-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ29:ಬಾಗಲಕೋಟೆ ಜಿಲ್ಲೆಯಾದ್ಯಂತ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಶ್ರಾವಣ ಮಳೆ ರೈತರ ಬದುಕನ್ನು ಕಂಗಾಲಾಗಿಸಿದೆ. ಹಲವಡೆ ಅತಿಯಾದ ಮಳೆಗೆ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ಸೇರಿದಂತೆ ಹಲವು ಜಲ ಮೂಲಗಳು ಕೊಚ್ಚಿಕೊಂಡು ಹೋಗಿ ಹಾನಿಗೀಡಾಗಿವೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ದ್ರಾಕ್ಷಿ ಹಾನಿಗೆ ಸಿಲುಕಿದೆ. ಈಲ್ಲೆಯಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ವರ್ಷಾರಂಭದಲ್ಲಿ ಕಟಾವು ಹಂತದಲ್ಲಿ ಕಾಣಿಸಿಕೊಂಡ ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ದೇಶಾದ್ಯಂತ ಜಾರಿಗೆ ಬಂದ ಲಾಕ್‍ಡೌನ್ ಕಟಾವು ಹಾಗು ಮಾರುಕಟ್ಟೆ ಅವಕಾಶ ಕಿತ್ತುಕೊಂಡಿತು. ರಫ್ತು ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯುವ ಬೆಳಗಾರರು ದ್ರಾಕ್ಷಿ ಸಾಗಾಣೆ ಮಾಡದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಪ್ರಕೃತಿ ವೈಪರಿತ್ಯ ತೋಟಗಾರಿಕೆ ಬೆಳಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ದ್ರಾಕ್ಷಿ ಬೆಳೆಗೆ ಒತ್ತಡದ ಬಿಸಿಲು ಬೇಕು. ಸ್ವಲ್ಪ ತೇವಾಂಶದ ಶೀತಗಾಳಿ, ನಿರಂತರ ತುಂತುರು ಮಳೆ, ಮಂಜು ಆವರಿಸುವಿಕೆ, ಮೋಡ ವಕಯುವಂಥ ವಾತಾವರಣ ಇದ್ದರೂ ದ್ರಾಕ್ಷಿ ಬೆಳೆಗೆ ಹಾನಿ ಕಟ್ಟಿಟ್ಟ ಬುತ್ತಿ. ಇಂಥಹುದರಿಂದಲೇ ರೈತರು ಬೆಳೆದ ದ್ರಾಕ್ಷಿ ಬೆಳೆ ಕುಸಿತದ ಭೀತಿ ಎದುರಾಗಿದೆ.
ದ್ರಾಕ್ಷಿ ಚಾಟ್ನಿ ಮಾಡುವ ಈ ಹಂತದಲ್ಲಿ ಕಳೆದ ಒಂದುವರೆ ತಿಂಗಳಿಂದ ಮೋಡ ಕವಿ ಹಾಗು ತುಂತುರು ಮಳೆ ಸುರಿಯುವದು ಸಾಮಾನ್ಯವಾಗಿದೆ. ಇದರಿಂದ ದ್ರಾಕ್ಷಿ ಬೆಳೆಗೆ ದಾವಣಿ ಎಂಬ ಎಲೆ ಉದುರುವಿಕೆ ರೋಗ ಬಾಧಿಸುತ್ತಿದ್ದರೆ, ಮತ್ತೊಂದೆಡೆ ಕರ್ಪಾ ಎಲೆ ಮೇಲೆ ಕಂದು ಬಣ್ಣದ ಚುಕ್ಕೆಗಳ ಕಂಡು ಬಂದು ಎಲೆಗಳ ಕೊಳೆತು ಉದುರುತ್ತಿವೆ. ಇದರಿಂದ ಭವಿಷ್ಯದಲ್ಲಿ ದ್ರಾಕ್ಷಿ ಇಳುವರಿ ಕುಂಠಿತ ಇಲ್ಲವೇ ಗುಣಮಟ್ಟ ಕುಸಿತವಾಗುವ ಭೀತಿ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಪ್ರಸಕ್ತ ವರ್ಷದ ದ್ರಾಕ್ಷಿ ಬೆಳೆಯು ಅಕ್ಟೋಬರ್ ತಿಂಗಳು ನಿರ್ಣಾಯಕ ತಿಂಗಳವಾಗಿದೆ. ಆದರೆ ಸದ್ಯ ದ್ರಾಕ್ಷಿ ಬಳ್ಳಿಗಳು ಸಂಪೂರ್ಣ ಸುಟ್ಟು ಕರಕಲಾದಂತೆ ಕಾಣುತ್ತ ಕಾಯಿ ಬಿಡುವ ಯಾವದೇ ಲಕ್ಷಣಗಳು ತೋಟಗಳಲ್ಲಿ ಕಾಣುತ್ತಿಲ್ಲ. ಇದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ.
ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿ ಉತ್ತಮ ಬೆಳೆ ನಿರೀಕ್ಷೆಯಲ್ಲಿರುವ ರೈತರಲ್ಲಿ ಆತಂಕದ ಛಾಯೆ ಎದ್ದು ಕಾಣುತ್ತಿದ್ದು, ದ್ರಾಕ್ಷಿ ಬಳ್ಳಿಯು ಉತ್ತಮ ಫಲ ನೀಡಲಿವೆಯೇ? ಎಂಬ ಯಕ್ಷ ಪ್ರಶ್ನೆಯಲ್ಲಿಯೇ ಕುಳಿತಿದ್ದಾರೆ.
ಮೊದಲ ಚಾಟ್ನಿ ಮೊದಲೇ ರೋಗ: ಇದೇ ಮೊದಲ ಬಾರಿಗೆ ಸಾಮಾನ್ಯವಾಗಿ ನವೆಂಬರ್ ಹಾಗು ಡಿಸೆಂಬರ್ ತಿಂಗಳುಗಳಲ್ಲಿ ಎರಡನೇ ಚಾಟ್ನಿ ಸಂದರ್ಭ ಕಾಣಿಸಿಕೊಳ್ಳುತ್ತಿದ್ದ ದಾವಣಿ ಹಾಗು ಕರ್ಪಾ ಸೇರಿದಂತೆ ಇತರೆ ರೋಗಗಳು ಮೊದಲ ಚಾಟ್ನಿ ಪೂರ್ವದಲ್ಲಿಯೇ ಅಂದರೆ ಜುಲೈ ಹಾಗು ಅಗಸ್ಟ್ ತಿಂಗಳಲ್ಲಿ ಕಾಣಿಸಿಕೊಂಡಿದೆ. ದ್ರಾಕ್ಷಿ ಗರ್ಭವೇ ಬಾರದ ಸಂದರ್ಭ ಈ ರೋಗ ಬಡಿದಿರುವದರಿಂದ ದ್ರಾಕ್ಷಿ ಬೆಳೆ ಬೆಳೆಯುವದೇ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ಉದ್ರಿ ಔಷಧಿ, ರೈತರ ಪಾಡೇನು: ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದರಲ್ಲಿ ದ್ರಾಕ್ಷಿ ಬೆಳೆಗಾರರೇ ಹೆಚ್ಚು. ಕಾರಣ ಎಕರೆಗೆ ಕನಿಷ್ಠ 5 ರಿಂದ 6 ಲಕ್ಷ ರೂ.ಗಳ ವೆಚ್ಚದೊಂದಿಗೆ ಬೆಳೆ ನಿರ್ಮಿಸುವ ಮೂಲಕ ದುಬಾರಿ ಬೆಳೆಯಾಗುವಲ್ಲಿ ಕಾರಣವಾಗಿದ್ದು, ಬೇಕಾಗುವ ಔಷಧಿ ಉದ್ರಿ ತಂದು ಬರುವ ಆದಾಯದ ನಿರೀಕ್ಷೆಯಿಲ್ಲದೆ ಹಾನಿ ಸಂಭವಿಸುವದರಿಂದ ರೈತರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
`ಪ್ರಕೃತಿ ವಿಕೋಪದಿಂದ ಕಳೆದ ಒಂದು ದಶಕದಿಂದ ನಿರಂತರ ನಷ್ಟದಲ್ಲಿದ್ದು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾನೆ. ತೋಟಗಾರಿಕೆ ಬೆಳೆಗಳಿರುವಂತೆ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪನೆಯೊಂದಿಗೆ ನೆರವಾಗಿ’.----ರಮೇಶ ಕಬಾಡಗಿ, ಯುವ ರೈತ.
`ಕೊರೊನಾ ಸಂಕಷ್ಟಕ್ಕಿಂತಲೂ ಹೆಚ್ಚಿನ ಹಾನಿ ಸದ್ಯದ ಪರಿಸ್ಥಿತಿಯಲ್ಲಿ ದವಣಿ ಹಾಗು ಕರ್ಪಾ ರೋಗ ರೈತರನ್ನು ಕಾಡಲಿದೆ. ಸೂಕ್ತ ವ್ಯವಸ್ಥೆಗಾಗಿ ತೋಟಗಾರಿಕೆ ಇಲಾಖೆ ಮುಂದಾಗಬೇಕು.’----ರವಿ ಅಥಣಿ, ದ್ರಾಕ್ಷಿ ಬೆಳೆಗಾರ, ಜಗದಾಳ.

Social Plugin