ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದ ಸಂಗತಿಯ ವಿಚಾರದಲ್ಲಿ ಪ್ರಾಮಾಣಿಕವಾಗಿ ಅವರನ್ನು ಅಭಿನಂದಿಸುತ್ತೇನೆ. ಬ್ರಾವೋ ತೇಜಸ್ವಿ, ನಿಮ್ಮಂತಹ ಬಿಸಿ ರಕ್ತದ ಜನನಾಯಕರು ಈ ದೇಶಕ್ಕೆ ಬೇಕು. ಬೆಡ್ ಬ್ಲಾಕಿಂಗ್ ದಂಧೆಯ ಇಂಚಿಂಚನ್ನೂ ಫುಲ್ ರಿಸರ್ಚ್ ಮಾಡಿಯೇ ಬಯಲಿಗೆಳೆದಿದ್ದೀರಿ. ನಿಮ್ಮದೇ ಪಕ್ಷದ ಸರ್ಕಾರವಿದ್ದಾಗಲೂ ನೀವು ಈ ಕಾರ್ಯವನ್ನು ಮಾಡಿದ್ದರಿಂದ ನಿಮಗೆ ಅಭಿನಂದನೆಗಳು ಸಲ್ಲಲೇಬೇಕು.
ಈಗ ನಿಮ್ಮ ಮೇಲೆ ಮತ್ತಷ್ಟು ಜವಾಬ್ದಾರಿಯನ್ನು ನಾವು ಹೊರಿಸಬೇಕಾಗಿದೆ. ಕಾರಣ ನೀವು ಸಮರ್ಥರಿದ್ದೀರಿ, ಇವತ್ತಿನ ಟ್ರೆಂಡ್, ಟೆಕ್ನಾಲಜಿ ಮತ್ತು ಇವತ್ತಿನ ರಾಜಕಾರಣದ ಟ್ಯಾಕ್ಟಿಕ್ಸ್ ಗಳನ್ನು ಅರ್ಥ ಮಾಡಿಕೊಂಡು ನಡೆಯುತ್ತಿದ್ದೀರಿ. ನಿಮ್ಮಲ್ಲಿ ಯೌವನದ ಹುರುಪು ಉಮೇದುಗಳಿವೆ. ಪ್ರಶ್ನಿಸಲಾಗದ ದೇಶಭಕ್ತಿಯಿದೆ. ದಣಿವರಿಯದ ಎನರ್ಜಿ ಇದೆ. ಒನ್ಸ್ ಎಗೈನ್ ಬ್ರಾವೋ! ನಮ್ಮ ಅಗಾಧ ನಿರೀಕ್ಷೆಗಳು ನಿಮ್ಮ ಮೇಲಿದೆ.
ಈಗ ನಿಮ್ಮ ಮೇಲೆ ನಾವು ವಿಶ್ವಾಸ ಪೂರ್ವಕವಾಗಿ ಅಭಿಮಾನಭರಿತರಾಗಿ ಹೊರಿಸಬೇಕೆಂದಿರುವ ಹೊಣೆಯ ಬಗ್ಗೆ ಹೇಳ್ತೀನಿ. ದಯಮಾಡಿ ನೋಟ್ ಮಾಡಿಟ್ಟುಕೊಳ್ಳಿ. ಮುಂದೆ ಯಾವತ್ತಾದರೂ ಈ ಬಗ್ಗೆ ಮತ್ತೆ ಕೇಳಿ ವಿಚಾರಿಸುತ್ತೇನೆ. ಹಾಗಾಗಿ ಆನ್ ರೆಕಾರ್ಡ್ ಇರಲಿ.
* ನೀವು ಬೆಡ್ ಬ್ಲಾಕಿಂಗ್ ಪಟ್ಟಿ ಮಾಡಿಕೊಟ್ಟ ಅಷ್ಟೂ ಜನ ತಪ್ಪಿತಸ್ಥರು, ಅಪರಾಧಿಗಳು ಮತ್ತು ಕೊಲೆಗಡುಕರೇ ನಿಜ. ಆದರೆ ಅವರಿಗೆ ಇಷ್ಟು ದೊಡ್ಡ ಹಗರಣ ನಡೆಸಲು ಆ ಮಟ್ಟದ ಧೈರ್ಯ ಬಂದಿದ್ದು ಹೇಗೆ? ಹೇಳಿಕೇಳಿ ಅವರು ಆ ಕಡೆಯವರು, ಸದ್ಯ ಪವರ್ ಸೆಂಟರ್ ನಲ್ಲಿರುವುದು ಈ ಕಡೆಯ ಸರ್ಕಾರ. ಸಿದ್ದರಾಮಯ್ಯನ ಸರ್ಕಾರವಾಗಿದ್ದರೇ ಇದೆಲ್ಲಾ ರಾಜಾರೋಷವಾಗಿ ನಡೆಯಬಹುದಿತ್ತೇನೋ! ಆದರೆ ನಿಮ್ಮ ಸರ್ಕಾರದಲ್ಲಿ ಇದು ಹೇಗೆ ಸಾಧ್ಯ? ಯಾವುದಾದರೂ ಬ್ಯಾಕ್ ಅಪ್ ಇಲ್ಲದೇ ಅವರಿಗೆ ಇಷ್ಟು ದೊಡ್ಡ ಮಟ್ಟದ ಹಗರಣ ಮಾಡಲು ಗುಂಡಿಗೆ ಬರುತ್ತದಾ? ಈ ಬೆಡ್ ಬ್ಲಾಕಿಂಗ್ ಹಗರಣದ ಹಿಂದಿರುವ ಅಸಲು ಸೂತ್ರಧಾರ ಅಥವಾ ಕಿಂಗ್ ಪಿನ್ ಯಾರು? ಯಾರ ಇಶಾರೆಯ ಮೇರೆಗೆ ಅವರು ಕೆಲಸ ಮಾಡುತ್ತಿದ್ದರು? ರಾಜಕಾರಣಿಗಳಿದ್ದರೇ ಅವರು ಯಾರು? ಪ್ರಭಾವಿ ಉನ್ನತ ಅಧಿಕಾರಿಗಳಿದ್ದರೇ ಅವರ್ಯಾರು? ಈ ಬಗ್ಗೆ ಸಿಬಿಐ ಅಥವಾ ಇನ್ಯಾವುದಾದರೂ ಉನ್ನತ ತನಿಖೆ ನಡೆಸಲು ಆಗ್ರಹಿಸುತ್ತೀರಾ?
* ನಿಮಗೆ ತಿಳಿದಿರುವಂತೆ ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ಬೆಡ್ ಗಳಲ್ಲಿ, ಆಂಬ್ಯುಲೆನ್ಸ್ ನಲ್ಲಿ, ಕೋವಿಡ್ ಟೆಸ್ಟಿಂಗ್ ನಲ್ಲಿ ಹಗರಣ ಮಾಡಿ ಸಿಕ್ಕುಬಿದ್ದು ಮರ್ಯಾದೆ ಕಳೆದುಕೊಂಡಿತ್ತು. ಕೋವಿಡ್ ಹೆಸರಲ್ಲಿ ದಂಧೆ ನಡೆಯುತ್ತಿದೆ ಎಂದು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳು ಮತ್ತು ಪ್ರಜ್ಞಾವಂತ ಜನಸಾಮಾನ್ಯರು ಅಬ್ಬರಿಸಿದ್ದರು. ಹಾಗಿದ್ದಾಗ ಕೋವಿಡ್ 2.0 ಸಮಯದಲ್ಲಿ ಆಡಳಿತ ಮೈಮರೆತಿದ್ದೇಕೆ? ಇಷ್ಟಕ್ಕೂ ಈ ಕೋವಿಡ್ ವಾರ್ ರೂಮ್ ನಿಮ್ಮ ಪಕ್ಷದ್ದೇ ಯೋಜನೆಯಲ್ಲವೇ? ರಾಜ್ಯದಲ್ಲಿ, ಕೇಂದ್ರದಲ್ಲಿ ತೀರಾ ಮೊನ್ನೆಮೊನ್ನೆಯ ತನಕ ಬಿಬಿಎಂಪಿಯಲ್ಲೂ ಅಧಿಕಾರ ನಿಮ್ಮದೇ ಇತ್ತಲ್ಲವೇ? ಬೆಂಗಳೂರಿನ ಶಾಸಕರಿಗೆ, ಸಂಸದರಿಗೆ ಮತ್ತು ಕೊನೆಗೆ ಕೆಲವು ಪ್ರಭಾವಿ ಕಾರ್ಪೊರೇಟರ್ ಗಳಿಗೂ ತಿಳಿಯದೆ ಇಂತದ್ದೊಂದು ಹಗರಣ ನಡೆಯಲು ಹೇಗೆ ಸಾಧ್ಯ? ಇದರ ಹಿಂದಿರುವ ಪ್ರಭಾವಿಗಳಿಗೆ ಮುಲಾಜಿಲ್ಲದೇ ಶಿಕ್ಷೆ ಕೊಡಿಸುತ್ತೀರಾ?
* ಹಗರಣ ಬಯಲಿಗೆಳೆಯುವುದಷ್ಟೇ ಮುಖ್ಯವಲ್ಲ. ಆ ಹಗರಣದ ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಕೊಡಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ದೇಶದಲ್ಲಿ ತಮಗೆ ತಿಳಿದಂತೆ ಅನೇಕ ಲಕ್ಷ ಕೋಟಿಗಳ ಹಗರಣಗಳಾಗಿವೆ. ಅದು 2 ಜಿ ಸ್ಪೆಕ್ಟ್ರಂ ಇರಬಹುದು, ಕೋಲ್ ಗೇಟ್, ಆದರ್ಶ ಸೊಸೈಟಿ, ಕಾಮನ್ ವೆಲ್ತ್ ಗೇಂ ಹಗರಣ, ಶಾರ್ದಾ ಚಿಟ್ ಫಂಡ್, ಓಟಿಗಾಗಿ ನೋಟು, ರಫೇಲ್ ಡೀಲ್, ಇಲ್ಲೀಗಲ್ ಮೈನಿಂಗ್, ನೀರವ್ ಮೋದಿ ಮತ್ತು ಮಲ್ಯ ಪ್ರಕರಣ ಇತ್ಯಾದಿ ಪಟ್ಟಿ ಮಾಡಿದರೆ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ ಹನುಮನ ಬಾಲದಂತೆ. ಈ ಯಾವುದಾದರೂ ಹಗರಣದಲ್ಲಿ ಅಪರಾಧ ಋಜುವಾತಾದರೂ ಸಂಬಂಧಪಟ್ಟ ಆರೋಪಿಗಳಿಗೆ ಸೂಕ್ತವಾದ ಶಿಕ್ಷೆ ಆಗಿದೆಯೇ? ಹಾಗಾಗಿ ಈ ಬೆಡ್ ಬ್ಲಾಕಿಂಗ್ ಹಗರಣವನ್ನು ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಿ ಇದರ ಹಿಂದಿರುವ ಎಲ್ಲಾ ಕ್ರಿಮಿಕೀಟಗಳಿಗೆ ಶಿಕ್ಷೆ ಕೊಡಿಸಬಲ್ಲಿರಾ?
* ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಪ್ರಮಾಣದ ಆಕ್ಸಿಜನ್ ಲಭ್ಯತೆ ಇಲ್ಲ. ರೆಮ್ ಡಿಸಿವಿಯರ್ ಇಂಜೆಕ್ಷನ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಸಾವಿನ ಹೊಸ್ತಿಲಲ್ಲಿ ನಿಂತು ನರಳುತ್ತಿದ್ದರೂ ರೋಗಿಗಳಿಗೆ ಆಸ್ಪತ್ರೆಯಲ್ಲಿ ಒಂದು ಬೆಡ್ ಸಿಗುವುದಿಲ್ಲ. ಆದರೆ ಕಾಳಸಂತೆಯಲ್ಲಿ ಇವೆಲ್ಲವೂ ಸುಲಭವಾಗಿ ಹತ್ತು ಪಟ್ಟು ಹೆಚ್ಚು ದರಕ್ಕೆ ಸಿಗುತ್ತಿವೆ. ಕಾಳದಂಧೆಕೋರರು ಕಮಿಷನ್ ಏಜೆಂಟರ ಹಾವಳಿ ಮಿತಿಮೀರುತ್ತಿದೆ. ಖಾಸಗಿ ಆಸ್ಪತ್ರೆಗಳು ಮತ್ತೆ ಸುಲಿಗೆಗೆ ನಿಂತಿವೆ. ಕೋವಿಡ್ ಇವುಗಳ ಪಾಲಿನ ಅಕ್ಷಯ ಪಾತ್ರೆಯಂತಾಗಿದೆ. ಈ ಎಲ್ಲಾ ಅಧ್ವಾನಗಳ ಪರವಾಗಿ ಧ್ವನಿ ಎತ್ತುವ ಮೂಲಕ ಆರೋಗ್ಯ ಕ್ಷೇತ್ರದ ಅನಾರೋಗ್ಯ ಗುಣಪಡಿಸುತ್ತೀರಾ?
* ಇನ್ನೊಂದು ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ. ಈ ಬೆಡ್ ಬ್ಲಾಕಿಂಗ್ ಹಗರಣದ ಸದ್ದು ಗದ್ದಲದಲ್ಲಿ ಚಾಮರಾಜನಗರ, ಗುಲ್ಬರ್ಗಾ ಮುಂತಾದೆಡೆ ಆಕ್ಸಿಜನ್ ದೊರಕದೆ ಪ್ರಾಣ ಬಿಟ್ಟ ಅಮಾಯಕರ ಸಾವಿಗೆ ನ್ಯಾಯ ಸಿಗದೇ, ಸತ್ತವರ ಕುಟುಂಬಸ್ಥರು ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಓರ್ವ ಜವಾಬ್ದಾರಿಯುತ ಸಂಸದರಾಗಿ ತಾವು ಈ ಪ್ರಕರಣವನ್ನೂ ಸಹ ನಿಷ್ಪಕ್ಷಪಾತ ತನಖೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸುತ್ತೀರಾ? ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ಮತ್ತು ಉನ್ನತಾಧಿಕಾರಿಗಳ ರಾಜೀನಾಮೆಗೆ ಆಗ್ರಹಿಸುತ್ತೀರಾ?
ನೀವು ಈ ಮೇಲೆ ತಿಳಿಸಿದ ಎಲ್ಲಾ ಹೊಣೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೀರಾ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ನಿಮ್ಮ ಯುವ ಉತ್ಸಾಹಕ್ಕೆ ನಮ್ಮ ನೈತಿಕ ಬೆಂಬಲ ಖಂಡಿತಾ ಇದೆ.
ಇರಲಿ, ನಮ್ಮ ನಿರೀಕ್ಷೆಗಳು ನಿಮ್ಮ ಜವಾಬ್ದಾರಿ ಹೆಚ್ಚಿಸಿವೆ ಎಂದು ಭಾವಿಸುತ್ತೇನೆ. ನೀವು ಬಿಜೆಪಿ ಯುವ ಮೋರ್ಚಾ ಮುಂದಾಳುವಾಗಿ ಪಶ್ಚಿಮ ಬಂಗಾಳದಲ್ಲಿ ತರಲಾಗದ ಪರಿಬರ್ತನ್ ಅನ್ನು ಬಿಬಿಎಂಪಿ ಕೋವಿಡ್ ವಾರ್ ರೂಮ್ ನಲ್ಲಿ ತಂದಿದ್ದಕ್ಕಾಗಿ ಮುಕ್ತವಾಗಿ ಅಭಿನಂದಿಸುತ್ತೇನೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಬದುಕುತ್ತಿದ್ದೇವೆ, ನಿಮ್ಮ ಆರೋಗ್ಯದ ಕುರಿತಾಗಿ ಕಾಳಜಿ ಇರಲಿ.

Social Plugin