(ಸಾಂಧರ್ಬಿಕ ಚಿತ್ರ)

ಅಕ್ರಮ ಮದ್ಯ-ಮಟ್ಕಾ ಹಾವಳಿ

*ಮಟ್ಕಾಕ್ಕಿದೆ `ಮಹಾ’ಜಾಲ

-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ,ಸೆ15: ರಬಕವಿ-ಬನಹಟ್ಟಿ, ತೇರದಾಳ ಹಾಗು ತಾಲೂಕಿನ ಕೆಲ ಗ್ರಾಮಗಳಲ್ಲಿ ಪೊಲೀಸ್ ಹಾಗು ಅಬಕಾರಿ ಇಲಾಖೆ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಅಕ್ರಮ ಮದ್ಯ ಮಾರಾಟ ಹಾಗು ಮಟ್ಕಾ ಜೂಜಾಟ ಹೆಚ್ಚುತ್ತಿದ್ದು ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ.

ಮಟ್ಕಾ: ತಾಲೂಕಿನ ಕೆಲ ಗ್ರಾಮಗಳ ಹೊಟೇಲ್, ಪಾನಶಾಪ್, ಕಿರಾಣಿ ಅಂಗಡಿ ಸೇರಿ ಗುಪ್ತ್ ಗುಪ್ತ್ ಆಗಿ ಮಟ್ಕಾ ನಂಬರ್ ಬರೆಯುವವರ ಸಂಖ್ಯೆ ಹೆಚ್ಚಿದೆ. ಸಂಜೆಯಾಗುತ್ತಿದ್ದಂತೆ ಮಟ್ಕಾ ದಂಧೆ ಜೋರಾತಿ ನಡೆಯುತ್ತದೆ. ಗೌಪ್ಯವಾಗಿ ಮಟ್ಕಾ ನಂಬರ್ ಬರೆಯುವವರ ಸಂಖ್ಯೆ ಹಾಗು ಆಡುವವರ ಸಂಖ್ಯೆ ಹೆಚ್ಚುತ್ತಿದೆ. ಬಡವರು, ಕೂಲಿ ಕಾರ್ಮಿಕರು, ದುಡಿದ ಹಣವನ್ನೆಲ್ಲ ಮಟ್ಕಾಕ್ಕೆ ಸುರಿದು ಬೀದಿಗೆ ಬರುತ್ತಿದ್ದಾರೆ. ಕುಟುಂಬಗಳು ಹಾಳಾಗುತ್ತಿವೆ. 

`ಮಹಾ’ ಜಾಲ: ದಿನಂಪ್ರತಿ ಅಂಕಿಗಳ ಆಟ ನಡೆಯುತ್ತಲೇ ಇರುತ್ತದೆ. ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಕೆಲ ಪ್ರಮುಖ ಬುಕ್ಕಿಗಳಿಂದ ಮಹಾರಾಷ್ಟ್ರದ ಮೈಶ್ಯಾಳ ಎಂಬ ಗ್ರಾಮ ಮಟ್ಕಾ ಬುಕ್ಕಿಗಳ ಕೇಂದ್ರ ಬಿಂದುವಾಗಿದೆ. ಇಲ್ಲಿಯ ಜನರ ಹಣವನ್ನು ಒಂದಕ್ಕೆ ಎಂಬತ್ತು ಪಟ್ಟು ಮಾಡಿಕೊಡುವದಾಗಿ ಹೇಳುತ್ತ ಸಾಲ-ಶೂಲದೊಂದಿಗೆ ಹಣ ಸುರಿಯುತ್ತ ಮನೆಗಳನ್ನೇ ಒತ್ತಿಯಿಡುತ್ತಿದ್ದಾರೆ. 

ಅಕ್ರಮ ಮದ್ಯ: ಪಟ್ಟಣ ಹಾಗು ಸುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮದ್ಯದಂಗಡಿಗಳನ್ನು ಬಂದ್ ಮಾಡಿದ ದಿನಗಳಲ್ಲಿ ಎಲ್ಲೆಂದರಲ್ಲಿ ಮದ್ಯ ಸರಾಗವಾಗಿ ಹೆಚ್ಚಿನ ದರದಲ್ಲಿ ಅಕ್ರಮವಾಗಿ ಮದ್ಯ ದೊರಕುತ್ತಿರುವದು ಸಾಮಾನ್ಯವಾಗಿದೆ.

ಲಾಕ್‍ಡೌನ್ ನಂತರ ಹೆಚ್ಚಳ: ಮೊದಲಿನಿಂದಲೂ ಅಲ್ಲಲ್ಲಿ ಮಟ್ಕಾ ಜೂಜಾಟ ಸಾಮಾನ್ಯವಾಗಿತ್ತು. ಇದೀಗ ಲಾಕ್‍ಡೌನ್ ದಿನಗಳಲ್ಲಿ ಸದ್ದಿಲ್ಲದೆ ಅವ್ಯಾಹತವಾಗಿ ಬೆಳೆಯುತ್ತಿದ್ದು, ಇದೀಗ ರಬಕವಿಯ ಬಸ್ ನಿಲ್ದಾಣ, ಬನಹಟ್ಟಿಯ ಬಸ್ ನಿಲ್ದಾಣ, ಗಾಂಧಿ ವೃತ್ತದ ಬಳಿ ಹೀಗೆ ಕೆಲ ಆಯ್ದ ಪ್ರದೇಶಗಳಲ್ಲಿ ಜೂಜಾಟ ಜೋರಾಗಿದೆ.

ಮದ್ಯ ಮಾರಾಟವು ಲಾಕ್‍ಡೌನ್ ದಿನಗಳಲ್ಲಿ ತಿಂಗಳಿಗೂ ಹೆಚ್ಚು ದಿನಗಳ ಕಾಲ ಬಂದ್ ಆಗಿದ್ದವು. ಆ ಸಂದರ್ಭದಲ್ಲಿ ಕೆಲ ಅಕ್ರಮ ವ್ಯಕ್ತಿಗಳು ಇದನ್ನೇ ಬಂಡವಾಳವನ್ನಾಗಿಸಿಕೊಂಡು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ರುಚಿ ಹಚ್ಚಿಕೊಂಡಿದ್ದರು. ಈಗಲೂ ಮುಂದುವರೆಸಿಕೊಂಡು ಮದ್ಯದಂಗಡಿಗಳಿಗೆ ಸರ್ಕಾರದಿಂದ ಅಧಿಕೃತವಾಗಿ ಬಂದ್ ಮಾಡಿದ ಸಂದರ್ಭಗಳಲ್ಲಿ ಇವರದ್ದೇ ದರ್ಬಾರ್ ಮೂಲಕ ಅಕ್ರಮವಾಗಿ ಮದ್ಯ ಮಾರಾಟ ಸಾಮಾನ್ಯವಾಗಿದೆ.