ಶ್ರಾವಣ ಮಾಸದ ಕೃಷ್ಣಪಕ್ಷ ಅಷ್ಟಮಿಯಾದ ಇಂದು, ರೋಹಿಣಿ ನಕ್ಷತ್ರವು ಆಕಾಶದಲ್ಲಿ ಉದಯಿಸುವ ಸಮಯದಲ್ಲಿ, ಸಾಂಕೇತಿಕವಾಗಿ ಚಂದ್ರನು ಗೋಚರಿಸುವ ಸಂದರ್ಭದಲ್ಲಿ, ದೇವಕಿಯಲ್ಲಿ ಶ್ರೀ ಕೃಷ್ಣನ ಜನನವಾಗುವ ಶುಭದಿನವಾಗಿದೆ.
ಶ್ರೀ ಕೃಷ್ಣನ ಜನನವು ಅತ್ಯಂತ ರೋಚಕವಾದ, ಆಶ್ಚರ್ಯಕರವಾದ ಸನ್ನಿವೇಶದಲ್ಲಿ ಆಯಿತು. ಮಗುವಿನ ಜನನವಾದ ಕೂಡಲೇ ತನಗೆ ತಿಳಿಸುವಂತೆ ಹೇಳಿ ಅನೇಕ ಗುಪ್ತಚಾರರನ್ನೂ ಮತ್ತು ಸೇನಾನಿಗಳನ್ನು ದೇವಕಿ, ವಸುದೇವರಿದ್ದ ಬಂದೀಖಾನೆಯ ಸುತ್ತ ಕಂಸ ಮಹಾರಾಜನು ನೇಮಿಸಿದ್ದನು. ಇದಕ್ಕೆ ಕಾರಣ ಕಂಸನಿಗೆ ತನ್ನ ತಂಗಿ ದೇವಕಿಯ ಬಗ್ಗೆ ಪ್ರೀತಿಯಿರಲಿಲ್ಲವೆಂದಲ್ಲ. ದೇವಕಿಯು ಕಂಸನಿಗೆ ಯಾವ ಕೇಡನ್ನೂ ಬಗೆದಿರಲಿಲ್ಲ. ಸತ್ಯಾಂಶವೇನೆಂದರೆ, ಕಂಸನು ತನ್ನ ತಂಗಿಯ ವಿವಾಹದ ದಿನ ವೈಭವಯುಕ್ತ ಮೆರವಣಿಗೆಯನ್ನು ಏರ್ಪಡಿಸಿ, ಸಂತೋಷದಿಂದ ಕುಣಿಯುತ್ತಿದ್ದನು. ಅಂತಹ ಸಂದರ್ಭದಲ್ಲಿ ಆತನಿಗೊಂದು ಅಶರೀರವಾಣಿಯಾಯಿತು:
“ಎಲವೋ ಕಂಸ, ನೀನು ಇಷ್ಟೊಂದು ಹಿಗ್ಗುವ ಸಮಯ ಇದಲ್ಲ. ನಿನ್ನ ಪ್ರೀತಿಯ ತಂಗಿಯಲ್ಲಿ ಹುಟ್ಟುವ ಎಂಟನೇ ಶಿಶುವೇ ನಿನ್ನ ಪಾಲಿನ ಯಮಧರ್ಮನಾಗಿರುತ್ತಾನೆ, ಎಚ್ಚರ.”
ಈ ಅಶರೀರ ವಾಣಿಯಿಂದ ಅತ್ಯಂತ ವ್ಯಾಕುಲಗೊಂಡ ಕಂಸನು ಎಂಟನೇ ಶಿಶುವಿನ ಜನನಕ್ಕೆ ಕಾಯುವ ನಿರ್ಧಾರ ಮಾಡುತ್ತಾನೆ. ಆದರೆ, ಅದೇ ಸಮಯಕ್ಕೆ ಆಗಮಿಸಿದ ನಾರದ ಮಹಾಮುನಿಯು ಕಂಸನಿಗೆ ಕಿವಿಮಾತೊಂದನ್ನು ಹೇಳುತ್ತಾರೆ. “ದೈವದ ಮಾಯೆ ಯಾರಿಂದಲೂ ತಿಳಿಯಲಾಗುವುದಿಲ್ಲ, ಕಂಸ. ನೀನು ಎಂಟನೇ ಶಿಶುವಿಗೆ ಕಾಯುತ್ತಿದ್ದರೆ, ಅದಕ್ಕಿಂತ ಮುಂಚಿತವಾಗಿ ಜನಿಸುವ ಶಿಶುವೇ ನಿನಗೆ ಮಾರಕವಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ನಿನ್ನ ಎಚ್ಚರದಲ್ಲಿ ನೀನಿರುವುದು ಒಳಿತು.”
ಕಂಸನು ಭಯಗೊಂಡನು. ದೇವಕಿಯಲ್ಲಿ ಜನಿಸುವ ಎಲ್ಲ ಶಿಶುಗಳನ್ನೂ ಅವುಗಳು ಜನಿಸಿದ ಕ್ಷಣದಲ್ಲೇ ಕೊಂದುಹಾಕಲು ನಿರ್ಧರಿಸುತ್ತಾನೆ. ಆದರೆ, ಮನುಜ ನೆನೆಯುವುದು ಒಂದಾದರೆ, ದೈವ ಬಗಿಯುವುದು ಮತ್ತೊಂದು ಎಂಬುದು ಸಾರ್ವಕಾಲಿಕ ಸತ್ಯ. ಶ್ರೀ ಕೃಷ್ಣನು ಜನಿಸಿದ ಮಧ್ಯರಾತ್ರಿಯ ಆ ಸಂದರ್ಭದಲ್ಲಿ, ಬಂದೀಖಾನೆಯ ಸುತ್ತ ಕಾವಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ದೀರ್ಘ ನಿದ್ರೆಗೆ ವಶರಾಗಿಬಿಟ್ಟರು. ಬಂದೀಖಾನೆಯ ದ್ವಾರವನ್ನೊಳಗೊಂಡತೆ, ಎಲ್ಲ ದ್ವಾರಗಳೂ ತಾವಾಗಿಯೇ ತೆರೆದುಕೊಂಡವು.
ವಸುದೇವನಿಗೆ ನವಜಾತ ಶಿಶು ಶ್ರೀ ಕೃಷ್ಣನು ತನ್ನನ್ನು ಬ್ರಜಭೂಮಿಯಲ್ಲಿರುವ ಯಶೋದ-ನಂದಗೋಪಾಲರ ಮನೆಗೆ ಕೊಂಡೊಯ್ಯಬೇಕೆಂದು ನಿರ್ದೇಶಿಸುತ್ತಾನೆ. ಇಂತಹ ವಿಶಿಷ್ಟ ರೀತಿಯಲ್ಲಿ ಜನ್ಮತಾಳಿದ ಈ ಶುಭದಿನದಂದು, ಹಲವರು ಅತ್ಯುತ್ಸಾಹದಿಂದ ಹಬ್ಬವನ್ನಾಚರಿಸುತ್ತಾರೆ.
ಅನೇಕರು, ಶ್ರೀ ಕೃಷ್ಣನ ಜನನವಾಗುವ ಮಧ್ಯರಾತ್ರಿಯವರಿಗೂ, ರೋಹಿಣಿ ನಕ್ಷತ್ರವು ಚಂದ್ರಮನೊಂದಿಗೆ ಗೋಚರವಾಗುವ ತನಕ ಉಪವಾಸದಿಂದಿದ್ದು, ಶ್ರೀ ಕೃಷ್ಣನಿಗೆ ಅರ್ಘ್ಯ, ಪಾದ್ಯಾದಿಗಳನ್ನು ನೀಡಿ, ಅರ್ಚಿಸಿ, ಆರಾಧಿಸಿ ಮಾರನೇ ದಿನ ಪ್ರಾತಃಕಾಲದಲ್ಲಿ ಎದ್ದು, ಪುನಃ ಅರ್ಚನೆಗಳನ್ನು ಮಾಡಿ, ಹಬ್ಬವನ್ನಾಚರಿಸುವರು.
Social Plugin