◆ 'ಡಾಕ್ಟರೇಟ್' ಬಗ್ಗೆ ವಿಷ್ಣು ಉವಾಚ! ◆
● 'ಡಾಕ್ಟರ್ ಆಗಲು ನನಗೆಲ್ಲಿದೆ ಅರ್ಹತೆ?' ●
ಇಂದಿನ ದಿನಮಾನದಲ್ಲಿ ಹಾದಿಗೊಬ್ಬ, ಬೀದಿಗೊಬ್ಬ ಡಾಕ್ಟರ್ ಇದ್ದಾರೆ! ನಾನು ಹೇಳುತ್ತಿರುವುದು MBBS ಡಾಕ್ಟರ್ ಬಗ್ಗೆ ಅಲ್ಲ, ಯೂನಿವರ್ಸಿಟಿ ಹೆಸರಲ್ಲಿ ಬೇಕಾಬಿಟ್ಟಿ ಸಂಸ್ಥೆಗಳು ಕೊಡಿಸುವ ಬಿಟ್ಟಿ 'ಡಾಕ್ಟರೇಟ್ ಪದವಿ'ಗಳ ಬಗ್ಗೆ! ಅನರ್ಹರ ನಡುವೆ ನಿಜವಾಗಿಯೂ ಅರ್ಹತೆ ಉಳ್ಳವರು ನಾಚಿಕೊಳ್ಳುವಂಥಾ ದಾರಿದ್ರ್ಯದ ಪರಿಸ್ಥಿತಿ ಉಂಟಾಗಿರುವುದು ದುರಂತವೇ ಸರಿ! ಈಗ ಇಲ್ಲಿ ನಾನು ಹೇಳ ಹೊರಟಿರುವುದು ಡಾ|ವಿಷ್ಣುವರ್ಧನ್ ಅವರ ಬಗ್ಗೆ. ಹದಿನಾಲ್ಕು ವರ್ಷಗಳ ಹಿಂದೆ ಬೆಂಗಳೂರು ಯೂನಿವರ್ಸಿಟಿ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಿತು. ಆಗ ಅವರು ಪಟ್ಟ ಮುಜುಗರಕ್ಕೆ ಸ್ವತಃ ನಾನೇ ಸಾಕ್ಷಿಯಾಗಿದ್ದೇನೆ! ಸೆಂಚುರಿ ಕ್ಲಬ್'ನ ಸಂಪಿಗೆ ವಿಲ್ಲೇಜ್'ನಲ್ಲಿ ನನ್ನ ಎದುರಾ ಬದುರಾ ಕೂತು ವಿಷ್ಣುವರ್ಧನ್ ಅವರು ಹೇಳಿರುವ ಮಾತುಗಳು ಈಗಲೂ ಕಿವಿಯಲ್ಲಿದೆ. ಆ ಮಾತುಗಳಿಗೆ ಅಕ್ಷರ ರೂಪ ಕೊಟ್ಟು ನಿಮ್ಮ ಮುಂದಿಡುವುದು ನನ್ನ ಕೆಲಸ. ಪ್ಲೀಸ್ ಓದಿ :
'ಇದು ತೀರಾ ಮುಜುಗರದ ವಿಷಯ. 'ಡಾ|ವಿಷ್ಣುವರ್ಧನ್ ಅವರೇ' - ಅಂತ ಯಾರಾದರೂ ಕರೆದರೆ ಯಾರನ್ನೋ ಕರೆಯುತ್ತಿರುವಂತೆ ಭಾಸವಾಗುತ್ತಿದೆ! ನಿಜ ಹೇಳ ಬೇಕೆಂದರೆ, ಡಾಕ್ಟರೇಟ್ ಎಂಬ ಗೌರವ ಪದವಿ ಪಡೆದ ಅಷ್ಟೂ ಮಹಾನುಭಾವರ ಚಿತ್ರ ಕಣ್ಣ ಮುಂದೆ ಬಂದಾಗಲೆಲ್ಲಾ ಏನೋ ಇಂಫಿರಿಯಾರಿಟಿ ಕಾಂಪ್ಲೆಕ್ಸ್ ಕಾಡುತ್ತದೆ. ನಾನೇನು ಸಾಧನೆ ಮಾಡಿದ್ದೇನೆ ಅಂತ ನನಗೆ ಈ ಪ್ರತಿಷ್ಠಿತ ಗೌರವ ಪದವಿಯನ್ನು ಕೊಟ್ಟಿದ್ದಾರೋ? ನನ್ನ ಕೊಡುಗೆ ಏನೂಂತ ಈ ಪುರಸ್ಕಾರ ನನಗೆ ಪ್ರಾಪ್ತಿಯಾಯಿತೋ? ಅರ್ಹತೆ ಮೀರಿದ ಗೌರವ ಸಿಕ್ಕಾಗ ಮನಸ್ಸಾಕ್ಷಿ ಒಪ್ಪುವುದು ಕಷ್ಟವಾಗುತ್ತದೆ. ಬೇರೆಯವರಿಗೆ ಈ ಪುರಸ್ಕಾರ ಲಭ್ಯವಾದಾಗ ನಾನು ಖುಷಿಪಟ್ಟು ಅಭಿನಂದಿಸಿದ್ದೇನೆ. ಆದರೆ ಅದೇ ಗೌರವ ನನಗೆ ಸಿಕ್ಕಾಗ ಮುಜುಗರ ಅನುಭವಿಸಿದ್ದೇನೆ. ಯಾರಿಂದಾದರೂ ಅಭಿನಂದನೆ ಸ್ವೀಕರಿಸೋವಾಗ ಮನಸ್ಸು ಮುದುಡುತ್ತೆ. ಖಡಾಖಂಡಿತವಾಗಿ ನಾನು ಹೇಳ್ತಿದ್ದೇನೆ : ಈ ಗೌರವ ಡಾಕ್ಟರೇಟ್ ಪದವಿಗೆ ನಾನು ಕಿಂಚಿತ್ತೂ ಅರ್ಹನಲ್ಲ. ಯಾರೋ ಮೇಕಪ್ ಮಾಡಿಸಿದರು, ಯಾರೋ ಡಯಲಾಗ್ ಬರೆದು ಕೊಟ್ಟರು, ಯಾರೋ ಕ್ಯಾಮೆರಾದಲ್ಲಿ ಸೆರೆ ಹಿಡಿದರು, ಇನ್ಯಾರೋ ಡೈರೆಕ್ಟ್ ಮಾಡಿದರು, ಮತ್ಯಾರೋ ಎಡಿಟ್ ಮಾಡಿದರು...ಇಷ್ಟಕ್ಕೇ ಈ ಗೌರವ ಬಂತಾ? ಹಾಗೆ ನೋಡಿದರೆ ಈ ಗೌರವ ಪದವಿಗೆ ನನಗಿಂತಲೂ ನನ್ನ ಶ್ರೀಮತಿ ಭಾರತಿ ಅರ್ಹರು! ನನಗಿಂತ ಹಿರಿಯೆ, ಸೀನಿಯರ್ ಆರ್ಟಿಸ್ಟ್. ಅವರ ಸಾಧನೆಯ ಮುಂದೆ ನನ್ನದೇನಿದೆ ಹೇಳಿ? ಇಷ್ಟೆಲ್ಲಾ ಹೇಳಿದ ಮೇಲೆ 'ನೀವ್ಯಾಕೆ ಇದನ್ನು ಸೌಜನ್ಯಪೂರ್ವಕವಾಗಿ ಹಿಂದಿರುಗಿಸಬಾರದು?' - ಅಂತ ನೀವು ಪ್ರಶ್ನಿಸಿದರೆ ನನ್ನ ಉತ್ತರ ಹೀಗಿದೆ : ಅದು ಅಹಂಕಾರವಾಗತ್ತೆ. ಹಿರಿಯರು ಆಶೀರ್ವಾದ ಮಾಡಿದಾಗ ಯಾರಾದ್ರೂ ಅದನ್ನು ತಿರಸ್ಕರಿಸುತ್ತಾರಾ? ಈಗ ನಾನು ಮಾಡಬಹುದಾದದ್ದು ಇಷ್ಟೇ : ಬೆಂಗಳೂರು ಯೂನಿವರ್ಸಿಟಿಯವರು ಪುರಸ್ಕರಿಸಿದ ಈ ಗೌರವ ಪದವಿಯನ್ನು ಇಡಬೇಕಾದ ಜಾಗದಲ್ಲಿ ಇಟ್ಟು ಪೂಜಿಸೋದಷ್ಟೇ ನನ್ನ ಕೆಲಸ. ಈ ಗೌರವವನ್ನು ನನ್ನ ಪೂಜ್ಯ ಗುರುಗಳಾದ ನರಸಿಂಹಯ್ಯನವರ ಪಾದಕ್ಕೆ ಅರ್ಪಿಸುತ್ತಿದ್ದೇನೆ...' - ಎಂದು ಹೇಳುತ್ತಾ ಹೊರಟು ಬಿಟ್ಟರು 'ರಾಮಾಚಾರಿ'! ಹೆಗಲ ಮೇಲಿನ ಬಿಳಿಯ ಶಾಲು ನೆಲವನ್ನು ಒರೆಸುತ್ತಾ ಅವರ ಹಿಂದಿಂದೆ ಬರುತ್ತಿದ್ದರೆ ಡಾಕ್ಟರೇಟ್ ಪದವಿಯ ನೆನಪಾಯಿತು! ಜೋರಾಗಿ ಕೂಗಿ ಹೇಳಿದೆ : 'ಅಭಿನಂದನೆಗಳು ಸಾರ್...' - ತಿರುಗಿ ನೋಡಿ ತುಟಿಯನ್ನು ಓರೆ ಮಾಡಿ ತಮ್ಮ ವಿಶಿಷ್ಟ ಶೈಲಿಯ ನಗೆ ನಕ್ಕು ನೆಲವನ್ನು ಒರೆಸುತ್ತಿದ್ದ ಶಾಲಿನ ಚುಂಗನ್ನು ಈ ಕಡೆ ಹೆಗಲ ಮೇಲೆ ಹಾಕಿಕೊಂಡು ಸರಸರ ನಡೆದು ಮಾಯವಾದರು ವಿಷ್ಣು ದಾದಾ...

Social Plugin