ರಬಕವಿ-ಬನಹಟ್ಟಿ,ಸೆ24: ಕಳೆದ ಐದು ತಿಂಗಳಿಂದ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನೇಕಾರರಿಗೆ ಕೊಂಚ ಸಮಾಧಾನ ತರುವಲ್ಲಿ ಕಾರಣವಾಗಿದ್ದು, ಇದೀಗ ಮಾರುಕಟ್ಟೆ ಸಾಮಾನ್ಯ ಹಂತ ತಲುಪುತ್ತಿರುವ ಹಿನ್ನಲೆ ಸೀರೆಗಳ ರಫ್ತು ಸಾಮಾನ್ಯದತ್ತ ವಾಲುತ್ತಿದೆ.
ಸೀರೆ ಉತ್ಪಾದನೆಯನ್ನೇ ಜೀವಾಳವನ್ನಾಗಿಸಿಕೊಂಡು ಸಾವಿರಾರು ಕುಟುಂಬಗಳ ಅವಲಂಬಿತ ಉದ್ಯೋಗವಾಗಿದೆ. ಕೊರೊನಾ ಹೊಡೆತದಿಂದಾಗಿ ಇಡೀ ದೇಶಾದ್ಯಂತ ನಾಲ್ಕೈದು ತಿಂಗಳಿಂದ ಒಂದೇ ಒಂದು ಸೀರೆ ರಫ್ತಾಗದ ಕಾರಣ ತೀವ್ರ ಸಂಕಷ್ಟ ಎದುರಿಸುವಲ್ಲಿ ನೇಕಾರರದ್ದಾಗಿತ್ತು. ಇದೀಗ ಎಲ್ಲೆಡೆ ಕೊರೊನಾ ಲಾಕ್‍ಡೌನ್‍ನಿಂದ ಮುಕ್ತವಾಗಿರುವ ಹಿನ್ನಲೆ ಪ್ರಮುಖ ಮಾರುಕಟ್ಟೆಗಳಾಗಿದ್ದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳನಾಡು ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ದಿನಂಪ್ರತಿ 40 ರಿಂದ 50 ಸೀರೆಗಳು ರಫ್ತಾಗುತ್ತಿರುವದರಿಂದ ಬರುವ ದೀಪಾವಳಿ ಹಬ್ಬ ನೇಕಾರರಿಗೆ ಬೆಳಕಾಗುವಲ್ಲಿ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಬಟವಡೆ ಕೊರತೆ: ಸಾಗಾಟ ಮಾಡಿದ ಸೀರೆಗಳ ಬಿಲ್ ಹಣ ಸಮಯಕ್ಕನುಸಾರವಾಗಿ ಬರುತ್ತಿಲ್ಲ. ಇದರಿಂದ ವಹಿವಾಟು ನಡೆಸುವಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಮುಂದಿನ ದಿನಗಳು ಹೀಗೆ ಮುಂದುವರೆದರೆ ಮಾಲಿಕರು ಮತ್ತಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯ ನೇಕಾರ ಮಾಲಿಕರು.
ಕೋನ್ ಯಾರ್ನ್ ಬರುತ್ತಿಲ್ಲ: ಮುಂಬಯಿಯಿಂದ ವಿಧ ವಿಧ ಬಣ್ಣಗಳಿಂದ ಸೀರೆಗಳ ನೇಯ್ಗೆಗೆ ದಿನಂಪ್ರತಿ ಸುಮಾರು 10 ಟನ್‍ನಷ್ಟು ಆಮದು ಆಗುತ್ತಿದ್ದ ಕಲರ್ ಕೋನ್ ಯಾರ್ನ್ ಸಮರ್ಪಕವಾಗಿ ದೊರಕುತ್ತಿಲ್ಲ. ಅಲ್ಲಿನ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದ ಕಾರಣ ಈ ಸಮಸ್ಯೆ ಎದುರಾಗಿದೆ. ಇತ್ತ ನೂಲಿಗೆ ಬಣ್ಣ ಹಾಕುವವರೂ ಪರ್ಯಾಯ ಉದ್ಯೋಗಕ್ಕೆ ವಾಲಿದ್ದರ ಹಿನ್ನಲೆ ಸೀರೆ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಗ್ರಿಗಳ ಕೊರತೆ ಎದುರಾಗುತ್ತಿದೆ. ಇದರಿಂದ ಸೀರೆಗಳ ಉತ್ಪಾದನೆಗೆ ತೀವ್ರ ಸಮಸ್ಯೆ ಎದುರಾಗಲು ಕಾರಣವಾಗಿದೆ.
ಸರ್ಕಾರದ ಯೋಜನೆ ಘೋಷಣೆಗೆ ಸೀಮಿತ: ಸ್ಥಳೀಯ ನೇಕಾರರು ಕೊರೊನಾ ಸಂಕಷ್ಟ ಸಂದರ್ಭದಲ್ಲಿ ನೇಯ್ದ ಸೀರೆಗಳನ್ನು ಸರ್ಕಾರ ಖರೀದಿಸಬೇಕೆಂದು ಸ್ಥಳೀಯ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಸರ್ಕಾರಕ್ಕೆ ಮಹತ್ವದ ಪತ್ರ ಬರೆದು ಒತ್ತಾಯಿಸಿತ್ತು. ಇದಕ್ಕೆ ಜವಳಿ ಸಚಿವ ಶ್ರೀಮಂತ ಪಾಟೀಲ ಪತ್ರಿಕಾ ಹೇಳಿಕೆಯನ್ನು ನೀಡಿ 500 ರಿಂದ 600 ರೂ.ಗಳ ಸೀರೆಗಳನ್ನು ರಾಜ್ಯದಲ್ಲಿ ಸುಮಾರು 8 ರಿಂದ 10 ಲಕ್ಷ ಸೀರೆಗಳನ್ನು ಖರೀದಿಸುವದಾಗಿ ಹೇಳಿಕೆ ನೀಡಿದ್ದರು. ಅದು ಹೇಳಿಕೆಯಾಗಿಯೇ ಉಳಿದಿದ್ದು, ನೇಕಾರರ ಸಹಾಯಕ್ಕೆ ಮಾತ್ರ ಬಾರದಿರುವದು ನೇಕಾರರಿಗೆ ಕಂಟಕವಾಗಿದೆ.
ಈಗಲೂ ಕೆಲ ನೇಕಾರ ಮಾಲಿಕರಲ್ಲಿ ಸೀರೆಗಳು ಇದ್ದು, ಸರ್ಕಾರ ಈಗಲಾದರೂ ತಕ್ಷಣವೇ ಸಂಕಷ್ಟ ಸಂದರ್ಭದಲ್ಲಿ ನೇಕಾರರ ಸಹಾಯಕ್ಕೆ ಬರಬೇಕೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
`ಮಾರುಕಟ್ಟೆಯಲ್ಲಿ ಇದೀಗ ಸೀರೆಗಳು ರಫ್ತಾಗುತ್ತಿದೆ. ಬೇಡಿಕೆಯಿಲ್ಲದಿದ್ದರೂ ಒದಗಿಸುತ್ತಿದ್ದೇವೆ. ಆದರೆ ಹಣ ಮಾತ್ರ ಸಮರ್ಪಕವಾಗಿ ಒದಗದೆ ತೀವ್ರ ವಿಳಂಬದಿಂದಾಗಿ ಆರ್ಥಿಕ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆ.’-----ಶಂಕರ ಜುಂಜಪ್ಪನವರ, ಜವಳಿ ಉದ್ಯಮಿ, ಬನಹಟ್ಟಿ.
`ಸೀರೆ ಉತ್ಪಾದನೆಗೆ ಮಾರುಕಟ್ಟೆಯಿಂದ ಬರುವ ಬಿಲ್ ಹಣ ವಿಳಂಬ ತೊಡಕಾಗುತ್ತಿದೆ. ರಬಕವಿ-ಬನಹಟ್ಟಿಯ ಮೊದಲಿನ ಸೀರೆ ಗತವೈಭವ ಮರಕಳಿಸುವದಿಲ್ಲವೆಂಬ ಆತಂಕವಾಗಿದೆ.’----ಸತೀಶ ಹಜಾರೆ, ಪದ್ಮಶ್ರೀ ಸಾರೀಜ್, ರಬಕವಿ.
Social Plugin