ಕೊರೋನಾ ಎರಡನೇ ಅಲೆಯ ತೀವ್ರತೆ ಮತ್ತು ವೇಗ ಗಮನಿಸಿದರೆ ಲಾಕ್ಡೌನ್ ಅಗತ್ಯತೆ ಈಗ ಖಂಡಿತ ಇತ್ತು ಎಂಬುದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅಧಿಕೃತವಾಗಿ ಲಾಕ್ಡೌನ್ ಘೋಷಿಸುವ ಧೈರ್ಯ ಕೇಂದ್ರ ಸರಕಾರಕ್ಕಾಗಲಿ, ರಾಜ್ಯ ಸರಕಾರಕ್ಕಾಗಲಿ ಈಗ ಉಳಿದಿಲ್ಲ. ಏಕೆಂದರೆ, ಯಾವುದೇ ಪೂರ್ವ ಸಿದ್ಧತೆ, ಮುಂದಾಲೋಚನೆ ಇಲ್ಲದೇ ಕಳೆದ ವರ್ಷ ಕೇಂದ್ರ ಸರ್ಕಾರ ಘೋಷಿಸಿದ್ದ ಅವೈಜ್ಞಾನಿಕ ಮತ್ತು ತರಾತುರಿಯ ಲಾಕ್ಡೌನ್ ನಿಂದಾಗಿ ಇಡೀ ದೇಶ, ವಿಶೇಷವಾಗಿ ಬಡವರು, ಅಸಂಘಟಿತ ವಲಯದಲ್ಲಿ ದುಡಿಯುವ ಜನರು, ಮಧ್ಯಮ ವರ್ಗದವರು ಮತ್ತು ಸಣ್ಣ ವ್ಯಾಪಾರಸ್ಥರು ಅನುವಭವಿಸಿದ ನರಕಯಾತನೆ ಹೇಳತೀರದು. ಆ ನರಕಯಾತನೆ ಇನ್ನೂ ಮುಗಿದೇ ಇಲ್ಲ. ಹೀಗಾಗಿ ಲಾಕ್ಡೌನ್ ಪದ ಕೇಳಿದರೇ ಈಗ ಜನ ಬೆಚ್ಚಿ ಬೀಳುವಂತಾಗಿದೆ. ಇಂಥ ಸಮಯದಲ್ಲಿ ಮತ್ತೊಂದು ಲಾಕ್ಡೌನ್ ಘೋಷಿಸುವ ಧೈರ್ಯ ಬರಲು ಹೇಗೆ ಸಾಧ್ಯ.? ಲಾಕ್ಡೌನ್ ಎಂಬುದು ಅತ್ಯಂತ ಕೆಟ್ಟ, ನಕಾರಾತ್ಮಕ ಮತ್ತು ಕುಪ್ರಸಿದ್ಧ ಪದವಾಗಿ ಈಗ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಪದವನ್ನು ಬಳಸದೆಯೇ ಅನಧಿಕೃತವಾಗಿ ಲಾಕ್ಡೌನ್ ಹೇರುವ ತಂತ್ರಗಾರಿಕೆಯನ್ನು ಸರಕಾರಗಳು ಅನುಸರಿಸುತ್ತಿವೆ. 'ಜನಕ್ಕೆ ಏನೂ ಗೊತ್ತಾಗೋದಿಲ್ಲ. ಇದೂ ಒಂದು ಚಾಣಕ್ಯ ತಂತ್ರ' ಎಂದು ಸರಕಾರಗಳು ಅಂದುಕೊಂಡಿರಬಹುದು. ಆದರೆ, ಈ ತಂತ್ರ ಅತ್ಯಂತ ದೊಡ್ಡ ಮೂರ್ಖ ನಿರ್ಧಾರ ಎಂಬುದು ಸಾಬೀತಾಗಲಿದೆ. ಕಳೆದ ವರ್ಷ ಕೇಂದ್ರ ಸರಕಾರ ನಾಲ್ಕು ಗಂಟೆಯ ಸಮಯವನ್ನಾದರೂ ನೀಡಿತ್ತು. ಈಗ ಅಷ್ಟೂ ಸಮಯ ಕೊಡದೇ,  ಅಧಿಕೃತವಾಗಿ ಏನೂ ಹೇಳದೇ ಅಘೋಷಿತವಾಗಿ ಲಾಕ್ಡೌನ್ ಹೇರುತ್ತಿರುವುದು ಜನರ ಬದುಕನ್ನು ಇನ್ನಷ್ಟು ಭೀಕರ ಮತ್ತು ನರಕಸದೃಶವಾಗಿಸಲಿದೆ...