*ಜನ ಸಮೂಹ ವ್ಯವಸ್ಥೆಯ ವಿರುದ್ಧ ತಿರುಗಿಬೀಳಲು ಸಜ್ಜಾಗುತ್ತಿರಬಹುದು..??*
ಗಬ್ಬು ಅನ್ನುವ ಪದವೇ ಮನಸ್ಸಿಗೆ ಅಸಮಾಧಾನ ತರಿಸುತ್ತೆ. ಒಟ್ಟಾರೆ ವ್ಯವಸ್ಥೆ, ಸರ್ಕಾರದಿಂದ ಹಿಡಿದು ಅಧಿಕಾರ ವರ್ಗ ಎಲ್ಲವೂ ಜನರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಸದ್ಯ ಭಾರತ ಕೊರೊನಾ ಅನ್ನುವ ಸೋಂಕಿನ ವಿಚಾರದಲ್ಲಿ ವಿಶ್ವಗುರುವಾಗಿರೋದು ನೂರಕ್ಕೆ ನೂರು ಸತ್ಯ.!?
ಪ್ರಜಾಪ್ರಭುತ್ವವಿರುವ ದೇಶದಲ್ಲಿ ಪ್ರಜೆಗಳಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ ಅನ್ನುವುದನ್ನ ಅನಿವಾರ್ಯವಾಗಿ ನಂಬಬೇಕಾಗಿ ಬಂದಿದೆ. ಅನಾರೋಗ್ಯವಿರಲಿ, ಸಮಸ್ಯೆಗಳಿರಲಿ, ಅನ್ಯಾಯವಾಗಲಿ ನೀವು ವ್ಯವಸ್ಥೆಯ ವಿರುದ್ಧ ಬೆರಳು ತೋರಿಸುವ ಸ್ಥಿತಿಯಂತೂ, ದೇಶದ ಪ್ರಮುಖ ನಗರಗಳಲ್ಲಿ ಖಂಡಿತವಾಗಿಯೂ ಇಲ್ಲ. ಇದು ದುಡ್ಡಿರುವ ನಾಲ್ಕು ಜನರ ದುನಿಯವಷ್ಟೇ. ಸಾಮಾನ್ಯ ಜನರು ಅಥವಾ ಬಡವರು ಇಲ್ಲಿ ಗಟ್ಟಿಯಾಗಿ ನೆಲಯೂರುವ ಮನಸ್ಸಿದ್ದಲ್ಲಿ ವ್ಯವಸ್ಥೆಯ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಬೇಕು. ಅನ್ಯಾಯ ಕಂಡಲ್ಲಿ ಜನರ ಸಮೂಹ ಸಮೂಹವಾಗಿ ತಿರುಗಿಬೀಳಬೇಕು. ಯಾಕಂದ್ರೆ, ಬಡವರ ಹಿಂದೆ ಯಾವ ಶಕ್ತಿಯೂ ಸದ್ಯಕ್ಕಂತೂ ದೇಶದಲ್ಲಿಲ್ಲ.
ಕಾನೂನು, ಬಡವರ ಪರ ಧ್ವನಿ, ಪಕ್ಷ, ಆ ನಾಯಕ, ಈ ನಾಯಕನಿದ್ದಾನೆ ಅನ್ನುವ ಭ್ರಮೆಯಿಂದ ಹೊರಬರಲೇಬೇಕಾಗಿದೆ. ಈ ದೇಶ ಯಾರ ಅಪ್ಪನ ಸ್ವತ್ತಲ್ಲ... ಪ್ರತಿಯೊಬ್ಬನು ತನ್ನ ತಾಯಿಯ ಒಡಲಿನಿಂದ ಬಂದವರೇ ಹೊರತು, ಆಕಾಶದಿಂದ ನೇರವಾಗಿ ಬಿದ್ದವರಲ್ಲ... ಹೀಗಿರುವಾಗ, ವ್ಯವಸ್ಥೆಯಲ್ಲಿನ ಅವ್ಯವಸ್ಥೆ ವಿರುದ್ಧ ತಿರುಗಿಬೀಳುವ ಹಕ್ಕು ಪ್ರತಿಯೊಬ್ಬರಿಗಿದೆ. ಆ ಧೈರ್ಯ ನಮ್ಮಲ್ಲಿ ಬಂದ ದಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗಬಹುದು, ಹಾಗೆಯೇ ಶವ ಸುಡಲು ಅಥವಾ ಹೂಳಲು ಐದಡಿ ಜಾಗ ಸಿಗಬಹುದು. ನೀವು ಇಲ್ಲಿ ಯಾರಿಗೂ ಕಾಯುವ ಅವಶ್ಯಕತೆಯಿಲ್ಲ.
ಇನ್ನಾದರೂ ಕೆಲವೊಂದು ಮತಿಗೆಟ್ಟ ಪಕ್ಷದ ಸೋಷಿಯಲ್ ಮೀಡಿಯಾ ವಾರಿಯರ್ಸ್ ಅರ್ಥಮಾಡಿಕೊಳ್ಳಬೇಕು. ವಾಸ್ತವಕ್ಕೆ ಬಂದು ಬದುಕುವುದನ್ನ ಕಲಿಯಬೇಕು.. ದೇಶದ್ಯಾಂತ ಸೋಂಕು ಮುತ್ತಿಕೊಂಡಿರುವ ಸಂದರ್ಭದಲ್ಲೂ ತಮ್ಮ ನಾಯಕರ ಪರ ಹೊಗಳುಭಟರಂತೆ ವರ್ತಿಸುವುದನ್ನ ಬಿಟ್ಟು... ಸಾಮಾನ್ಯವರ್ಗದವರ ಬದುಕು ಯಾವ ರೀತಿ ದುಸ್ತರವಾಗ್ತಿದೆ ಅನ್ನುವ ನಗ್ನಸತ್ಯಗಳನ್ನ ಅರಿತುಕೊಳ್ಳಬೇಕು.
ಅಂದ್ಹಾಗೇ, ಸಣ್ಣ ಅನಾರೋಗ್ಯವಿದ್ದು ಆಸ್ಪತ್ರೆಗಳಿಗೆ ದಾಖಲಾದವರೂ ಕೂಡ ಶವವಾಗಿ ಹೊರಬರುತ್ತಿದ್ದಾರೆ. ಅದೆಷ್ಟೋ ಕುಟುಂಬಗಳಿಗೆ ದಿಕ್ಕುದೆಸೆ ಇಲ್ಲದಂತಾಗಿದೆ. ಸಾವಿರಾರು ಕುಟುಂಬ ಸದಸ್ಯರು ತಮ್ಮವರಿಗಾಗಿ ಆಸ್ಪತ್ರೆಗಳ ಆವರಣದಲ್ಲಿ ಕುಳಿತು ಕಣ್ಣೀರಿಡುತ್ತಿದ್ದಾರೆ. ಕೊರೊನಾ ಸೋಂಕಿನ ಎರಡನೇ ಅಲೆಯ ಆರಂಭದಲ್ಲೇ ಸ್ಥಿತಿ ಹೀಗಾದರೆ, ಮುಂದಿನ ದಿನಗಳು ಹೇಗಿರಬಹುದು.? ಧೈರ್ಯ ಹೇಳಿ ದಾರಿ ತೋರಿಸಬೇಕಾದ ನಾಯಕರು ಏನು ಮಾಡುತ್ತಿದ್ದಾರೆ ಅನ್ನುವ ಸತ್ಯ ಜನರಿಗೆ ಮನದಟ್ಟಾಗ್ತಿದೆ.

Social Plugin