ಈ ಜೀವಗಳನ್ನು ಉಳಿಸಲು ಏನಾದರೂ ಮಾಡಲು ಸಾಧ್ಯವಿದೆಯೆ?


- - - - - - - - - -
ನಿನ್ನೆಯಿಂದ ಬಹಳ ಡಿಸ್ಟರ್ಬ್ ಮಾಡುತ್ತಿರುವ ಸುದ್ದಿ ಇದು.
ಪ್ರತಿದಿನ ನೂರಾರು ಮಂದಿ ಸಾಯುತ್ತಿದ್ದಾರೆ; ಎಲ್ಲೋ ಯಾರೋ ತಮ್ಮವರ ಶವ ಪಡೆಯಲಿಲ್ಲ; ಯಾರೋ ಮೂರನೆಯವರು ಶವಸಂಸ್ಕಾರ ಮಾಡಿದರು; ಮಗ ತನ್ನ ತಂದೆಯ ಶವ ಬೇಡ ಹಣ-ಎಟಿಎಂ ಕಾರ್ಡ್ ಕೊಡಿ ಎಂದ… ಇದೆಲ್ಲ ಸುದ್ದಿಯಾಗಿ ಕೇಳಿ ಕೇಳಿ ಒಂದು ವಿಧದ “ನಂಬ್‌ನೆಸ್” ಬಂದುಬಿಟ್ಟಿದೆ. 
ಈಗ ನಮ್ಮ ಸಂಸ್ಕಾರವಂತ, ಬುದ್ಧಿವಂತ ಜಿಲ್ಲೆಯೊಳಗೇ ಅಂತಹ ಸುದ್ದಿಗಳನ್ನು ಕೇಳತೊಡಗಿದ ಮೇಲೆ, ನಿಜಕ್ಕೂ ಆತಂಕ ಶುರುವಾಗಿದೆ.
ಇಂತಹದೆಲ್ಲ ನಮ್ಮ ಸುತ್ತಮುತ್ತ ನಡೆಯುತ್ತಿದೆ. ಸ್ವಲ್ಪ ಕಣ್ಣಿಟ್ಟು ನೋಡಿ.
೧. ಮನೆಯಲ್ಲಿರುವ ಅತಿ ಹೆಚ್ಚಿನ ಅಪಾಯವರ್ಗದಲ್ಲಿ ಬರುವ ವೃದ್ಧರನ್ನು ಸೋಂಕು ತಗುಲದಂತೆ ಕಾಪಾಡದಿರುವುದು.
೨. ಸೋಂಕು ಬಂದಿರುವ ಮನೆಗಳಲ್ಲೂ ವೃದ್ಧರನ್ನು ಟೆಸ್ಟಿಂಗ್‌ಗೆ ಒಡ್ಡದೇ ಇರುವುದು ಮತ್ತು ಆ ಮೂಲಕ ಅವರನ್ನು ಗೊತ್ತಿದ್ದೂ ಗೊತ್ತಿದ್ದೂ ಅಪಾಯಕ್ಕೊಡ್ಡುವುದು.
೩. ಸೋಂಕು ತಗುಲಿದ ವೃದ್ಧರು- ಅಸಹಾಯಕರನ್ನು ಆಸ್ಪತ್ರೆಗೆ ದಾಖಲಿಸದೇ ಮನೆಯಲ್ಲೇ ಸಾಯಗೊಡುವುದು.
೪. ಆಸ್ಪತ್ರೆಗೆ ದಾಖಲಾಗಿರುವವರನ್ನು ಗಂಭೀರ ಸ್ಥಿತಿ ತಲುಪಿದರೆ ಕೈ ಬಿಟ್ಟುಬಿಡುವುದು.
ಇಂತಹವೆಲ್ಲ ನಮ್ಮ ಸುತ್ತಮುತ್ತ ನಡೆಯತೊಡಗಿವೆ. ಇದರ ಹಿಂದಿರುವುದು ಚಿಕಿತ್ಸೆ/ರೋಗದ ಕುರಿತ ಮತ್ತು ಅದಕ್ಕೆ ತಗಲುವ ವೆಚ್ಚದ ಕುರಿತ ಭಯ ಮತ್ತು ’ಹೋದರೆ ಹೋಗಲಿ ಬಿಡಿ’ ಎಂಬ ಸ್ವಾರ್ಥ/ಕ್ರೌರ್ಯ.
ನಮ್ಮ ಶಿಕ್ಷಣ ವ್ಯವಸ್ಥೆಯ/ಸಾಮಾಜಿಕ ಜವಾಬ್ದಾರಿಯ ವೈಫಲ್ಯ ಏನಾದರೂ ಚರ್ಚೆ ಆಗುವುದಿದ್ದರೆ ಅದು ಇಲ್ಲಿಂದಲೇ ಆರಂಭ ಆಗಬೇಕು.
ಸರ್ಕಾರ ಆರೋಗ್ಯ ಸೇವೆಯನ್ನು ಈ ಹಂತದಲ್ಲಾದರೂ ರಾಷ್ಟ್ರೀಕರಿಸಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದರೆ, ಅನ್ಯಾಯವಾಗಿ ಸರ್ಕಾರಿ ಲೆಕ್ಕಕ್ಕೂ ಸಿಗದೇ ಸಾವಿಗೀಡಾಗುತ್ತಿರುವ ಈ ಜೀವಗಳು ಇನ್ನು ಕೆಲಕಾಲ ನಮ್ಮೊಂದಿಗಿರುತ್ತಿದ್ದವು. ಆದರೆ ಸ್ವತಃ ಸರ್ಕಾರಕ್ಕೂ ಸಾಯುವ ಅಪಾಯದಲ್ಲಿರುವವರನ್ನು ರಕ್ಷಿಸುವ ಗರ್ಜು ಇದ್ದಂತಿಲ್ಲ. ಅವರೇನಿದ್ದರೂ “ಪಾಂಡೆಮಿಕ್ ಮಾನೆಟೈಸೇಷನ್”ನಲ್ಲಿ, ತಲೆ ಲೆಕ್ಕ-ಅಲೆ ಲೆಕ್ಕದ ಪಾಸಿಟಿವ್ ಸುದ್ದಿ ಬಿತ್ತರಿಸುವಲ್ಲಿ ನಿರತರು. 
ಈ ಜೀವಗಳೆಲ್ಲ ಹೋದರೆ ಹೋಗಲಿ, ಖರ್ಚು ಕಡಿಮೆ ಆಯಿತು, ಜನಸಂಖ್ಯೆ ತಗ್ಗಿತು ಎಂಬಂತೆ ವರ್ತಿಸುತ್ತಿರುವ ಈ ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ ಬಂದಂತಿದೆ.
ಕೊರೊನಾ ಕೊನೆಯಲ್ಲಿ ಲೆಕ್ಕಾಚಾರ ತೆಗೆಯುವಾಗ ನಮ್ಮ ಕೈಬಿಟ್ಟು ಹೋಗಿರುವ ಹೆಚ್ಚಿನ ಜೀವಗಳು ಇಂತಹವೇ. ಕಾಲ ಮಿಂಚಿ ಹೋಗುವ ಮುನ್ನ ಏನಾದರೂ ಮಾಡುವುದು ಸಾಧ್ಯವಿದೆಯೇ?
#COVID19 #WhoCares #ನಮ್ದೇಕತೆ