ವರದಿ : ವಿಜಯ ವಾಜಂತ್ರಿ
ತೇರದಾಳದ ವಿಶೇಷ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಸಂಜಯ ಇಂಗಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕೆಮ್ಮು,ನೆಗಡಿ, ಜ್ವರವಿರುವವರು ಆರೋಗ್ಯ ಕಿಟ್ ಪಡೆಯಿರಿ
ತೇರದಾಳ : ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಪಂಚಾಯತ ಸದಸ್ಯರು ಎಲ್ಲರೂ ಸೇರಿ ಒಂದು ತಂಡ ರಚನೆ ಮಾಡಿದೆ. ಈಗಾಗಲೆ ಈ ತಂಡ ಇಡೀ ತಾಲೂಕಿನಾದ್ಯಂತ ಸರ್ವೆ ಕಾರ್ಯ ಮಾಡಿ ಯಾರಿಗೆ ಕೆಮ್ಮು,ನೆಗಡಿ ಜ್ವರ ಸೇರಿದಂತೆ ಕೊರೊನಾ ಲಕ್ಷಣಗಳಿರುವುದನ್ನು ಗುರುತಿಸಿ ಅವರಿಗೆ ಆರೋಗ್ಯ ಇಲಾಖೆಯಿಂದ ಕೊರೊನಾ ಆರೋಗ್ಯ ಕಿಟ್‍ನ್ನು ಕೊಟ್ಟು ಮನೆಯಲ್ಲಿಯೇ ಇರುವಂತೆ ಸಲಹೆ ಮಾಡಲಾಗಿದೆ ಎಂದು ತಹಶೀಲ್ದಾರ ಸಂಜಯ ಇಂಗಳೆ ಹೇಳಿದರು.
ಪಟ್ಟಣದ ವಿಶೇಷ ತಹಶೀಲ್ದಾರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಗ್ಯ ಕಿಟ್ಟ್‍ನ್ನು ಪಡೆದು ಮನೆಯಲ್ಲಿಯೇ ಇರುವುದರಿಂದ ಶೇ.99ರಷ್ಟು ಅವರು ಗುಣಮುಖರಾಗಬಹುದು. ಇದನ್ನು ಪ್ರಾರಂಭಿಕ ಹಂತದಲ್ಲಿಯೇ ಕೊರೊನಾವನ್ನು ಹತೋಟಿಗೆ ತರಬಹುದು. ತಾಲೂಕಿನಲ್ಲಿ ಮೊದಲನೆಯ ಹಂತ ಸರ್ವೆ ಕಾರ್ಯ ಮುಗಿದಿದೆ. ಎರಡನೆಯ ಹಂತದ ಸರ್ವೆ ಕಾರ್ಯ ಕೆಲವು ಗ್ರಾಮಗಳಲ್ಲಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ನಮ್ಮ ತಾಲೂಕಿನಲ್ಲಿ 8637 ಜನರಿಗೆ ರೋಗಲಕ್ಷಣಗಳಿರುವವರನ್ನು ಗುರುತಿಸಿ ಅವರಿಗೆ ಆರೋಗ್ಯ ಕಿಟ್‍ನ್ನು ಕೊಡಲಾಗಿದೆ. ತೇರದಾಳದಲ್ಲಿ 947 ಆರೋಗ್ಯ ಕಿಟ್‍ನ್ನು ವಿತರಿಸಲಾಗಿದೆ. ಈಗಾಗಲೇ ಕೊರೊನಾ ಪಾಸೀಟಿವ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಮುಂಬರುವ ದಿನಗಳಲ್ಲಿ ನಾವು ಇದನ್ನು ಹತೋಟಿಗೆ ತರಲು ತಾಲೂಕಾ ಆಡಳಿತ ಹಾಗೂ ಆರೋಗ್ಯ ಇಲಾಖೆಯವರು ಪ್ರಯತ್ನವನ್ನು ಮಾಡುತ್ತಲಿದೆ.
ಯಾರಿಗಾದರು ನೆಗಡಿ, ಕೆಮ್ಮು, ಜ್ವರ ಬಂದರೆ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ತಾವೇ ಖುದ್ದಾಗಿ ಔಷಧಿ ಅಂಗಡಿಗಳಿಗೆ ಹೋಗಿ ಔಷಧಿ ಪಡೆಯಬಾರದು. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಭೇಟಿಯಾಗಿ ಆರೋಗ್ಯ ಕಿಟ್‍ನ್ನು ಪಡೆದುಕೊಳ್ಳಬೇಕು. ಅನಾವರ್ಶಯಕವಾಗಿ ರಸ್ತೆಗೆ ಬರಬೇಡಿ, ಮನೆಯಲ್ಲಿಯೇ ಇದ್ದು ಸರಕಾರದ ಕೊರೊನಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ ಸೇರಿದಂತೆ ಇನ್ನಿತರರು ಇದ್ದರು.


Social Plugin