ರಬಕವಿ ಬನಹಟ್ಟಿ ತಾಲ್ಲೂಕಿನ ಸಾವರಿನ್ ಸಕ್ಕರೆ ಕಾರ್ಖಾನೆಯ ರೈತರ ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ರೈತ ಸಂಘದ ಮುಖಂಡರು ಶಾಸಕ ಸಿದ್ದು ಸವದಿಯವರಿಗೆ ಮನವಿ ಸಲ್ಲಿಸಿದರು.

ಸಾವರಿನ್ ಸಕ್ಕರೆ ಕಾರ್ಖಾನೆಯ ಕಬ್ಬಿನ ಬಿಲ್ ಪಾವತಿ: ಸಚಿವರ ಗಮನಕ್ಕೆ ತರುವೆ

ರಬಕವಿ-ಬನಹಟ್ಟಿ,ಸೆ16: ತಾಲ್ಲೂಕಿನ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಇದುವರೆಗೆ ಬಿಲ್ ಪಾವತಿಸದೆ ಇರುವುದನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಸಕ್ಕರೆ ಸಚಿವರ ಗಮನಕ್ಕೆ ತಂದು ಆದಷ್ಟು ಬೇಗನೆ ರೈತರಿಗೆ ಕಬ್ಬಿನ ಬಿಲ್ ಪಾವತಿಸುವ ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಅವರು ಬುಧವಾರ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ರೈತ ಸಂಘದ ಮುಖಂಡರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಪತ್ರಿಕೆಯ ಜೊತೆಗೆ ಮಾತನಾಡಿದರು. ಈ ವಿಷಯವನ್ನು ಬರುವ ಸದನದಲ್ಲಿಯೂ ಕೂಡಾ ಚರ್ಚೆ ಮಾಡುತ್ತೇನೆ. ಕಬ್ಬು ಪೂರೈಸಿದ ರೈತರು ಮತ್ತು ಕಬ್ಬು ಪೂರೈಕೆಯಲ್ಲಿ ತೊಡಗಿರುವ ಎಜೆಂಟರೂ ಕೂಡಾ ಸಾಕಷ್ಟು ಸಮಸ್ಯೆಯಲ್ಲಿ ತೊಡಗಿಕೊಂಡಿದ್ದಾರೆ. ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಗಂಗಾಧರ ಮೇಟಿ ಮಾತನಾಡಿ, ಕಬ್ಬು ಪೂರೈಸಿದ ರೈತರು ಸಂಕಷ್ಟದ ಸ್ಥತಿಯಲ್ಲಿದ್ದಾರೆ. ಅದೇ ರೀತಿಯಾಗಿ ಕಳೆದ ಬಾರಿಯ ಪ್ರವಾಹದಿಂದಲೂ ಕೂಡಾ ರೈತರು ಚೇತರಿಕೆಗೊಂಡಿಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು  ತಿಳಿಸಿದರು.

ರೈತ ಸಂಘದ ಮುಖಂಡ ಹೊನ್ನಪ್ಪ ಬಿರಡಿ ಮಾತನಾಡಿ, ಅಂದಾಜು 900 ಕ್ಕೂ ಹೆಚ್ಚು ರೈತರ ರೂ.20 ಕೋಟಿ 8 ಲಕ್ಷ ಬಾಕಿ ಇದೆ.  ಆದಷ್ಟು ಬೇಗನೆ ಶಾಸಕರು ಈ ನಿಟ್ಟಿನಲ್ಲಿ ಗಮನ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅಶೋಕ ದೇಸಾಯಿ, ರಾಜು ಲೋಕನ್ನವರ,ಶ್ರೀಕಾಂತ ಘೂಳನ್ನವರ, ಬಂದು ಪಕಾಲಿ,ಲಕ್ಷ್ಮಣ ಬ್ಯಾಳಿ, ಮಲ್ಲು ಜಾಲಿಕಟ್ಟಿ ಸೇರಿದಂತೆ ಅನೇಕರು ಇದ್ದರು.