ಖೊಟ್ಟಿ ಸಹಿ ಮೂಲಕ ಆಸ್ತಿ ಕಬಳಿಕೆ: ಪೊಲೀಸರಿಂದ ತನಿಖೆ ಚುರುಕು
*ಮೃತಪಟ್ಟವರು ಗ್ರಾಮಲೆಕ್ಕಾಧಿಕಾರಿಗೆ ಪ್ರತ್ಯಕ್ಷ...!?
ರಬಕವಿ-ಬನಹಟ್ಟಿ,ಅ4: ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಬಂಡಿಗಣಿ ಗ್ರಾಮಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ಭಾರಿ ಬೆಲೆಬಾಳುವ 3 ಗುಂಟೆ ಭೂಮಿಯನ್ನು ಸತ್ತ ವ್ಯಕ್ತಿಗಳನ್ನು ಮರುಜೀವ ಮಾಡಿ ಖೊಟ್ಟಿ ಸಹಿ ಮಾಡಿ ಆಸ್ತಿ ಲಪಟಾಯಿಸಿದ ಪ್ರಸಂಗಕ್ಕೆ ಇಲ್ಲೊಂದು ದೂರ ಸಾಕ್ಷಿಯಾಗಿದೆ.
1971 ರಲ್ಲಿ ಬಸಪ್ಪ ಅವ್ವಣ್ಣ ಜಿನ್ನಿ ಹಾಗು 1975 ರಲ್ಲಿ ಮಲ್ಲಪ್ಪ ಚನಬಸಪ್ಪ ಜಿನ್ನಿ ಎಂಬಾತರು ಮೃತ ಹೊಂದಿರುತ್ತಾರೆ. ಸದರಿ ಆಸ್ತಿಯು ಇವರಿಬ್ಬರ ಹೆಸರಿನಲ್ಲಿರುತ್ತದೆ. ಅಂದಿನಿಂದ ನಿರ್ಲಕ್ಷ್ಯಕ್ಕೊಳಗಾದ ಈ ಭೂಮಿಯ ಮೇಲೆ ರೇಣುಕಾ ಸದಾಶಿವ ತೇಲಿ ಎಂಬಾತಳ ಮೇಲೆ ಕಣ್ಣು ಬಿದ್ದ ಪರಿಣಾಮ 2006 ರಲ್ಲಿ ಅಪಸಾತ್ ವಾಟ್ನಿ ಪತ್ರವೆಂದು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಇದಕ್ಕೆ ಸಾಕ್ಷಿಯಾಗಿ ಸಿದ್ರಾಯ ಬಸಪ್ಪ ಪಡಚಿ, ಸತ್ಯಪ್ಪ ಮಾರುತಿ ಗುಬ್ಬಿ, ಹಣಮಂತ ತವನಿಧಿ ಹಾಗು ಆತಳ ಪತಿ ಸದಾಶಿವ ಕಲ್ಲಪ್ಪ ತೇಲಿ ಎಂಬುವರು ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ತೆರಳಿ ಖೊಟ್ಟಿ ಹೆಬ್ಬಟ್ಟಿನ ಸಹಿ ಮಾಡಿಕೊಂಡು ಕಾನೂನು ಬಾಹಿರವಾಗಿ ಅಪಸಾತ್ ವಾಟ್ನಿ ಅಂತಾ ದಾಖಲೆ ಸೃಷ್ಟಿಸಿಕೊಂಡಿರುತ್ತಾರೆಂದು ದೂರದ ಸಂಬಂಧಿ ಬಸಪ್ಪ ಶಿವಪುತ್ರಪ್ಪ ಹೊಸೂರ ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 27/07/2020 ರಂದು ಮೋಸ ಹಾಗು ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಲಪಟಾಯಿಸುತ್ತಿದ್ದಾರೆಂದು ಆರೋಪಿಸಿ ಫಿರ್ಯಾಧಿ ನೀಡುತ್ತಾರೆ. ಇದರನ್ವಯ ಸದ್ಯ ಬನಹಟ್ಟಿ ಪೊಲೀಸ್ ಠಾಣಾಧಿಕಾರಿಯಿಂದ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಪ್ರಕರಣದ ವಕಾಲತ್ತು ವಹಿಸಿರುವ ನ್ಯಾಯವಾದಿ ಬಸವರಾಜ ಪುಟಾಣಿ ತಿಳಿಸಿದ್ದಾರೆ.
ಒಟ್ಟಾರೆ ಆಸ್ತಿ ಲಪಟಾಯಿಸಿದವರಲ್ಲಿ ರಾಜಕೀಯ ಪ್ರಮುಖ ಮುಖಂಡರ ಕೈವಾಡವಿರುವ ಹಿನ್ನಲೆಯಲ್ಲಿ ಈ ಪ್ರಕರಣ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ತುಂಬಾ ಚರ್ಚೆಗೆ ಗ್ರಾಸವಾಗಿದ್ದು, ಸದ್ಯದಲ್ಲಿಯೇ ಪೊಲೀಸ್ ತನಿಖೆಯ ಮೂಲಕ ಎಲ್ಲ ಮಾಹಿತಿ ಹೊರಬೀಳಲಿದೆ.
Social Plugin