*ವರದಿ: ಎಸ್ ಎಮ್ ಗುರುಸ್ವಾಮಿ*
     *ವಿಲಾಸ ಕಾಂಬಳೆಗೆ ಪಿಎಚ್.ಡಿ. ಪ್ರಧಾನ* 
*ಅಥಣಿ*:- *ವಿಲಾಸ್ ಕಾಂಬಳೆಯವರು ಮಂಡಿಸಿದ "ಡಾ.ಸರಜೂ ಕಾಟ್ಕರ್: ಸಮಗ್ರ ಗದ್ಯ ಸಾಹಿತ್ಯ"* ಎಂಬ ಮಹಾ ಪ್ರಬಂಧಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.
ಶ್ರೀ ವಿಲಾಸ್ ರವರು ಶಾಸ್ತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಗುಂಡಣ್ಣ ಚ.ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು.
ಶ್ರೀಯುತ ವಿಲಾಸ್ ಕಾಂಬಳೆಯವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಎಂಬ ಗ್ರಾಮದವರು.ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ,ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಪೂರೈಸಿಕೊಂಡರು.ಚಿಕ್ಕಂದಿನಿಂದಲೂ ಓದು,ಬರಹ ಹಾಗೂ ರಂಗಭೂಮಿಯ ಮೇಲೆ ಅಪಾರ ಪ್ರೀತಿ, ಪ್ರೇಮ ಇಟ್ಟುಕೊಂಡಿದ್ದ ಇವರು ತಮ್ಮ ಶಾಲಾ ದಿನಗಳಲ್ಲಿ ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದು ರಂಗಭೂಮಿಯ ಮೇಲೆ ಬಣ್ಣ ಹಚ್ಚಿ ಕಲೆಯನ್ನು ಕರಗತ ಮಾಡಿಕೊಂಡಿದ್ದರು.ಇವರು ಅಭಿನಯಿಸಿದ ನಾಟಕಗಳು ಹಾಗೂ ಚಲನಚಿತ್ರಗಳು ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ಮೌಲ್ಯದ ಅರಿವನ್ನು   ಮೂಡಿಸುವಂತಹುಗಳು ಎಂಬುದು ವಿಶೇಷ.ಅವುಗಳಲ್ಲಿ ಬಹುಮುಖ್ಯವಾದವುಗಳೆಂದರೆ ಛಲಸಾಧಿಸಿದ ಹೆಣ್ಣು, ಬಸವಣ್ಣನವರು,ಸಾಕಾ ಬೇಕಾ? ಸಂಗೊಳ್ಳಿ ರಾಯಣ್ಣ,ತಂಗಿಗಾಗಿ ತ್ಯಾಗ.ಕಾಲೇಜು ಮಾಫಿಯಾ, ರಮಾಬಾಯಿ ಮಿಸೆಸ್ ಅಂಬೇಡ್ಕರ್ ಹಾಗೂ ಇನ್ನೂ ಅನೇಕ ಸಾಮಾಜಿಕ ನ್ಯಾಯದ ಪರ ಚಿಂತನೆಯುಳ್ಳ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಾಹಿತ್ಯಾಸಕ್ತರಾದ ಶ್ರಿಯುತರು ಮನದೊಳಗಿನ ಮಾತುಗಳು,ಕನ್ನಡ ದೀಪಗಳು ಹೀಗೆ ಹಲವು ಲೇಖನಗಳನ್ನು ಪ್ರಕಟಿಸಿ ಅಪಾರ ಸಂಖ್ಯೆಯ ಓದುಗರನ್ನು ಹೊಂದಿರುವ ಇವರು ರಾಷ್ಟ್ರೀಯ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹತ್ತು ಹಲವು ವಿಚಾರ ಸಂಕಿರಣಗಳಲ್ಲಿ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿ ಜಾನಪದ ಸಾಹಿತ್ಯ, ಅಂಬೇಡ್ಕರರ ಚಿಂತನೆಗಳು ಹಾಗೂ ಸಮಕಾಲೀನ ಸವಾಲುಗಳು,ಲೇಖಕರ ಹಕ್ಕು, ಬದ್ಧತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ,ಪ್ರಾದೇಶಿಕ ಭಾಷೆಗಳು ಹಾಗೂ ಅವುಗಳ ಅಳಿವು ಉಳಿವು, ಸುವರ್ಣ ಕರ್ನಾಟಕ, ಸಾಹಿತ್ಯ ಮತ್ತು ಸಾಧನೆ, ಕಾವ್ಯಗಳ ಪುನರ್ ಮೌಲ್ಯಿಕರಣ, ಸಂಸ್ಕೃತಿ- ಸಾಹಿತ್ಯ ಸಿಂಹಾವಲೋಕನ, ವ್ಯಕ್ತಿತ್ವ ವಿಕಸನ, ಕನ್ನಡ ಕಲಿಕೆಯಲ್ಲಿ ಭಾಷಾ ವೈಜ್ಞಾನಿಕ ಸಮಸ್ಯೆಗಳು ಹೀಗೆ ಇಂದಿನ ಪ್ರಸ್ತುತ ವಿಷಯದ ಕುರಿತು ಉಪನ್ಯಾಸ ನೀಡಿ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
ಕನ್ನಡಪರ ಸಂಘಟನೆ ಹಾಗೂ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಡಿನಾಡಿನಲ್ಲಿ ಕನ್ನಡದ ಉಳಿವಿಗಾಗಿ ನಿರಂತರವಾಗಿ ಕಾರ್ಯತತ್ಪರರಾಗಿದ್ದಾರೆ.
ಕನ್ನಡದ ಕಟ್ಟಾಳು ದಿವಂಗತ ನಾಡೋಜ ಡಾ.ಪಾಟೀಲ್ ಪುಟ್ಟಪ್ಪನವರ ಒಡನಾಡಿಗಳಾದ ಶ್ರೀಯುತರು ಸದ್ಯಕ್ಕೆ ಬೆಲ್ಲದ ಬಾಗೇವಾಡಿಯ ವ್ಹಿ ಎಮ್ ಕತ್ತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ, ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಾಲೂಕು. ಇಂತಹ ಗಡಿನಾಡಿನಲ್ಲಿ ಕನ್ನಡದ ಬಗ್ಗೆ ಅಭಿಮಾನ,ಪ್ರೀತಿ,
ಗೌರವವನ್ನು ಹೊಂದಿರುವ ನಮ್ಮ ಗ್ರಾಮದ ಒಬ್ಬ ವ್ಯಕ್ತಿ ಕನ್ನಡಕ್ಕಾಗಿ ದುಡಿಯುವುದನ್ನು ಕಂಡು ತಾಲೂಕಿನ ಕನ್ನಡಪರ ಸಂಘಟನೆಗಳು ವಿಲಾಸ್ ರವರ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಹೊಗಳಿ ಅಭಿನಂದಿಸಿವೆ.
ಇವರ ಸಾಹಿತ್ಯ ಮತ್ತು ಸಮಾಜಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ನೀಡುವ ವರ್ಷದ ಡಾ.ಡಿ‌.ಸಿ ಪಾವಟೆ ಎನ್ ಎಸ್ ಎಸ್ ಪ್ರಶಸ್ತಿ,ಕನಕಗೌರವ ಪುರಸ್ಕಾರ,ಸಮಣೋಭೂಷಣ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿ, ಸನ್ಮಾನಗಳು ಶ್ರೀಯುತರಿಗೆ ಸಂದಿವೆ.ಇಂತಹ ಅಪರೂಪದ ಕನ್ನಡದ ಹೃದಯವಂತ
ವ್ಯಕ್ತಿಯೊಬ್ಬ ಕನ್ನಡದ ಭಾಷಾ ಸೇವೆಯಲ್ಲಿದ್ದುಕೊಂಡು ನಾಡಿನ ಶ್ರೇಷ್ಠ ಕವಿ, ಚಿಂತಕ, ಲೇಖಕ, ಸಾಹಿತಿ,ಕತೆಗಾರ,ವಿಮರ್ಶಕ,
ಸಂಶೋಧಕ,ಅನುವಾದಕ, ನಾಟಕಕಾರ,ಪತ್ರಕರ್ತ ಡಾ.ಸರಜೂ ಕಾಟ್ಕರ್ ರವರ ಸಮಗ್ರ ಗದ್ಯ ಸಾಹಿತ್ಯವನ್ನು ಕುರಿತು ಅಭ್ಯಸಿಸಿ,ಮೊದಲ ಬಾರಿಗೆ ನಮ್ಮ ಗ್ರಾಮದ ವ್ಯಕ್ತಿಯೊಬ್ಬರು ಪಿಎಚ್.ಡಿ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು  ಶ್ರೀಯುತರನ್ನು ಅಭಿನಂದಿಸಿದ್ದಾರೆ.