ನಾನೊಬ್ಬ ರೈತನ ಮಗನಾಗಿ, ರೈತನೂ ಆಗಿ, ಅರ್ಥಶಾಸ್ತ್ರದ ವಿಧ್ಯಾರ್ಥಿಯಾಗಿ, ನಿವೃತ್ತ ಅಧಿಕಾರಿಯಾಗಿ ಮತ್ತು ಒಬ್ಬ ಲೇಖಕನಾಗಿ ಇವೊತ್ತಿನ ಬದುಕಿನ ಅನೇಕ ಸಂಗತಿಗಳು ಗೊಂದಲ, ವಿಸ್ಮಯ ಮತ್ತು ವಿಷಾದಗಳನ್ನು ಹುಟ್ಟಿಸುತ್ತವೆ. ಜಗತ್ತಿನಾದ್ಯಂತ ಇವೊತ್ತಿನ ದಿನ ಮನುಷ್ಯ ಲಕ್ಷಾಂತರ ಸರಕುಗಳನ್ನು ( ಇವುಗಳಲ್ಲಿ ಸಾವಿರಾರು ಸರಕುಗಳು ಇಲ್ಲದೆಯೇ ಮನುಷ್ಯ ಸುಖ -ನೆಮ್ಮದಿಗಳಿಂದ ಬದುಕಬಹುದಾಗಿದೆ ) ಉತ್ಪಾದಿಸುವುದರಲ್ಲಿ ಮತ್ತು ಅವುಗಳನ್ನು ಉಪಭೋಗಿಸುವುದರಲ್ಲಿ ಜಿದ್ದಿಗೆ ಬಿದ್ದವನಂತೆ ಪೈಪೋಟಿಯಲ್ಲಿ ತೊಡಗಿದ್ದಾನೆ. ಇದಕ್ಕೆ ಕೈಗಾರಿಕಾ ಕ್ರಾಂತಿ ಕಾರಣವೋ, ವೈಜ್ಞಾನಿಕ ಸಂಶೋಧನೆಗಳ ಅಭಿವೃದ್ಧಿ ಕಾರಣವೋ, ಮನುಷ್ಯನ ಆಲೋಚನಾ ಶಕ್ತಿಯಲ್ಲಿ ಹುಟ್ಟಿದ ದುರಾಸೆಯ ವಿಸ್ತಾರ ಕಾರಣವೋ ಅಥವಾ ಎಲ್ಲಾ ಕಾರಣಗಳು ಒಂದರಲ್ಲೊಂದು ಸೇರಿಕೊಂಡು ಅಕರಾಳ ವಿಕರಾಳ ರೂಪ ತಾಳಿವೆಯೋ ! ಜಗತ್ತಿನ ಅದ್ಭುತ ಅರ್ಥಶಾಸ್ತ್ರಜ್ಞನರೂ ಆದ ಮೋಹನದಾಸ ಕರಮಚಂದ್ ಗಾಂಧಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೇಳಿದ ಮಾತುಗಳು ಇವೊತ್ತು ಅಖಂಡ ಸತ್ಯವಾಗಿ ಸಾಕ್ಷಾತ್ಕಾರಗೊಂಡಿವೆಯೆನಿಸುತ್ತದೆ. " ಕೈಗಾರಿಕಾ ಕ್ರಾಂತಿಯಿಂದುಂಟಾದ ಕಂಪನಗಳಿಂದ ಇಡೀ ಜಗತ್ತು ವಾಸಿಯಾಗಲಾರದ ವ್ರಣದಿಂದ ನರಳುವ ರೋಗಿಯೊಬ್ಬನಂತೆ ನಿರಂತರವಾಗಿ ರೋದಿಸುತ್ತಿರುತ್ತದೆ." ಎಂಬುದೇ ಗಾಂಧೀಜಿಯ ಮಾತು. " ಶ್ರಮಪಡದ ಯಾವ ದೇಹವೂ ತಾನು ದುರಾಸೆಯಿಂದ, ವಾಮ ಮಾರ್ಗದಿಂದ ದುಡಿದ ಸಂಪತ್ತನ್ನು ಅರಗಿಸಿಕೊಳ್ಳಲಾರದು. ದುಡಿಯದೇ ತಿನ್ನುವವನು ಎಂದೂ ಆರೋಗ್ಯದಿಂದ, ಖುಷಿಯಿಂದ ಇರಲಾರ." ಎಂದೂ ಗಾಂಧಿಯವರು ಹೇಳುತ್ತಾರೆ. ಲಕ್ಷಾಂತರ ಸರಕುಗಳ ಹಿಂದೆ ಬಿದ್ದಿರುವ ಮನುಷ್ಯ ಅದಕ್ಕಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ಮನಸ್ಸಿಗೆ ಬಂದಂತೆ ವ್ಯಯ ಮಾಡುತ್ತಿದ್ದಾನೆ. ಬದಲಾಗಿ ಪ್ರಕೃತಿಯೂ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ತನ್ನದೇ ಮಾರ್ಗೋಪಾಯಗಳನ್ನು ಬಳಸುತ್ತದೆ. ಕೊರೊನಾ ಮೊದಲಗೊಂಡು ಅನೇಕ ಸಾಂಕ್ರಾಮಿಕ ರೋಗಗಳೂ ಕೂಡ ಪ್ರವಾಹ, ಚಂಡಮಾರುತ, ಸುನಾಮಿ, ಭೂಕಂಪಗಳಂತೆ ಪ್ರಕೃತಿಯ ಇಂಥ ಮಾರ್ಗೋಪಾಯಗಳಲ್ಲಿ ಸೇರುತ್ತವೆ.
ಸರಿಸುಮಾರು ಸಾವಿರ ವರ್ಷಗಳ ಹಿಂದೆಯೇ ಕೊಳ್ಳುಬಾಕ ಸಂಸ್ಕೃತಿ ಮತ್ತು ಅದರ ಋಣಾತ್ಮಕ ಪರಿಣಾಮಗಳ ಕುರಿತು ವಚನಕಾರ ಅಲ್ಲಮಪ್ರಭು ಎಷ್ಟು ಅದ್ಬುತವಾಗಿ ಹೇಳಿದ್ದಾನೆ ನೋಡಿ: " ಕಂಡ ಕಂಡವನೆಲ್ಲವ ಕೊಂಡು ಅಟ್ಟಹಾಸದಿ ಮೆರೆವ ಜನಕೆ ಕಾಣದ ಜೀವಿಯು ಬಂದು ಜಗವು ತಲ್ಲಣಿಸುವುದು ನೋಡಾ ಗುಹೇಶ್ವರಾ." ಎಂಬ ಅಲ್ಲಮನ ಮಾತುಗಳು ಪ್ರಸ್ತುತ ಕೊರೊನಾದ ಸಾವು, ನೋವು ಸಂಕಷ್ಟಗಳಿಗೆ ಎಷ್ಟು ಅದ್ಬುತವಾಗಿ ಸಮೀಕರಣಗೊಳ್ಳುತ್ತವೆ ! ಇದನ್ನೇ ಬುದ್ಧ, ಗಾಂಧಿ, ಬಸವಾದಿಗಳೂ ಹೇಳುವುದು. ಆದರೆ ಜಾಗತೀಕರಣ ಮತ್ತು ಮಾನವನ ದುರಾಸೆಗಳು ದಾರ್ಶನಿಕರ ಮಾತುಗಳಿಗೆ ಕಿಮ್ಮತ್ತು ಇಲ್ಲದಂತೆ ಮಾಡಿವೆ. ಹಾಗಾಗಿ ಮನುಕುಲದ ಸಾವು, ನೋವು, ಸಂಕಟ, ವಿನಾಶಗಳಿಗೆ ಸ್ವತಃ ಮಾನವನೇ ಕಾರಣನಾಗುತ್ತಾನೆ. ನಾನು 2000ನೇ ಇಸವಿಯಲ್ಲಿ ನಮ್ಮ ಹೆಡ್ ಆಫೀಸಿನಲ್ಲಿ ಕೆಲಸ ಮಾಡುವಾಗ ನಮ್ಮ ಕಛೇರಿ ಆಫೀಸುಗಳಿಗಾಗಿ ಶೇಷಾದ್ರಿಪುರಂನಲ್ಲಿ ಬಿಲ್ಡರ್ ಸುಬ್ಬರಾಜು ಎನ್ನುವವರ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಆತ ತಿಂಗಳಿಗೆರಡು ಸಾರಿಯಾದರೂ ನನ್ನ ಚೆಂಬರಿಗೆ ಬರುತ್ತಿದ್ದ. ಕೋಟ್ಯಾಧಿಪತಿ. ಕಾಫಿ ಕುಡಿಯಿರಿ ಎಂದರೆ " ಇಲ್ಲ ಸಾರ್, ನಾನು ಬೆಳಿಗ್ಗೆ ಎರಡು , ಮಧ್ಯಾಹ್ನ ಎರಡು , ರಾತ್ರಿಗೆ ಎರಡು ಒಣ ಚಪಾತಿ ಪಲ್ಯ ಬಿಟ್ರೆ ಏನೂ ತಗಳಲ್ಲ ಸಾರ್ , ಶಗರ್ರು, ಇನ್ನೂ ಏನೇನೋ " ಎನ್ನುತ್ತಿದ್ದರು. ನಾನು " ಬರಿ ಆರು ಚಪಾತಿಗೆ ಕೋಟ್ಯಂತರ ಆಸ್ತಿ, ಈ ಪಡಿಪಾಟ್ಲು ಯಾಕ್ರಿ ಸುಬ್ಬರಾಜು.." ಎಂದು ತಮಾಷೆ ಮಾಡುತ್ತಿದ್ದೆ. ಆತ ನಗುತ್ತಾ " ಸುಮ್ಮನೆ ಸಾರ್.." ಎಂದೆನ್ನುತ್ತಿದ್ದರು. ಈ ಆರೂ ಚಿಲ್ಲರೆ ಅಡಿ ಉದ್ದವಿದ್ದ ಬಿಲ್ಡರ್ ಸುಬ್ಬರಾಜುವನ್ನು ನೋಡಿದಾಗಲೆಲ್ಲ ನಮ್ಮ ಬೆಸಗರಳ್ಳಿ ರಾಮಣ್ಣ ಹೇಳುತ್ತಿದ್ದ " ಹಸಿವು, ಕಾಮ ಇಂಗಿಹೋದ ಮೇಲೆ ಮನುಷ್ಯ ಶವಕ್ಕೆ ಸಮಾನ ಕಣಯ್ಯ. ಇಂಥ ನಡೆದಾಡೊ ಲಕ್ಷಾಂತರ ಶವಗಳು ಈ ಭೂಮಿ ಮೇಲೆ ಇದಾವಯ್ಯ" ಎಂಬ ಮಾತುಗಳು ನೆನಪಾಗುತ್ತಿದ್ದವು. ಪಾಪ, ಸುಬ್ಬರಾಜು ತಮ್ಮ ಬಿಲ್ಡಿಂಗ್ ಮುಂದೆಯೇ ಕೊಲೆಯಾಗಿ ಹೋದರು. ಅದಾದ ಏಳೆಂಟು ತಿಂಗಳಿಗೆ ಆತನ ಮಗ, ಹೆಂಡತಿ ಆಕ್ಸಿಡೆಂಟ್ನಲ್ಲಿ ತೀರಿ ಹೋಗಿದ್ದರು.
ಒಮ್ಮೆ ಇಬ್ಬರು ಸ್ನೇಹಿತರು ಜೊತೆಗೂಡಿ ಕಾಡಿನ ಮೂಲಕ ಎಲ್ಲೋ ಹೋಗುತ್ತಿರುವಾಗ ದಾರಿ ತಪ್ಪುತ್ತಾರೆ. ಎರಡು ದಿನಗಳಲ್ಲಿ ಸುಸ್ತಾಗಿ ಹೋಗುತ್ತಾರೆ. ಇನ್ನೊಂದು ದಿನ ಕಳೆದರೆ ಅವರು ಕಾಡನ್ನು ದಾಟುವಂತಹವರಿದ್ದರು. ಆಗ ಇದ್ದಕ್ಕಿದ್ದಂತೆ ಎರಡು ಪೊಟ್ಟಣಗಳು ಮೇಲಿಂದ ಬೀಳುತ್ತವೆ. ಬಹುಶಃ ದೇವರೇ ಎಸೆದಿದ್ದನೇನೋ. ಒಂದು ಪೊಟ್ಟಣದಲ್ಲಿ ಚಿನ್ನದ ನಾಣ್ಯಗಳಿದ್ದರೆ, ಇನ್ನೊಂದರಲ್ಲಿ ಅನ್ನವಿರುತ್ತದೆ. ಅವರಲ್ಲಿ ಸ್ವಲ್ಪ ಶಕ್ತಿಯಿದ್ಧವನು ಚಿನ್ನದ ನಾಣ್ಯಗಳಿದ್ದ ಪೊಟ್ಟಣವನ್ನು ಹಿಡಿದು ಓಡಿ ಕಾಡಿನಲ್ಲಿ ಮರೆಯಾಗುತ್ತಾನೆ. ಇನ್ನೊಬ್ಬ ಉಳಿದ ಅನ್ನದ ಪೊಟ್ಟಣವನ್ನು ಬಿಚ್ಚಿ ಅನ್ನ ತಿಂದು ಹೊಟ್ಟೆ ತುಂಬಿಸಿಕೊಂಡು, ಮಲಗಿ ರಾತ್ರಿ ಕಳೆದು ಮುಂದೆ ಸಾಗುತ್ತಾನೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ತನ್ನ ಸ್ನೇಹಿತ ಸತ್ತು ಬಿದ್ದರುವುದು ಕಣ್ಣಿಗೆ ಬೀಳುತ್ತದೆ. ಚಿನ್ನದ ನಾಣ್ಯಗಳ ಪೊಟ್ಟಣ ಕೈಯಲ್ಲಿರುತ್ತದೆ. ಅವನು ಸತ್ತ ಸ್ನೆಹಿತನ ಕೈಯಲ್ಲಿದ್ದ ನಾಣ್ಯಗಳ ಪೊಟ್ಟಣ ಹಿಡಿದು ಮುಂದೆ ಸಾಗಿ ಗಮ್ಯ ಸೇರಿಕೊಳ್ಳುತ್ತಾನೆ ! ಇನ್ನೊಂದು. ಒಬ್ಬ ಸುಖಲೋಲುಪ್ತ ದೊರೆ ಇರುತ್ತಾನೆ. ಅವನೊಮ್ಮೆ ಕಾಡಿಗೆ ಹೋಗಿ ತಪಸ್ಸಿಗೆ ಕೂರುತ್ತಾನೆ. ದೊರೆಯಾದ್ದರಿಂದ ಎರಡೇ ದಿನದಲ್ಲಿ ಪ್ರತ್ಯಕ್ಷನಾದ ದೇವರು " ಏನಯ್ಯಾ ದೊರೆ, ನಿನಗೆ ಎಲ್ಲಾ ಸುಖಗಳನ್ನು ಕೊಟ್ಟಿದ್ದರೂ ಬಂದು ತಪಸ್ಸಿಗೆ ಕುಳಿತಿದ್ದೀಯ ಏನ್ಸಮಾಚಾರ " ಎಂದು ವಿಚಾರಿಸಿಕೊಳ್ಳುತ್ತಾನೆ. ದೊರೆಯು " ದೇವರೇ, ನಾನು ದೇಶದ ಚಕ್ರವರ್ತಿ, ಹಾಗಾಗಿ ನಾನು ಸುಖ ಪಡಲು ಒಂದೇ ಗಳಗಂಟೆ ಸಾಲದು, ಮೈ ತುಂಬಾ ಗಳಗಂಟೆಗಳನ್ನು ದಯಪಾಲಿಸು." ಎನ್ನುತ್ತಾನೆ. " ತಥಾಸ್ತು" ಎಂದು ದೇವರು ಮಾಯವಾಗುತ್ತಾನೆ. ಕ್ಷಣದಲ್ಲಿ ರಾಜನ ಮೈ ತುಂಬಾ ಗಳಗಂಟೆಗಳೆ. ರಾಜ ಖುಷಿಯಿಂದ ನಡೆಯುತ್ತಿರುತ್ತಾನೆ. ಒಂದಿಷ್ಟು ದೂರ ಹೋಗಿರುತ್ತಾನೆ ಅವನ ಮುಂದೆ ದೊಪ್ಪನೆ ಎರಡು ಚೀಲಗಳು ಬೀಳುವುದರೊಂದಿಗೆ ದೇವರೂ ಪ್ರತ್ಯಕ್ಷವಾಗಿ " ಲೇ ಕಂತ್ರಿ ನನ್ಮಗನೆ ದೊರೆ, ಮಳ್ಳಿ ಥರ ಹೋಗ್ತಿದ್ದೀಯಲ್ಲ. ನೀನು ಬರಿ ಗಳಗಂಟೆ ಅಲ್ಲಾಡಿಸ್ಕಂಡೋದ್ರೆ ನಿನ್ನ ಗಳಗಂಟೆಗಳ accessories ನ ನಾನು ಹೊತ್ಕಂಡು ತಿರುಗ್ಲೆನಲೇ " ಎಂದಾಗ ದೊರೆಯು "ಸ್ವಾಮಿ ಇಷ್ಟೊಂದು ಭಾರ ನಾನು ಹೊರಲಾರೆ, ನಿನ್ನ ವರ ಹಿಂದಕ್ಕೆ ತಗೊ" ಎಂದು ಬೇಡಿಕೊಂಡಾಗ ದೇವರು ತಾನು ಕರುಣಿಸಿದ ಗಳಗಂಟೆಗಳ ಜೊತೆಗೆ ದೊರೆಯ ಒರಿಜನಲ್ ಗಳಗಂಟೆಯನ್ನೂ ಛೂಫ್ ಮಾಯ ಮಾಡಿಬಿಡುತ್ತಾನೆ. ಅರಮನೆಯ ಎಲ್ಲಾ ರಾಣಿಯರಿಂದಲೂ ಛೀ ಮಾರಿ ಹಾಕಿಸಿಕೊಂಡ ದೊರೆಯು ಕೊರಗಿ ಕೊರಗಿ ಕೆಲವು ದಿನಗಳಲ್ಲೇ ಪ್ರಾಣಬಿಡುತ್ತಾನೆ !!
ಮೊದಲನೆಯ ಕಥೆ ನನ್ನ ಹೆಂಡತಿ ಹೇಳಿದ್ದು. ಎರಡನೆಯ ಕಥೆಯನ್ನು ಆತ್ಮೀಯ ಗೆಳೆಯರಾದ ಡಾ. ಎನ್ ಜಗದೀಶ್ ಕೊಪ್ಪ ಹೇಳಿದ್ದು. ಕೊರೊನಾ ಮರೆತು ಕಾಲಕ್ಷೇಪ ಮಾಡಲು ಬರೆದ ಪ್ರಸಂಗವೂ ಹೌದು ಇದು. ದಯಮಾಡಿ ಯಾರೂ ಮುಖ ಸಿಂಡರಿಸಿಕೊಳ್ಳದೆ ಓದಿ, ಚಿಂತಿಸಿ, ನಕ್ಕು ಮರೆತೂ ಬಿಡಿ ಬೇಕಾದರೆ. ಇಷ್ಟವಾದ ಊಟ ಮಾಡಿ, ಬಿಸಿ ನೀರು ಕುಡಿಯಿರಿ, ನೀರಿನ ಹಬೆ ತೆಗೆದುಕೊಳ್ಳಿ, ಏನಾದರೂ ಓದಿ, ಸಾಧ್ಯವಾದರೆ ಬರೆಯಿರಿ, ಮನೆಕೆಲಸದಲ್ಲಿ ಎಲ್ಲರೂ ಒಗ್ಗೂಡಿ, ತಮಾಷೆ ಮಾಡಿಕೊಳ್ಳಿ. ಕೋಪ ಮಾಡಿಕೊಂಡು ಹೃದಯಕ್ಕೆ ಗಾಸಿ ಮಾಡಬೇಡಿ. ಸಾಧ್ಯವಾದರೆ ಹೃದಯಗಳನ್ನು ಚೂರು ಚೂರು ಬೇರೆಯವರ ಬಳಿಯೂ ಪ್ರೀತಿಗೆ ಅಡ ಇಡಿ. ಒಂದಲ್ಲಾ ಒಂದು ಜಾಗದಲ್ಲಿ ಹೃದಯಗಳು ಜೋಪಾನವಾಗಿರುತ್ತವೆ ಒಳ್ಳೆಯ ಆಮ್ಲಜನಕ ತುಂಬಿಕೊಂಡು..! ಮರೆತಿದ್ದೆ: ಸುದ್ದಿ ಚಾನೆಲ್ ಗಳ ವೀಕ್ಷಣೆ ಆದಷ್ಟೂ ಕಡಿಮೆ ಮಾಡಿ.
ಲೇಖನ - ಕೇಶವರೆಡ್ಡಿ ಹಂದ್ರಾಳ

Social Plugin