ತಾವು ಹೊಂದಿದ್ದ ಹುದ್ದೆಗೆ ಅವಮಾನ ಮಾಡಿ ಅತ್ಯಂತ ಅಮಾನವಿಯ ಹೇಳಿಕೆ ನೀಡಿದ ಭಾರತ ಸರ್ಕಾರದ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್.
ಅವರ ಈ ರೀತಿಯ ಹೇಳಿಕೆಗಳು ಹೊಸದೇನು ಅಲ್ಲ. ಆದರೆ ಈಗ ಬಿಹಾರದ ಚುನಾವಣಾ ಸಮಯದಲ್ಲಿ ಅವರು ನೀಡಿದ ಉಚಿತ ಕೊರೋನಾ ಲಸಿಕೆಯ ಹೇಳಿಕೆ ಆ ಸ್ಥಾನದಲ್ಲಿ ಅವರು ಮುಂದುವರಿಯುವ ಅರ್ಹತೆ ಕಳೆದುಕೊಂಡರು ಮತ್ತು ಒಂದು ವೇಳೆ ಪ್ರಧಾನಿಯವರು ಅವರನ್ನು ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿಸಿದರೆ ಅವರ ಪ್ರಾಮಾಣಿಕತೆಯನ್ನೂ ಪ್ರಶ್ನಿಸಬೇಕಾಗುತ್ತದೆ ಅಥವಾ ಆ ಹೇಳಿಕೆಗೆ ಅವರದು ಜವಾಬ್ದಾರಿ ಇದೆ ಎಂದು ಭಾವಿಸಬೇಕಾಗುತ್ತದೆ.

" ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ " ಇದು ಅವರ ನೇರ ಹೇಳಿಕೆ ಮತ್ತು ಘೋಷಣೆ. ಹಾಸ್ಯಾಸ್ಪದ, ಅಮಾನವೀಯ ಮತ್ತು ಬೇಜವಾಬ್ದಾರಿ ಹೇಳಿಕೆ.

ವಿಶ್ವ ಮತ್ತು ದೇಶದ ಜನತೆ ಲಸಿಕೆಗಾಗಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದೆ. ಇಲ್ಲಿಯವರೆಗಿನ ಮಾಹಿತಿಯಂತೆ ಯಾವುದೇ ದೇಶ ಇನ್ನೂ ಸ್ಪಷ್ಟವಾಗಿ ಲಸಿಕೆ ಸಿದ್ದಪಡಿಸಿಲ್ಲ. ಕೇವಲ ಪ್ರಾಯೋಗಿಕ ಪರೀಕ್ಷೆಗಳ ಹಂತದಲ್ಲಿ ಮಾತ್ರ ಇದೆ. ರಷ್ಯಾ, ಇಂಗ್ಲೆಂಡ್, ಭಾರತ, ಅಮೆರಿಕ, ಇಸ್ರೇಲ್, ಚೀನಾ ಅಂತಿಮ ಹಂತದಲ್ಲಿ ಇದೆ ಎಂದು ಹೇಳುತ್ತಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಯಾವುದನ್ನು ಖಚಿತಪಡಿಸಿಲ್ಲ. ಕೆಲವು ವಿಫಲವಾಗಿವೆ. ರಷ್ಯಾದ ಅಧ್ಯಕ್ಷರು ಘೋಷಿಸಿದ ಲಸಿಕೆಗಳು ಕೂಡ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಆ ದೇಶದ ಸೋಂಕಿತರ ಮತ್ತು ಸಾವುಗಳ ದಿನ ನಿತ್ಯದ ಅಂಕಿಅಂಶಗಳು ಹೇಳುತ್ತಿವೆ.

ಜನ ಆತಂಕದಲ್ಲಿ ಇರುವಾಗ, ಲಸಿಕೆ ಇನ್ನೂ ಅಂತಿಮವಾಗದೇ ಇರುವಾಗ, ಅದರ ನಿಜವಾದ ಬೆಲೆ ನಿಗದಿಯಾಗದೇ ಇರುವಾಗ ಚುನಾವಣಾ ಭರವಸೆಯಾಗಿ ಇದನ್ನು ಘೋಷಿಸುವುದು ಅತ್ಯಂತ ಕೆಳಮಟ್ಟದ ವರ್ತನೆ ಎಂದೇ ಪರಿಗಣಿಸಲಾಗುತ್ತದೆ. ಇದನ್ನು ಬೇರೆ ಕೋನಗಳಿಂದ ಸಮರ್ಥಿಸಿಕೊಳ್ಳಬಹುದು. ಚುನಾವಣೆಯ ಭರವಸೆ ಎಂದು ಹೇಳಬಹುದು. ಹಿಂದಿನ ಯಾವುದಾದರೂ ತಪ್ಪುಗಳನ್ನು ಇದಕ್ಕೆ ಹೋಲಿಸಬಹುದು. ಆದರೆ ಅದೆಲ್ಲವೂ ಇನ್ನಷ್ಟು ಕೀಳು ಅಭಿರುಚಿಯಾಗುತ್ತದೆ.

" ಏಕ್ ಭಾರತ್ - ಶ್ರೇಷ್ಠ್ ಭಾರತ್ " ಎಂದು ಹೇಳುವ ಜನರೇ ಈ ರೀತಿಯ ಪ್ರಾದೇಶಿಕ ಅಸಮಾನತೆ ಸೃಷ್ಟಿಸಿದರೆ ಹೇಗೆ ? ಚುನಾವಣೆ ಗೆಲ್ಲಲು ಇಷ್ಟೊಂದು ಕೆಳಮಟ್ಟಕ್ಕೆ ಇಳಿದರೆ ಭವಿಷ್ಯದಲ್ಲಿ ಅದರಿಂದಾಗುವು ದುಷ್ಪರಿಣಾಮಗಳಿಗೆ ಯಾರು ಜವಾಬ್ದಾರಿ. ವಿಶ್ವದ ಅನೇಕ ದೇಶಗಳು ಆಧುನಿಕತೆಯನ್ನು, ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ " ಕೊರೋನಾ ದೇವರ ಆಟ " ಎಂದು ನಂಬುವ ಹಣಕಾಸು ಮಂತ್ರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವೇ ?

ಮೇಲ್ನೋಟಕ್ಕೆ ಈ ಘೋಷಣೆ ಸಾಮಾನ್ಯ ಹೇಳಿಕೆಯಂತೆ ಕಾಣಬಹುದು. ಆದರೆ ಆಳದಲ್ಲಿ ಜನರು ಮತ್ತು ವ್ಯವಸ್ಥೆಯನ್ನು ಅವರು ಗ್ರಹಿಸಿರುವ ರೀತಿ ಅವರ ಮಾತುಗಳಾಗಿ ಹೊರಬಂದಿದೆ. ಜನರು ಅತ್ಯಂತ ಮೂರ್ಖರು ಮತ್ತು ಅವರಿಗೆ ಬಿಸ್ಕತ್ ಎಸೆದು ಸುಲಭವಾಗಿ ಓಟುಗಳನ್ನು ಪಡೆಯಬಹುದು. ಅಧಿಕಾರ ಸಿಕ್ಕಿರೆ ಆಮೇಲೆ ಏನು ಬೇಕಾದರೂ, ಹೇಗೆ ಬೇಕಾದರೂ ಮಾತುಗಳನ್ನು ತಿರುಚಬಹುದು. ಚುನಾವಣಾ ರಾಜಕೀಯದಲ್ಲಿ ಗೆಲುವೇ    ಎಲ್ಲಕ್ಕಿಂತ ಮುಖ್ಯ ಎಂಬ ಅಪಾಯಕಾರಿ ಸಂದೇಶ ಇದರಲ್ಲಿ ಅಡಗಿದೆ.

ದೇಶದ ರಾಜಕೀಯ ವ್ಯವಸ್ಥೆಯನ್ನು ಶುಧ್ಧ ಮಾಡುವುದಾಗಿ ಭಾಷಣಗಳಲ್ಲಿ ಹೇಳುವ ಪ್ರಧಾನಿಯವರು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಆಗಿರುವ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿ ಇಂತಹ ಅಮಾನವೀಯ ಘೋಷಣೆಯನ್ನು ಹಿಂಪಡೆದು ಒಂದಷ್ಟು ರಾಜಕೀಯ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು.

ತಪ್ಪುಗಳಾಗುವುದು ಸಹಜ. ಆದರೆ ತಪ್ಪುಗಳನ್ನೇ ಸರಿ ಎಂದು ಸಮರ್ಥಿಸುವುದು ಅಸಹಜ. ಅದರಲ್ಲೂ ಭಾರತದಂತ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿಯ ಹೇಳಿಕೆಗಳು ಇಂತಹ ಸಂದಿಗ್ಧ ಸಮಯದಲ್ಲಿ ಜನರಿಗೆ ರಾಜಕೀಯ ಪಕ್ಷಗಳ ಬಗ್ಗೆಯೇ ಅಸಹ್ಯ ಮೂಡಿಸುತ್ತದೆ. ತಮಗಿರುವ ಜನಪ್ರಿಯತೆಯ ಅಮಲಿನಲ್ಲಿ ಘೋರ ತಪ್ಪುಗಳನ್ನು ಮರೆಯಬಾರದು.

ಸಾಮೂಹಿಕವಾಗಿ ಜನ ಅನಿವಾರ್ಯತೆಯಿಂದ ಮೇಲ್ನೋಟಕ್ಕೆ ಕೊರೋನಾ ಬಗ್ಗೆ ಧೈರ್ಯದಿಂದ ಇದ್ದಂತೆ ಭಾಸವಾಗುತ್ತಿದ್ದರೂ ವೈಯಕ್ತಿಕವಾಗಿ ಬಹಳಷ್ಟು ಜನ ತುಂಬಾ ಭಯಗೊಂಡಿದ್ದಾರೆ. ಜೀವನದ ಬಗ್ಗೆ ಸ್ವಲ್ಪ ಮಟ್ಟಿಗೆ ಜಿಗುಪ್ಸೆ ಉಂಟಾಗಿದೆ. ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಮನೋಭಾವ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಿಜಕ್ಕೂ ಅತ್ಯಂತ ದಕ್ಷ ಪ್ರಾಮಾಣಿಕ ಜನರಲ್ಲಿ ಆತ್ಮವಿಶ್ವಾಸ ತುಂಬುವ ಹಣಕಾಸು ಮಂತ್ರಿಯ ಅವಶ್ಯಕತೆ ಇದೆ. ಸೂಕ್ಷ್ಮತೆ ಕಳೆದುಕೊಂಡು ದುರಹಂಕಾ ಮೆರೆಯುವ, ಪರಿಹಾರದ ಘೋಷಣೆಗಳಿಗು ಅದರ ಫಲಿತಾಂಶಗಳಿಗು ಸಂಬಂಧವೇ ಇಲ್ಲದಂತ ಕಾರ್ಯಯೋಜನೆಯನ್ನು ಜಾರಿಗೊಳಿಸುತ್ತಿರುವ ನಿರ್ಮಾಲಾ ಸೀತಾರಾಮನ್ ಅವರು ಇನ್ನಷ್ಟು ಅಧೋಗತಿಗೆ ಭಾರತದ ಅರ್ಥ ವ್ಯವಸ್ಥೆಯನ್ನು ಇಳಿಸುವ ಮುನ್ನ ಪ್ರಧಾನಿಗಳು ಅವರನ್ನು ಬದಲಾಯಿಸುವುದು ಒಳಿತು.

ರಾಜಕೀಯ ಕಾರಣಗಳಿಗಾಗಿ ಹಠದಿಂದ ಅವರನ್ನು ಮುಂದುವರಿಸಿದರೆ ಇನ್ನಷ್ಟು ಕಷ್ಟದ ದಿನಗಳು ಬರಬಹುದು. ವ್ಯಕ್ತಿಯ ವೈಯಕ್ತಿಕ ಚಿಂತನೆ ಮತ್ತು ನಡವಳಿಕೆಗಳು ಕೂಡ ಆಡಳಿತಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮರೆಯಬಾರದು.

ಒಂದು ವೇಳೆ ಲಸಿಕೆ ಬಂದರೆ ಅದನ್ನು ಭಾರತದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಜವಾಬ್ದಾರಿ ಸರ್ಕಾರದ್ದು. ಅದು ಹೇಗೆ, ಅದರ ವೆಚ್ಚಗಳ ನಿರ್ವಹಣೆ, ಶ್ರೀಮಂತರು ಬಡವರ ನಡುವಿನ ವ್ಯತ್ಯಾಸ ಎಲ್ಲವನ್ನೂ ಗಮನಿಸಿ, ಆರ್ಥಿಕ ಒತ್ತಡ ನಿಭಾಯಿಸುವುದು ಕೂಡ ಸರ್ಕಾರಗಳೇ ಕಾರ್ಯಯೋಜನೆಯ ರೂಪಿಸಬೇಕು. ಕೇಂದ್ರ ರಾಜ್ಯ ಆ ಪಕ್ಷ ಈ ಪಕ್ಷ ಎನ್ನುವ ಯಾವ ತಾರತಮ್ಯವೂ ಇಲ್ಲದೆ ಭಾರತದ ಎಲ್ಲಾ ಪ್ರಜೆಗಳನ್ನು ಏಕ ರೀತಿಯಲ್ಲಿ ಮತ್ತು ಸುಲಭವಾಗಿ ಲಸಿಕೆ ಸಿಗುವಂತಾಗಬೇಕು. ಸರ್ಕಾರದ ಸಾಧನೆ ಎಂದರೆ ಕೇವಲ ಮಾತುಗಳು ಘೋಷಣೆಗಳಲ್ಲ ಅದರ ಪ್ರಾಮಾಣಿಕ ಅನುಷ್ಠಾನ..........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ಲೇಖನ -ವಿವೇಕಾನಂದ. ಹೆಚ್.ಕೆ.