ಆಸ್ಪತ್ರೆಗಳಲ್ಲಿ ಲಸಿಕೆಗೆ ಬರ, ಕೋವ್ಯಾಕ್ಸಿನ್ ಸ್ಟಾಕ್ ಇಲ್ಲವೇ ಇಲ್ಲ
ತೇರದಾಳ : ರಾಜ್ಯದಲ್ಲಿ ಕೊರೊನಾ ತೀವೃತೆ ಹೆಚ್ಚಾಗುತ್ತಿದ್ದು. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ. ವೈರಾಣುವಿನ ಎರಡನೆಯ ಅಲೆಯಿಂದಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸರಕಾರ ವೈರಾಣುವಿನ ವಿರುದ್ಧ ಹೋರಾಡುವ ರೋನಿರೋಧಕ ಶಕ್ತಿ ಹೆಚ್ಚಾಗಲು ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಹೇಳಿದೆ. ಆದರೆ ಸ್ಥಳೀಯ ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್‍ಗಳ ಕೊರತೆಯಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಆಸ್ಪತ್ರೆಗಳಿಗೆ ಬಂದು ಹೋಗುತ್ತಿದ್ದಾರೆ. ಮೊದಲನೇ ಡೋಸ್ ಹಾಕಿಸಿಕೊಂಡು 45ದಿನಗಳ ನಂತರ ಎರಡನೆಯ ಡೋಸ್ ಹಾಕಿಸಿಕೊಳ್ಳಬೇಕು. ಆದರೆ 45 ದಿನಗಳು ಮುಗಿದು ಹೋಗಿವೆ ಮೊದಲನೇ ಡೋಸ್ ಹಾಕಿಸಿಕೊಂಡವರು ಆಸ್ಪತ್ರೆಗಳಿಗೆ ಬಂದು ಸರದಿಯಲ್ಲಿ ಕುಳಿತು ಆಸ್ಪತ್ರೆ ಸಿಬ್ಬಂದಿಯವರು ಬಂದು ಕಳೆದ ನಾಲ್ಕೈದು ದಿನಗಳಿಂದ ಕೋವ್ಯಾಕ್ಸಿನ್ ಲಸಕಿ ಬಂದಿಲ್ಲ ಎಂದು ಹೇಳಿದ ನಂತರ ಮರಳಿ ಅವರು ಮನೆಗೆ ಹೋಗಬೇಕು. ಇನ್ನೂ ಕೋವಿಶೀಲ್ಡ ಲಸಿಕೆ ಮೊದಲನೇ ಡೋಸ್ ಹಾಕಿಸಿಕೊಂಡವರು ಎರಡನೇ ಡೋಸ್ ಹಾಕಿಸಿಕೊಳ್ಳಲು ಬಂದವರಲ್ಲಿ ಕೆಲವು ಜನರಿಗೆ ಲಸಿಕೆ ಸಿಗುತ್ತದೆ ಇನ್ನೂ ಕೆಲವು ಜನರಿಗೆ ಲಸಿಕೆ ಸಿಗದೆ ಮರಳಿ ಹೋಗುತ್ತಾರೆ. ಸಾಕಷ್ಟು ಲಸಿಕೆಗಳ ಕೊರತೆಯಿಂದಾಗಿ ಜನತೆ ಕಂಗಾಲಾಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ ಲಸಿಕೆಗಳ ಕೊರತೆಯಿಂದಾಗಿ ಸ್ವಲ್ಪ ಡೋಸ್ ಕೊಡುತ್ತಾರೆ. ಇದಷ್ಟು ಜನರಿಗೆ ಲಸಿಕೆಯನ್ನು ಹಾಕುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿಯವರು ಹೇಳುತ್ತಾರೆ. ಸಾರ್ವಜನಿಕರ ಅಳಲು : ಆಸ್ಪತ್ರೆಯಲ್ಲಿ ಲಸಿಕೆಗಳ ಕೊರತೆಯಾಗಿದೆ ಎಂದು ಹೇಳುತ್ತಾರೆ ನಿಜ. ಆದರೆ ತಮ್ಮ ಪರಿಚಯಸ್ಥರು ಬಂದಾಗ ಅವರಿಗೆ ಲಸಿಕೆಯನ್ನು ಹಾಕಿ ಕಳುಹಿಸುತ್ತಾರೆ. ತಮಗೆ ಬೇಕಾದವರಿಗೆ ಲಸಿಕೆ, ಮಾತ್ರೆ, ಔಷಧಿಗಳನ್ನು ಕೊಟ್ಟು ಕಳುಹಿಸುತ್ತಾರೆ. ಅಮಾಯಕರಿಗೆ ಲಸಿಕೆಯು ಇಲ್ಲ ಮಾತ್ರೆಗಳು ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿಯೂ ನಡೆದಿದೆ ಈ ತಾರತಮ್ಯ. ಇದನ್ನು ಹೋಗಲಾಡಿಸಿ ಎಲ್ಲರನ್ನು ಸರಿಸಮಾನಾಗಿ ಕಾಣುವಂತೆ ಮೇಲಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿಗೆ ತಾಕೀತು ಮಾಡಬೇಕಾಗಿದೆ. ಇಲ್ಲವಾದರೆ ಆಸ್ಪತ್ರೆ ಹಾಗೂ ಸರಕಾರದ ಹೆಸರು ಕೆಡುವಲ್ಲಿ ಇವರುಗಳು ಕಾರಣವಾಗುತ್ತಾರೆ ಎಂದು ಹೇಳುತ್ತಾರೆ ಲಸಿಕೆ ಪಡೆಯಲು ಬಂದಿರುವ ಜನರು. 18ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಮೇ.1ರಿಂದ ಲಸಿಕೆಯನ್ನು ಹಾಕಲಾಗುವುದು ಎಂದು ಈಗಾಗಲೇ ಸರಕಾರ ಎಲ್ಲ ಕಡೆಯು ಪ್ರಚಾರ ಮಾಡಲಾಗಿದೆ. ಆದರೆ ಮೇ.1ರಂದು ಲಸಿಕೆಗಳು ಮಾತ್ರ ಎಲ್ಲಿಯೂ ಸಂಗ್ರಹವಿಲ್ಲ. ಸರಕಾರ ಸಾಕಷ್ಟು ಲಸಕಿಯನ್ನು ಸಂಗ್ರಹ ಮಾಡಿಕೊಂಡು ಲಸಿಕೆ ನೀಡಲಾಗುವುದು ಎಂದು ಪ್ರಚಾರ ಮಾಡಬೇಕಾಗಿತ್ತು. ಆದರೆ ಈ ವರೆಗೆ ಯಾವುದೇ ಆಸ್ಪತ್ರೆಗಳಲ್ಲಿ ಲಸಿಕೆಗಳು ಸಂಗ್ರಹವಾಗಿಲ್ಲದ್ದಕ್ಕೆ ಸರಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. 9ಸಾವಿರ ಲಸಿಕೆ ಹಾಕಲಾಗಿದೆ : ಈಗಾಗಲೇ ತೇರದಾಳ ವ್ಯಾಪ್ತಿಯಲ್ಲಿ ಮೊದಲನೇ ಡೋಸ್‍ನ್ನು ಹಾಗೂ ಎರಡನೆ ಡೋಸ್‍ನ್ನು ಸುಮಾರು 9ಸಾವಿರ ಡೋಸ್ ಲಸಿಕೆಯನ್ನು ಸಾರ್ವಜನಿಕರಿಗೆ ಹಾಕಲಾಗಿದೆ. ಲಸಿಕೆಗಳ ಕೊರತೆ ಸಾಕಷ್ಟಿದೆ. ತಾಲೂಕಾ ಮಟ್ಟದಲ್ಲಿ ಲಸಿಕೆಗಳು ಸಂಗ್ರಹವಿಲ್ಲ. ನಾವು ಈಗಾಲೇ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ ಲಸಿಕೆಯ ಕೊರತೆಯ ಕುರಿತು ಮನವರಿಕೆ ಮಾಡಿದ್ದೇವೆ. ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಸ್ಥಳೀಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುದರ್ಶನ್ ನಿಡೋಣಿ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿಯವರ ಜೊತೆ ಮಾತನಾಡಿದಾಗ ಲಸಿಕೆಯ ಕುರಿತು ಈಗಾಗಲೇ ಆರೋಗ್ಯ ಸಚಿವರು ದಿನಪತ್ರಿಕೆಯಲ್ಲಿ ಎಲ್ಲ ವಿಷಯವನ್ನು ತಿಳಿಸಿದ್ದಾರೆ. ನಮಗೂ ಇನ್ನೂ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ನಮಗೆ ಮಾಹಿತಿ ಬಂದ ತಕ್ಷಣ ತಮಗೆ ತಿಳಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.
Social Plugin