ಏನೋ ಮೂಲಭೂತವಾದದ್ದು ತಪ್ಪಿದೆ… ಲಸಿಕೆ ಲೆಕ್ಕಾಚಾರದಲ್ಲಿ
- - - - - - - - - -
ಫೆಬ್ರವರಿಯಲ್ಲಿ ಹಣಕಾಸು ಕಾರ್ಯದರ್ಶಿ ಟಿ. ವಿ. ಸೋಮನಾಥನ್ ಅವರು ದಿ ಪ್ರಿಂಟ್ ಪತ್ರಿಕೆಗೆ ಸಂದರ್ಶನ ನೀಡಿ, ದೇಶದಲ್ಲಿ ತಲಾ ವ್ಯಕ್ತಿಗೆ ಎರಡು ಡೋಸ್ ಲೆಕ್ಕಾಚಾರದಲ್ಲಿ 50ಕೋಟಿ ಜನರಿಗೆ ತಲಾ 700 ರೂಪಾಯಿ ಅಂದಾಜಿನಲ್ಲಿ ಲಸಿಕೆ ಕೊಡೋದಕ್ಕೆ ಕೇಂದ್ರ ಸರ್ಕಾರ 35,000 ಕೋಟಿ ರೂ. ತೆಗೆದಿರಿಸಿದೆ ಎಂದು ವಿವರಿಸಿದ್ದರು. ಅದರಲ್ಲಿ ಆರೋಗ್ಯ ಕಾರ್ಯಕರ್ತರು, ಕೊರೊನಾ ವಾರಿಯರ್ಸ್, ಪ್ರಾಯ 50 ದಾಟಿದವರು ಮತ್ತು ಅಪಾಯವರ್ಗದಲ್ಲಿ ಬರುವವರು (ಮಧುಮೇಹ,ಬೊಜ್ಜು, ರಕ್ತದೊತ್ತಡ ಇತ್ಯಾದಿ) ಎಲ್ಲ ಒಟ್ಟಿಗೆ ಸೇರಿ 30ಕೋಟಿ ಜನ ಎಂದು ಹೇಳಿದ್ದರು.

(ವಿವರ ಇಲ್ಲಿದೆ: https://theprint.in/economy/rs-35000-cr-covid-vaccine-allocation-in-budget-can-cover-50-cr-indians-expenditure-secy/597542/ )

ಇಲ್ಲಿಯ ತನಕ ಕೇಂದ್ರ ಸರ್ಕಾರ ಲಸಿಕೆಗೆ ಖರ್ಚು ಎಷ್ಟು ಮಾಡಿದೆ ಎಂಬುದರ ಚಿತ್ರಣ ಸ್ಪಷ್ಟ ಇಲ್ಲ. ನಾನು ಹುಡುಕಿ, ಸುಮಾರು 5000 ಕೋಟಿಯ ಲೆಕ್ಕ ಸಾರ್ವಜನಿಕವಾಗಿ ಲಭ್ಯ ಇರುವುದು ಸಿಕ್ಕಿತು. ಇನ್ನು ಲಾಜಿಸ್ಟಿಕ್ಸ್, ಪ್ರಚಾರ ಇತ್ಯಾದಿ ಎಷ್ಟು ಖರ್ಚಾಗಿದೆಯೋ ಗೊತ್ತಿಲ್ಲ. ನಿನ್ನೆ ಸಂಸದ ಶಶಿ ತರೂರ್ ಈ ಬಗ್ಗೆ ಟ್ವೀಟ್ ಮಾಡಿ ಪ್ರಶ್ನೆ ಕೇಳಿದ ಬಳಿಕ, ಈ ಕುರಿತು ಚರ್ಚೆಗಳು ಶುರು ಆಗಿವೆ. ಸರ್ಕಾರ ಉತ್ತರ ಕೊಡಲಾರಂಭಿಸಿದೆ.

ನನಗೆ ಒಟ್ಟು ಸನ್ನಿವೇಶ ಪರಿಶೀಲಿಸಿದಾಗ, ಇಷ್ಟು ಪ್ರಶ್ನೆಗಳಿವೆ. ಉತ್ತರ ಸಿಕ್ಕಿದರೆ ಸಂತೋಷ.

೧. ಸರ್ಕಾರ 30 ಕೋಟಿ ಲಸಿಕೆಗಳಿಗೆ ದುಡ್ಡು ತೆಗೆದಿರಿಸಿದ್ದನ್ನು (ರಾಜ್ಯಗಳಿಗೆಂದು) ಪ್ರಕಟಿಸಿದ ಬಳಿಕ, ಅದನ್ನು ಕೆಲವೆಡೆ ದುಡ್ಡಿಗೆ ಮಾರುತ್ತಿರುವುದು ಯಾಕೆ?

೨. ಲಸಿಕೆ ಇರುವವರಿಗೇ ಸಿಗುವುದು ಕಷ್ಟ ಆಗಿರುವಾಗ, ಲಸಿಕೆ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸದೆ ಏಕಾಏಕಿ 18+ ಇದ್ದವರಿಗೆಲ್ಲ ಲಸಿಕೆ ಎಂದು ಪ್ರಕಟಿಸಿದ್ದು ಏಕೆ?

೩. SIIಗೆ 3300ಕೋಟಿ ರೂ ಸಾಲ ಕೊಟ್ಟು ಲಸಿಕೆ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಹೇಳಿದ ಬಳಿಕವೂ, ಆ ವ್ಯಕ್ತಿ (ಪೂನಾವಾಲಾ) ಅದನ್ನೆತ್ತಿಕೊಂಡು ಇಂಗ್ಲಂಡಿಗೆ ಹೋಗಿ, ಅಲ್ಲಿ 240ಮಿಲಿಯ ಪೌಂಡ್ ಹೂಡಿಕೆ ಮಾಡಿ ಲಸಿಕೆ ಕಾರ್ಖಾನೆ ತೆರೆಯಲು ಹೊರಟಿರುವುದನ್ನು ನೋಡಿಯೂ ಸುಮ್ಮನಿರುವುದೇಕೆ? ಭಾರತದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಯಿತೆ?

೪. ಕೋವಿಡ್ ಲಸಿಕೆಗೆಂದು GAVIಒಕ್ಕೂಟಕ್ಕೆ ಸರ್ಕಾರ ಇಲ್ಲಿಯ ತನಕ ಎಷ್ಟು ಹಣ ಪಾವತಿಸಿದೆ? ಅಂದಾಜು 27 ಮಿಲಿಯ ಅಮೆರಿಕನ್ ಡಾಲರ್ ಪಾವತಿಸುವುದಾಗಿ ಸರ್ಕಾರ ಕಮಿಟ್ ಮಾಡಿಕೊಂಡಿದೆ ಎಂದು GAVI ಹೇಳುತ್ತಿದೆ.

೫. ಪರಿಸ್ಥಿತಿ ಹೀಗಿರುವಾಗ, GAVI-ಆಕ್ಸ್‌ಫರ್ಡ್ ವಿವಿ-ಆಸ್ಟ್ರಜೆನೆಕಾ-SIIಒಪ್ಪಂದದ ಮೇರೆಗೆ ಬೇರೆ ದೇಶಗಳಿಗೆ ಹಂಚಿಕೆಯಾದ ಲಸಿಕೆಗಳನ್ನು ತಾನೇ ದಾನಕೊಟ್ಟೆ ಎಂದು ಬಡಾಯಿ ಕೊಚ್ಚಿಕೊಂಡದ್ದು ಏಕೆ?

೬. ಈಗ ಹೊಸಲಸಿಕೆಗಳಿಗೆ (ಸ್ಪುಟ್ನಿಕ್ ಇತ್ಯಾದಿ) ಭಾರತದೊಳಗೆ ಅವಕಾಶ ಮಾಡಿಕೊಟ್ಟಿರುವಾಗ, ಅವುಗಳ ವ್ಯಾಪಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನು? ಅದರಿಂದ ಸರ್ಕಾರಕ್ಕೆ ಬರುವ ಖರ್ಚು (ಲಾಜಿಸ್ಟಿಕ್ಸ್ ಇತ್ಯಾದಿ) ಎಷ್ಟು? 

೭. ಸಾರ್ವಜನಿಕ ದುಡ್ಡಿನಲ್ಲಿ ಲಸಿಕೆ ಕೊಡುವಾಗ ಕೆಲವು ರಾಜ್ಯಗಳಿಗೆ ಉಚಿತ ಲಸಿಕೆ (ಚುನಾವಣೆ ಕಾಲದಲ್ಲಿ) ಕೆಲವಕ್ಕೆ ಕಾಸುಕೊಟ್ಟು ಲಸಿಕೆ ಎಂಬ ತಾರತಮ್ಯ ಮಾಡಿದ್ದೇಕೆ?

೮. ದೇಶದ ಸಾರ್ವಜನಿಕ ಹಣದಿಂದ ದುಡ್ಡು-ಸಹಾಯ ಎಲ್ಲಕೊಟ್ಟೂ SII ಸಕಾಲದಲ್ಲಿ ಲಸಿಕೆ ಒದಗಿಸದಿದ್ದರೆ, ತನ್ನದೇ ಕಾನೂನು ಸಮರಗಳ ಭಾರದಲ್ಲಿ ಅದು ಮುಳುಗತೊಡಗಿದರೆ (ಹಲವಾರು ದೇಶಗಳು ಈಗಾಗಲೇ ಸಕಾಲದಲ್ಲಿ ಲಸಿಕೆ ಪೂರೈಸದಿದ್ದದ್ದಕ್ಕಾಗಿ ಅವರಿಗೆ ಕಾನೂನು ಕ್ರಮದ ನೋಟೀಸು ಕಳಿಸಿವೆಯಂತೆ) ಆಗ ನಮ್ಮ ಸ್ಥಿತಿ ಏನು? ಅದಕ್ಕಾಗಿ ಏನು ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ?

೯. ವ್ಯಾಕ್ಸೀನ್/ಔಷಧಿ ಸಂಶೋಧನೆ, ಟ್ರಯಲ್‌ಗಳಿಗೆ ಅಭಿವೃದ್ಧಿಗಳಿಗೆಂದು ಸರ್ಕಾರICMR ಗೆ ನೀಡಿದ ಧನಸಹಾಯ ಎಷ್ಟು? ಅದರಲ್ಲಿ SII, ಭಾರತ್ ಬಯೋಟೆಕ್‌ಗಳ ಹೂಡಿಕೆಯ ಪಾತ್ರ ಇದೆಯೆ?

೧೦. ಒಂದು ವರ್ಷಕ್ಕೆ, ಬರೇ 50ಕೋಟಿ ಜನಕ್ಕೆ 35,000 ಕೋಟಿ ರೂ. ಲಸಿಕೆ ವೆಚ್ಚ ಆಗುವುದಾದರೆ, ಮುಂದಿನ ವರ್ಷಕ್ಕೆ ಮತ್ತೆ ಪುನಃ ಲಸಿಕೆ ಕೊಡಬೇಕಾದರೆ ವೆಚ್ಚದ-ಖರ್ಚಿನ ಹೊಣೆಯಾರದು (ಪರಿಣತರು ಈ ಲಸಿಕೆಗಳ ಪರಿಣಾಮದ ಅವಧಿ ಒಂದು ವರ್ಷ ಅನ್ನುತ್ತಿದ್ದಾರೆ!)? ವಾಸ್ತವ ಹೀಗಿರುವುದು ಹೌದಾದರೆ ದೇಶದ ಎಲ್ಲರಿಗೂ ಲಸಿಕೆ ಎಂಬ ಘೋಷಣೆ ಎಷ್ಟು ವಾಸ್ತವ ಎಷ್ಟು ಪೊಳ್ಳು?
   ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಪಾರದರ್ಶಕತೆಯ ಹಾಗೂ ಗೊಂದಲ ಮಾಡದೆ ದೇಶದ ಜನ ಸರ್ಕಾರದ ಮೇಲಿಟ್ಟಿರುವ ನಂಬಿಕೆ ಉಳಿದಿಕೊಳ್ಳಲಿ....