ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)...

ನಾಚಿಕೆ - ನಾಚಿಕೆ - ನಾಚಿಕೆ.....

ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ.....

ಕಳೆದ ಬಾರಿಯ ನೆರೆ ಸಂತ್ರಸ್ತರಲ್ಲಿ ಇನ್ನೂ ಅನೇಕರಿಗೆ ಪರಿಹಾರವೇ ಸಿಕ್ಕಿಲ್ಲ. ಅದಕ್ಕಾಗಿ ಅವರು ಈಗಲೂ ಸರ್ಕಾರಿ ಕಚೇರಿ ಸುತ್ತುತ್ತಲೇ ಇದ್ದಾರೆ......
ರಾಷ್ಟ್ರಪತಿ - ಪ್ರಧಾನ ಮಂತ್ರಿ,
ವಿವಿಧ ಮಂತ್ರಿಗಳು - ಸಂಸದರು * ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು - ಶಾಸಕರು - 
* ಮಹಾನಗರ ಪಾಲಿಕೆ - ಜಿಲ್ಲಾ ಪಂಚಾಯತ್ - ನಗರಸಭೆ - ತಾಲ್ಲೂಕು ಪಂಚಾಯತ್ -  ಪುರಸಭೆ - ಮಂಡಲ ಪಂಚಾಯತ್ *
ಕೇಂದ್ರ ಸಂಪುಟ ಕಾರ್ಯದರ್ಶಿ - ವಿವಿಧ ಇಲಾಖೆಗಳ ಕಾರ್ಯದರ್ಶಿ ಆಯುಕ್ತರು - ರಾಜ್ಯದ ಮುಖ್ಯ ಕಾರ್ಯದರ್ಶಿ - ವಿವಿಧ ಇಲಾಖೆಗಳ ಕಾರ್ಯದರ್ಶಿ ಆಯುಕ್ತರು - ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕರು - ತಹಸೀಲ್ದಾರ್ - ಕಂದಾಯ ಅಧಿಕಾರಿ - ಪಿಡಿಓ *
ಇನ್ನೂ ಇನ್ನೂ ಇವರಿಗೆ ಸಹಾಯಕ ಅಧಿಕಾರಿಗಳು, ಲೆಕ್ಕಪರಿಶೋಧಕರು, ಪೋಲೀಸರು, ವಾಹನಗಳು ಮತ್ತು ಅದರ ಚಾಲಕರು, 
ಹೇಳುತ್ತಾ ಹೋದರೆ ಇದೇ ಒಂದು ದೊಡ್ಡ ಪಟ್ಟಿ......
ಸಾರ್ವಜನಿಕ ಹಣದಲ್ಲಿ ಇವರೆಲ್ಲರೂ ಸೇರಿ ಒಂದು ಅಂದಾಜಿನಂತೆ ದೇಶದಲ್ಲಿ ಇರುವ ಆದಾಯದ ಶೇಕಡಾ 60/70 ಕ್ಕೂ ಹೆಚ್ಚು  ಇವರ ಸಂಬಳ, ಖರ್ಚು, ವಿವಿಧ ಭತ್ಯೆಗಳು ಮತ್ತು ಇವರ ಪ್ರವಾಸ ಕಚೇರಿಗಳ ನಿರ್ವಹಣೆಗೇ ಖರ್ಚಾಗುತ್ತದೆ. ಇದರಲ್ಲಿ ಇವರು ಪಡೆಯುವ ಲಂಚದ ಹಣ ಸೇರಿಲ್ಲ.
ಇಷ್ಟೆಲ್ಲಾ ಸೌಕರ್ಯಗಳು ಇರುವಾಗಲೂ ಒಂದು ವರ್ಷದ ಹಿಂದಿನ ಪರಿಹಾರ ಸಾವು ಬದುಕಿನ ನಡುವೆ ಇರುವ ಜನರಿಗೆ  ದೊರೆಯುತ್ತಿಲ್ಲ ಎಂದಾದರೆ ಇವರೆಲ್ಲ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ತಮ್ಮ ಕಚೇರಿಯಲ್ಲಿ ಹೂವು ಬಿಡಿಸುತ್ತಿರುತ್ತಾರೆಯೇ......
ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಪಾಸಾಗುವ ಪ್ರತಿ ಅಭ್ಯರ್ಥಿ ಪ್ರಾರಂಭದ ಸಂದರ್ಶನದಲ್ಲಿ ಹೇಳುವುದು ನಾವು ಬಡವರಿಗೆ ಪ್ರಾಮಾಣಿಕ ಸೇವೆ ಮಾಡಲು  ಬದ್ದರಾಗಿದ್ದೇವೆ. ಇದೇ ಏನು ಇವರ ಸೇವೆ.....
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿ ಹಣ ಇಲ್ಲವೇ ? ಲೆಕ್ಕ ಪತ್ರಗಳು ಸರಿ ಇಲ್ಲವೇ ? ನೆರೆ ಸಂತ್ರಸ್ತರ ಗುರುತಿಸುವಿಕೆ ಸಾಧ್ಯವಾಗಿಲ್ಲವೇ ? ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಹೊಂದಾಣಿಕೆ ಇಲ್ಲವೇ ? ಕಡತಗಳು ಜಾಗ ಬದಲಾಯಿಸುತ್ತಿಲ್ಲವೇ ? ಪರಿಹಾರ ಎಲ್ಲರಿಗೂ ಸಿಕ್ಕಿ ಜನರೇ ಸುಳ್ಳು ಹೇಳುತ್ತಿದ್ದಾರೆಯೇ ? ಅಥವಾ ಇದು ಬಗೆಹರಿಸಲಾಗದ ಸಮಸ್ಯೆಯೇ ?
ಇವರು ಪಡೆಯುವ ಕೂಲಿ ಸಾರ್ವಜನಿಕ ಹಣ ಎಂಬ ಪ್ರಜ್ಞೆ ಇವರಿಗೆ ಇರುವುದಿಲ್ಲವೇ. ಅದರ ಋಣ ತೀರಿಸಬೇಕು ಎಂಬ ಕನಿಷ್ಠ ಆತ್ಮಸಾಕ್ಷಿ ಸತ್ತು ಹೋಗಿದೆಯೇ ?
ಇರುವ ಅಥವಾ ಕೊಡಬೇಕಾದ ಹಣವನ್ನು ಸಂತ್ರಸ್ತರಿಗೆ ವರ್ಷವಾದರೂ ತಲುಪಿಸಲು ಸಾಧ್ಯವಾಗದ ಈ ವ್ಯವಸ್ಥೆಯಲ್ಲಿ ಜನರು ಬದುಕುವುದಾದರೂ    ಹೇಗೆ ?
ಒಂದು ತಿಂಗಳ ಸಂಬಳ ಒಂದು ದಿನ ತಡವಾದರೂ ಸರ್ಕಾರಿ ಅಧಿಕಾರಿಗಳು ಗಾಬರಿಗೊಳಗಾಗುತ್ತಾರೆ. ಬಹಳಷ್ಟು ಅಧಿಕಾರಿಗಳು ಲಂಚ ಕೊಡದಿದ್ದರೆ ಕೆಲಸವನ್ನೇ ಮಾಡಿಕೊಡುವುದಿಲ್ಲ. ಆದರೆ ನೆರೆ ಸಂತ್ರಸ್ತರಿಗೆ ಕೆಲವೇ ಸಾವಿರ ಹಣ ತಲುಪಿಸಲು ಒಂದು ವರ್ಷ ಸಾಕಾಗುವುದಿಲ್ಲ.
ನಿಜವಾಗಿಯೂ ದೇಶ ಅಭಿವೃದ್ಧಿಯಾಗಬೇಕು, ಜನರ ಜೀವನಮಟ್ಟ ಉತ್ತಮವಾಗಬೇಕು ಎಂಬ ಕನಸು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಇದ್ದರೆ ಅವರು ಮೊದಲು ಮಾಡಬೇಕಾದ ಕೆಲಸ ಸರ್ಕಾರಿ ಯಂತ್ರವನ್ನು  ಶುದ್ದೀಕರಣ ಮಾಡಬೇಕು. ಹುಟ್ಟಿನಿಂದ ಸಾವಿನವರೆಗೂ ಬಡವರಿಗೆ ಸಹಾಯವಾಗುವ ಸಾಕಷ್ಟು ಯೋಜನೆಗಳು ಸರ್ಕಾರದ ಬಳಿ ಇದೆ. ಆದರೆ ಅದರ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲ.
ಒಂದು ದಿನದಲ್ಲಿ ಔಪಚಾರಿಕವಾಗಿ 8 ಗಂಟೆಗಳ ಕೆಲಸ ಇರುತ್ತದೆ. ಅದರಲ್ಲಿ ಕನಿಷ್ಠ 4 ಗಂಟೆಗಳಷ್ಟು ಸರಿಯಾಗಿ ಕೆಲಸ ಮಾಡಿದರೆ ಅನೇಕ ಸಾಮಾನ್ಯ ಜನರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದರೆ ಅನೇಕ ಹಿರಿಯ ಅಧಿಕಾರಿಗಳು ಮನೆಯಲ್ಲಿ ಮಲಗಿಕೊಂಡು ಆಫೀಸಿನಲ್ಲಿ ಇರುವವರಿಗೆ ದೂರದ ಅಧೀಕೃತ ಪ್ರವಾಸ ಅಥವಾ ವಿಧಾನಸೌಧದಲ್ಲಿ ಮೀಟಿಂಗ್ ನಲ್ಲಿ ಇರುವುದಾಗಿ ಸದಾ ಸುಳ್ಳು ಹೇಳುವುದು ಒಂದು ಹವ್ಯಾಸವಾಗಿದೆ.
" ಸರ್ಕಾರದ ಕೆಲಸ ದೇವರ ಕೆಲಸ " ಎಂದು ಹೇಳುವವರು ಒಂದು ವರ್ಷವಾದರೂ ಪರಿಹಾರವನ್ನು ತಲುಪಿಸಿಲ್ಲ ಎಂದಾದರೆ ಇವರು ದೇವರಿಗೂ ವಂಚಿಸುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಅದಕ್ಕಾಗಿಯೇ ಹೇಳಿದ್ದು ನಾಚಿಕೆಯಾಗುತ್ತಿದೆ ಎಂದು........
ನಾವು ಪ್ರಾಮಾಣಿಕರಾಗುವವರೆಗೂ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವ ನಮ್ಮ ಪರಿಚಿತರಿಗೆ ನಾವುಗಳು ಕನಿಷ್ಠ ಅವರ ಕರ್ತವ್ಯ ಪ್ರಜ್ಞೆ ನೆನಪಿಸುವ ಮೂಲಕ ಅಳಿಲು‌ ಸೇವೆ ಸಲ್ಲಿಸಲು‌ ಪ್ರಯತ್ನಿಸೋಣ......


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.