ವರದಿ : ವಿಜಯ ವಾಜಂತ್ರಿ       
ತೇರದಾಳದ ಸರಕಾರಿ ಆಸ್ಪತ್ರೆಯ ಗೇಟ್ ಮುಂಭಾಗದಲ್ಲಿ ಸಾರ್ವಜನಿಕರು ತಮ್ಮ ಅಳಲನ್ನು ಮಾಜಿ ಸಚಿವೆ ಉಮಾಶ್ರೀ ಮುಂದೆ ತೋಡಿಕೊಂಡರು.

 ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಅಸ್ಥವ್ಯಸ್ಥವಾಗಿದೆ ಸಾರ್ವಜನಿಕರ ಅಳಲು

ತೇರದಾಳ : ಸರಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಎಲ್ಲವೂ ಅಸ್ಥವ್ಯಸ್ಥವಾಗಿದೆ. ಸರಿಯಾಗಿ ಮಾತ್ರೆಗಳು ಸಿಗುತ್ತಿಲ್ಲ. ಅವರ ಕಷ್ಟ ಸುಖಗಳಿಗೆ ಸೌಜನ್ಯ ಪೂರ್ಣವಾಗಿ ವೈದ್ಯರು ಸ್ಪಂಧನೆ ಮಾಡುತ್ತಿಲ್ಲವೆಂದು ನಾನು ಹೇಳುತ್ತಿಲ್ಲ ಸಾರ್ವಜನಿಕರು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು. 
  ಪಟ್ಟಣದ ಸರಕಾರಿ ಆಸ್ಪತ್ರೆಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಉಪಹಾರದ ವ್ಯವಸ್ಥೆಗೆ ಚಾಲನೆಗೆ ಆಗಮಿಸಿದ ಸಂದರ್ಭದಲ್ಲಿ ವಾರ್ಡ ನಂ 6ರ ಮಹಿಳೆಯರು ಜಮಾಯಿಸಿ ಸರಕಾರಿ ಆಸ್ಪತ್ರೆಗಳಲ್ಲಿ ತಮಗೆ ಆಗುತ್ತಿರುವ ಅನ್ಯಾಯವನ್ನು ಹೇಳಿದರು. ಜ್ವರ ಬಂದು ಆಸ್ಪತ್ರೆಗೆ ಹೋದರೆ ಸರಿಯಾಗಿ ತಪಾಸಣೆ ಮಾಡುವುದಿಲ್ಲ ಹಾಗೂ ಚಿಕಿತ್ಸೆ ಕೊಡುವುದಿಲ್ಲ. ಮಾತ್ರೆಗಳನ್ನು ಸಹ ಕೊಡುವುದಿಲ್ಲ. ಮದುಮೇಹಕ್ಕೆ ಸಂಭಂಧಿಸಿದ ಮಾತ್ರೆಗಳು ಇಲ್ಲವೆಂದು ಹೇಳಿ ಕಳುಹಿಸುತ್ತಾರೆ. ಯಾವುದೇ ಮಾತ್ರೆ ಕೇಳಿದರೆ ಅವುಗಳು ನಮ್ಮಲ್ಲಿ ಇಲ್ಲವೆಂದು ಹೇಳಿ ಕಳುಹಿಸುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳ ಸಲುವಾಗಿ ಚಿಕಿತ್ಸೆಗೆ ಹೋದರೆ ತಪಾಸಣೆ ಮಾಡುವುದಿಲ್ಲ. ಎಲ್ಲರಿಗೆ ಒಂದೇ ತರದ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಾರೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ಮಾಜಿ ಸಚಿವೆ ಉಮಾಶ್ರೀ ಮುಂದೆ ತೋಡಿಕೊಂಡರು. 
   ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ಮಾತನಾಡಿ ಆಸ್ಪತ್ರೆಗೆ ಕೊರೊನಾ ಸೋಂಕಿತರು ಬರುತ್ತಿರುತ್ತಾರೆ. ಆರೋಗ್ಯಯುತರಾದ ಸಾರ್ವಜನಿಕರು ಆಸ್ಪತ್ರೆಗೆ ಬಂದಾಗ ನಾವೂ ತಪಾಸಣೆ ಹಾಗೂ ಚಿಕಿತ್ಸೆ ಕೊಡುವಲ್ಲಿ ಸೋಂಕು ತಗುಲಿದರೆ ಆಸ್ಪತ್ರೆಗೆ ಬಂದು ಸೋಂಕನ್ನು ಮನೆಗೆ ತಗೆದುಕೊಂಡು ಹೋಗಬೇಕಾಗುತ್ತದೆ. ಸೋಂಕು ಹರಡುವಲ್ಲಿ ನಾವು ಸಹಾಯ ಮಾಡಿದಂತಾಗುತ್ತದೆ ಎಂದು ನಾವು ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡದೇ ಮಾತ್ರೆಗಳನ್ನು ಮಾತ್ರ ಕೊಡುತ್ತೇವೆ ಎಂದರು.
  ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಪಿ.ಎಸ್.ಮಾಸ್ತಿ, ಪ್ರಭು ಗಸ್ತಿ, ಪೈಜುಲ್ಲಾ ಇನಾಮದಾರ, ಆಧಿನಾಥ ಸಪ್ತಸಾಗರ, ಫಜಲ್ ಅತಾರಾವುತ್, ನೇಮಣ್ಣ ಸಾವಂತನವರ, ಕೃಷ್ಣಾ ದೊಡಮನಿ, ರಾಜೇಸಾಬ ನಗಾರ್ಜಿ, ಮೆಹಬೂಬ ಜಮಾದಾರ ಸೇರಿದಂತೆ ಇನ್ನಿತರರು ಇದ್ದರು.