದ ಸರ್ಕಾರಿ ವ್ಯವಸ್ಥೆಯಲ್ಲಿ ಯಾರಿಗೆ ಬೇಕಾದರೂ ಹೀಗೆ ಡೇಟಾ ಉಚಿತವಾಗಿ ಸಿಗುತ್ತದೆ. ಈವತ್ತು ಬೆಡ್ ಲಭ್ಯತೆಯನ್ನು ಮಾರಿ ಕಾಸು ಮಾಡಿಕೊಳ್ಳಲು ಸಾಧ್ಯವಿದೆ ಎಂದಾದರೆ ಅಂತಹದೇ ನೂರಾರು ಡೇಟಾಗಳಿಗೆ ಅಂತಹ “ಔಟ್ ಸೋರ್ಸ್” ಕೆಲಸಗಾರರಿಗೆ ಪ್ರವೇಶ ಇರುತ್ತದೆ.

ಸಣ್ಣ ಒಂದು ಉದಾಹರಣೆ ಕೊಡ್ತೇನೆ. 
ಈಗ ದೇಶದಾದ್ಯಂತ ಲಸಿಕೆ ಕೊಡ್ತಿದಾರಲ್ಲ, ಆ ಲಸಿಕೆ ಡೇಟಾದ ಜೊತೆ ಯಾರಿಗೆಲ್ಲ ಮಧುಮೇಹ ಇದೆ ಎಂಬ ಮಾಹಿತಿ ಕೂಡ ಇತ್ತಲ್ಲ! ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಬಳಿಕ “60 ದಾಟಿದ ಕೊ-ಮಾರ್ಬಿಡಿಟಿ ಇರುವವರಿಗೆ (ಅರ್ಥಾತ್ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಸಿಒಪಿಡಿ ಇತ್ಯಾದಿ) ಲಸಿಕೆ” ಎಂದು ಪ್ರಕಟಿಸಿದರಲ್ಲ, ಆ ಸಮಯದಲ್ಲಿ ಒಟ್ಟುಗೂಡಿದ ಡೇಟಾ ಒಂದು ಚಿನ್ನದ ಗಣಿ. ನಮಗೆ-ನಿಮಗೆ ಅಲ್ಲ. ಯಾವುದೇ ಔಷಧಿ ತಯಾರಿಕಾ ಕಂಪನಿಗೆ ಅದು ಇನ್ನು ಇಪ್ಪತ್ತು ವರ್ಷ ಚಿನ್ನದ ಮೊಟ್ಟೆ ಇಡಬಲ್ಲ ಕೋಳಿಫಾರ್ಮ್!

ಇಂತಹ ನೂರಾರು “ಕಳ್ಳತನಕ್ಕೆ ಲಭ್ಯವಿರುವ” ಡೇಟಾಗಳ ಉದಾಹರಣೆ ಕೊಡಬಹುದು. ಸರ್ಕಾರ ಹಳೆಯ ಜಮಾನಾದ್ದಾಗಿರಬಹುದು, ಆದರೆ ಹೊರಗೆ ಫಾರ್ಮಾ ಕಂಪನಿಗಳು, ಡೇಟಾಮೈನಿಂಗ್ ಕನ್ಸಲ್ಟಂಟ್‌ಗಳು AI (ಕೃತಕ ಬುದ್ಧಿಮತ್ತೆ) ಯುಗದಲ್ಲಿದ್ದಾರೆ.
ಕೋಟೆ ಎಷ್ಟು ಸೂರೆ ಹೋಗಿಯಾಗಿದೆಯೋ ಗೊತ್ತಿಲ್ಲ. ಬೆಡ್ಡು ಲಭ್ಯತೆಯನ್ನೇ ಮಾರುತ್ತಾರಂತೆ, ಕಾಸು ಸಿಗುತ್ತದೆಂದಾದರೆ ಲಸಿಕೆ ಪಡೆದವರ ಪಟ್ಟಿಯನ್ನು ಮಾರಲಾರರೆ?
 ಈ ಡೇಟಾದಲ್ಲಿ ಬೆಡ್ಡಿನ ಹಾಗೆ ಜೀವ ತೆಗೆಯುವಂತಹದೂ ಏನಿಲ್ಲ!!

ಸರ್ಕಾರಕ್ಕೆ ನಿಜಕ್ಕೂ ತನ್ನ ಕಚ್ಚೆ ಭದ್ರಪಡಿಸಿಕೊಳ್ಳಬೇಕೆಂಬ ಮನಸ್ಸಿದ್ದರೆ, ಈ ಡೇಟಾಗಳ ನಿರ್ವಹಣೆಗೆ ಸುಸೂತ್ರ ಕಾನೂನು; ವ್ಯವಸ್ಥೆ; ಭದ್ರತೆ ಆಗಲಿ.

#GOVIDIOTS #Data #ನಮ್ದೇಕತೆ
Social Distancing: Stay Home, Stay Safe & Protect Others
👆SWARUPA SANDARSHAN
      ಸ್ವರೂಪ ಸಂದರ್ಶನ