ರಬಕವಿಯಲ್ಲಿ ನಡೆದ ರೈತರ ಸಭೆಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಪುಟ್ಟಯ್ಯ ಮಾತನಾಡಿದರು.

`ರೈತರನ್ನು ಕಡೆಗಣಿಸಿದರೆ ಸರ್ಕಾರ ಉಳಿಯೋಲ್ಲ’- ಟಿ. ಪುಟ್ಟಯ್ಯ

ರಬಕವಿ-ಬನಹಟ್ಟಿ,ಸೆ14: ರಾಜ್ಯದಲ್ಲಿ ರೈತರನ್ನು ನಿರ್ಲಕ್ಷ್ಯ ತೋರುವ ಭಾವದಲ್ಲಿ ಸರ್ಕಾರದ ಹೆಜ್ಜೆಯಾಗುತ್ತಿವೆ. ರೈತರನ್ನು ಕಡೆಗಣಿಸಿದರೆ ಸರ್ಕಾರ ನಡೆಸುವದೇ ಕಷ್ಟವಾದೀತು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಪುಟ್ಟಯ್ಯ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದರು.

ರಬಕವಿಯ ಜಿಎಲ್‍ಬಿಸಿ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ಸಾವರಿನ್ ಸಕ್ಕರೆ ಕಾರ್ಖಾನೆಯು ವಿಜಯಪುರ, ಬೆಳಗಾವಿ ಹಾಗು ಬಾಗಲಕೋಟೆ ಜಿಲ್ಲೆಗಳ 1500 ರೈತರಿಗೆ ಒಟ್ಟು 21 ಕೋಟಿ ರೂ.ಗಳಷ್ಟು ಕಬ್ಬಿನ ಬಿಲ್ ಬಾಕಿಯನ್ನು ಕಳೆದ ನಾಲ್ಕು ವರ್ಷಗಳಿಂದ ನೀಡಿಲ್ಲ. ಇದಕ್ಕೆ ಸರ್ಕಾರ ಅಥವಾ ಜನಪ್ರತಿನಿಧಿಗಳು ಯಾವದೇ ಸಂಬಂಧವೇ ಇಲ್ಲವೆಂಬಂತೆ ನಿರ್ಲಕ್ಷ್ಯಭಾವನೆ ತೋರುತ್ತಿರುವದು ಸಮಂಜಸವಲ್ಲ. ರೈತರ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರೊಂದಿಗೆ ಬೆರೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟದ ಸ್ವರೂಪ ತಾಳುವದೆಂದು ಸ್ಪಷ್ಟಪಡಿಸಿದರು.

ಬೆಂಗಳೂರು ಚಲೋ: ಬರುವ ದಿ.22 ರಂದು ಬೆಂಗಳೂರಿನ ಸಕ್ಕರೆ ಆಯುಕ್ತರ ಕಚೇರಿಗೆ ಈ ಭಾಗದಿಂದ ಸುಮಾರು 500 ಕ್ಕೂ ಅಧಿಕ ರೈತರು ತೆರಳಲಿದ್ದೇವೆಂದು ರೈತ ಮುಖಂಡ ಗಂಗಾಧರ ಮೇಟಿ ತಿಳಿಸಿದರು.

ಸಾವರಿನ್ ಸಕ್ಕರೆ ಕಾರ್ಖಾನೆ ಹರಾಜು ಆಗಿ 21 ಕೋಟಿ ರೂ. ರೈತರಿಗೆ ಬರಬೇಕಾದ ಹಣವನ್ನು ಸರ್ಕಾರವೇ ತಲುಪಿಸಬೇಕು. ಸದ್ಯ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಕಾರ್ಖಾನೆ ಮಾತ್ರ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿದೆ. ಕಾರ್ಖಾನೆಗೆ ಸಾಲ ನೀಡಿದ ಬ್ಯಾಂಕ್ ಹಾಗು ಸರ್ಕಾರ ಸೂಕ್ತ ಕ್ರಮಗಳೊಂದಿಗೆ ಅಮಾಯಕ ರೈತರಿಗೆ ಕಂಟಕವಾಗುವ ಬದಲಾಗಿ, ಸೂಕ್ತ ಸಹಕಾರದೊಂದಿಗೆ ಬಿಲ್ ಹಣ ಆಯಾ ರೈತರಿಗೆ ಒದಗಿಸುವ ಮೂಲಕ ನಂತರದ ಕಾರ್ಖಾನೆ ಹರಾಜು ಅಥವಾ ಮುಟ್ಟುಗೋಲಿನ ಬಗ್ಗೆ ಅವಲೋಕನ ನಡೆಸಬೇಕೆಂದು ಮೇಟಿ ತಿಳಿಸಿದರು.

ಇದೇ ಸಂದರ್ಭ ರೈತ ಸಂಘದ ರಾಜ್ಯ ಸಂಚಾಲಕ ಶಮ್ದಾದ್ ಬೇಗಂ, ಅರವಿಂದ ದಳವಾಯಿ, ಶ್ರೀಕಾಂತ ಗುಳ್ಳನ್ನವರ, ಚನ್ನಪ್ಪ ಪೂಜಾರಿ, ಶ್ರೀಶೈಲ ಅಗಡಿ, ಹೊನ್ನಪ್ಪ ಬಿರಡಿ, ಮುತ್ತಪ್ಪ ಕೊಣ್ಣೂರ, ಅಲ್ಲಪ್ಪ ಅರೆನಾಡ ಸೇರಿದಂತೆ ನೂರಾರು ರೈತರು ಹಾಜರಿದ್ದರು.