ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೈಕ್ ಸಮೇತ ಬಂಧಿಸಿರುವ ಬನಹಟ್ಟಿ ಪೊಲೀಸರು.

ಅರ್ಧ ಕೆಜಿ ಗಾಂಜಾ ವಶ: ಆರೋಪಿ ಬಂಧನ

ರಬಕವಿ-ಬನಹಟ್ಟಿ,ಸೆ13: ತನ್ನ ಜಮೀನಿನಲ್ಲಿ ಬೆಳೆದ ಗಾಂಜಾವನ್ನು ಮಾರಾಟಕ್ಕೆಂದು ತರಲಾಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಬನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಭರತೇಶ ಸುರೇಂದ್ರ ಅಜ್ಜಪ್ಪಗೋಳ(44) ಎಂಬ ವ್ಯಕ್ತಿಯು ತನ್ನ ಜಮೀನದ ಕಬ್ಬಿನ ಬೆಳೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದು ಅವುಗಳನ್ನು ಕಿತ್ತು ಒಣಗಿಸಿ ನಂತರ ಮಾರಾಟ ಮಾಡುತ್ತಿದ್ದನು. ರವಿವಾರದಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಸಂಗಿಯ ಡೆಂಪೋ ಡೇರಿ ಹತ್ತಿರದ ಮದನಮಟ್ಟಿ-ಅಸ್ಕಿ-ಆಸಂಗಿ ರಸ್ತೆಯ ಮೇಲೆ ಮಹಿಷವಾಡಗಿ ಗ್ರಾಮದ ಕಡೆಯಿಂದ ತನ್ನ ಸ್ವಂತ ಬೈಕ್ ಮೂಲಕ ಎಣ್ಣೆಯ ಟ್ಯಾಂಕ್ ಮೇಲೆ ಕೈಚೀಲದಲ್ಲಿ ಅರ್ಧ ಕೆಜಿಯಷ್ಟು ಗಾಂಜಾ ತಂದು ಸಾಗಾಟ ಮಾಡಿಕೊಂಡು ಮಾರಾಟ ಮಾಡುವ ಸಲುವಾಗಿ ಬರುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ಪ್ರಕರಣಕ್ಕೆ ಸಂಬಂಧ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ತನಿಖೆ ಮುಂದುವರೆಸಿದ್ದಾರೆ.