◆ ಮತ್ತೆ ಶುರು ನನ್ನ ಪ್ರೀತಿಯ 'ಲೋಕೇಶ್ ಪ್ರೊಡಕ್ಷನ್ ಮಜಾ ಟಾಕೀಸ್' ◆ 

ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು.... 

     ನೀವು ನಂಬಲ್ಲ, ನಾನು ಈ ನಗೆ ಬುಗ್ಗೆಯ 'ಮಜಾ ಟಾಕೀಸ್' ಫ್ಯಾನ್! ಎಂಥಾ ಫ್ಯಾನ್ ಅಂದ್ರೆ, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ರಿಂದ 9ರ ತನಕ ನನ್ನ ಮೊಬೈಲನ್ನು ಆಫ್ ಮಾಡಿಟ್ಟಿರುತ್ತಿದ್ದೆ! 9ಕ್ಕೆ 'ಮಜಾ ಟಾಕೀಸ್' ಮುಗಿದಾಕ್ಷಣ ಸೃಜನ್'ಗೆ ಮೆಸೇಜ್ ಮಾಡಿ ಬೆನ್ನು ತಟ್ಟುತ್ತಿದ್ದೆ! ಕೆಲವೊಮ್ಮೆ ಲೂಸ್ ಕಾಮಿಡಿ ಕಂಡು ಸಿಡಿಮಿಡಿಗೊಂಡು ಕಾಳೆದು ಬಿಡುತ್ತಿದ್ದೆ. ಮತ್ತೆ ಯಥಾಪ್ರಕಾರ ಮುಂದಿನ ಶನಿವಾರ ಬೆನ್ನು ತಟ್ಟೋದು ಇದ್ದೇ ಇತ್ತು! 


     ನನ್ನ ಬುದ್ಧಿಜೀವಿ ಗೆಳೆಯರನೇಕರು ನನ್ನ ಈ ರೀತಿಯ ವರ್ತನೆಗೆ ಛೇಡಿಸುತ್ತಿದ್ದರು. ನನಗೆ ಕಿಂಚಿತ್ತೂ ಅವಮಾನವಾಗುತ್ತಿರಲಿಲ್ಲ. ವಾರಪೂರ್ತಿ ನಿಂದನೆ, ಅವಹೇಳನ, ಕುಚೇಷ್ಟೆಗಳಿಂದ ನೊಂದಿರುವ ಮನಸ್ಸುಗಳಿಗೆ 'ಮಜಾ ಟಾಕೀಸ್' ಒಂದು ನಗೆ ಟಾನಿಕ್. ಅದರಲ್ಲೂ ಈ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ನನ್ನ ಪ್ರೀತಿಯ ಲೋಕೇಶ್ ಮತ್ತು ಗಿರಿಜಾ ದಂಪತಿಗಳ ಸುಪುತ್ರ ಸೃಜನ್ ಲೋಕೇಶ್ ಎಂಬುದು ಮತ್ತೊಂದು ಬೋನಸ್ ಪಾಯಿಂಟ್. 
     ಇಂಥಾದ್ದೊಂದು ಯಶಸ್ವೀ ಕಾರ್ಯಕ್ರಮ ಜನಪ್ರಿಯತೆಯ ತುತ್ತತುದಿಯಲ್ಲಿರುವಾಗಲೇ ಸೃಜನ್ ನಿಲ್ಲಿಸಿ ಬಿಡುತ್ತಿದ್ದರು. ಯಾಕೆಂದು ಕೇಳಿದರೆ ಸೃಜನ್'ನ ರೆಡಿಮೇಡ್ ಉತ್ತರ : 'ಜನ ಸಾಕು ಸಾಕು ಎನ್ನುವ ಮೊದಲೇ ನಿಲ್ಲಿಸಬೇಕಣ್ಣಾ...ಆಗಲೇ ಅದರ ಮಹತ್ವ ತಿಳಿಯೋದು!'
     ಈಗಾಗಲೇ ಇಂಥಾ ಎರಡು ಅಗ್ನಿಪರೀಕ್ಷೆಗಳನ್ನು ಗೆದ್ದಿರುವ ಸೃಜನ್ ಇದೀಗ ಮೂರನೇ ಅಗ್ನಿಪರೀಕ್ಷೆಗೆ ರೆಡಿಯಾಗಿದ್ದಾರೆ. ಈ ತಿಂಗಳ 29ರಿಂದ 'ಮಜಾ ಟಾಕೀಸ್' ಮತ್ತೆ ಆರಂಭವಾಗಲಿದೆ. ನಾನು ಕಾಯುತ್ತಿದ್ದೇನೆ. ಸೃಜನ್'ಗೆ ಶುಭವಾಗಲಿ...
     ಅಂದಹಾಗೆ, ಒಂದು ಕಿವಿಮಾತು : ಈ ನಡುವೆ ಸೃಜನ್ ಬದಲು ಅವರ ಸಹಾಯಕರು ಫೋನ್ ಎತ್ತಿಕೊಳ್ಳುತ್ತಿದ್ದಾರೆ. ಕೇಳಿದರೆ 'ಮೆಸೇಜ್ ಹೇಳಿ' ಅಂತಾರೆ! ನನಗೆ ಇವೆಲ್ಲಾ ಹೊಸತಲ್ಲ, ಆದರೆ ನಾನು ಕೂಡಾ ಒಬ್ಬ ಸಹಾಯಕನನ್ನು ಇಟ್ಟುಕೊಳ್ಳಬಲ್ಲಷ್ಟು ಹಿರಿಯ ಪತ್ರಕರ್ತ ಅನ್ನೋದನ್ನು ಈ ಹುಡುಗ ಮರೆಯದಿರಲಿ...

                ALL THE BEST ಕಂದಾ...

                             ◆ 

     ಇದು 13-9-2002ರ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ನಾನು ಬರೆದ ಲೇಖನ. ಇದನ್ನು ಓದಲು ನೀವು 18 ವರ್ಷಗಳ ಹಿಂದಿನ ಫ್ಲಾಶ್ ಬ್ಯಾಕ್'ಗೆ ಮೈಂಡ್ ಸೆಟ್ ಮಾಡ್ಕೋಬೇಕು...
     ಸರಿ, ಇನ್ನು ಶುರು ಹಚ್ಕೊಳ್ಳಿ :
     'ಪ್ರಥಮ ಚುಂಬನಂ ದಂತ ಭಗ್ನಮ್! ಸೃಜನ್ ಲೋಕೇಶ್ ನಟಿಸಿದ ಪ್ರಥಮ ಚಿತ್ರ 'ನೀಲ ಮೇಘ ಶ್ಯಾಮ' ನೆಲಕಚ್ಚಿದೆ. ಆದರೆ ಈ ಚಿತ್ರದ ಸೋಲು ಈತನ ಧೃತಿ ಕೆಡಿಸಿಲ್ಲ. ಹೊಸ ಉತ್ಸಾಹದೊಂದಿಗೆ ಇಟ್ಟಿಗೆ ವ್ಯಾಪಾರಕ್ಕೆ ಹೊರಟು ಬಿಟ್ಟಿದ್ದಾನೆ! 
     'ಅರ್ಥವಾಗದಿದ್ದರೆ ನೀವು ನೇರವಾಗಿ ಸಕಲೇಶಪುರದ ಇಟ್ಟಿಗೆ ಫ್ಯಾಕ್ಟರಿಯೊಂದರೊಳಗೆ ಕಾಲಿಡಬೇಕು. ಇದು ಸಿಮೆಂಟಿನ ಇಟ್ಟಿಗೆ ಫ್ಯಾಕ್ಟರಿ! ಅರ್ಥಾತ್ ಹಾಲ್ಲೋ ಬ್ಲಾಕ್ಸ್. ಈ ಇಟ್ಟಿಗೆ ಫ್ಯಾಕ್ಟರಿಯ ಹೆಸರು : 'ಟ್ವಿಂಕಲ್ ಬ್ರಿಕ್ಸ್ ಅಂಡ್ ಟೈಲ್ಸ್ ಫ್ಯಾಕ್ಟರಿ'. ವಾಸ್ತವವಾಗಿ ಇದು ಸೃಜನ್'ನ ಚಿಕ್ಕಪ್ಪ ಭಾಸ್ಕರ ನಾಯ್ಡು ಅವರ ಫ್ಯಾಕ್ಟರಿ. ಸೃಜನ್ ಪಾರ್ಟ್ನರ್. ಅಣ್ಣನ ಮಗ ಚಿತ್ರರಂಗದಲ್ಲಿ ಸೋತಿರುವುದರಿಂದ ಇಲ್ಲಾದರೂ ಒಂದು ಉದ್ಯೋಗದಲ್ಲಿರಲಿ ಅಂತ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅಂತೂ ಸೃಜನ್'ಗೊಂದು ನೌಕರಿ ಸೃಷ್ಟಿಯಾಗಿದೆ! 
      'ಮುಂದಿನ ತಿಂಗಳು ಆರಂಭವಾಗಲಿರುವ ಟೈಲ್ಸ್ ಫ್ಯಾಕ್ಟರಿಯ ಸಮಾರಂಭಕ್ಕೆ ಬರಲೇ ಬೇಕೆಂದು ಹಠ ಹಿಡಿದ ಸೃಜನ್, ಅದರ ಮತ್ತೊಂದು ಶಾಖಾ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಹೇಳಿಕೊಂಡರು. ಅದಕ್ಕೆ 'ಗಿರಿಲೋಕ್ ಬ್ರಿಕ್ಸ್ ಅಂಡ್ ಟೈಲ್ಸ್' ಎಂಬ ಹೆಸರನ್ನಿಡುವುದಾಗಿಯೂ ಸೃಜನ್ ಹೇಳಿಕೊಂಡಿದ್ದ...
     ◆ ಇದೆಲ್ಲಾ ಹಳೆಯ ಕಥೆ. ಈಗ ನೋಡಿದರೆ ಇಟ್ಟಿಗೆ ಫ್ಯಾಕ್ಟರಿಯನ್ನು ಬಿಟ್ಟು ನಗೆಯ ಫ್ಯಾಕ್ಟರಿಯನ್ನೇ ಕಟ್ಟಿ ಬಿಟ್ಟಿದ್ದಾರೆ ಸೃಜನ್...ಅಮ್ಮ ಗಿರಿಜಾ ಸಂತೃಪ್ತಭಾವದೊಂದಿಗೆ ಮಗನ ಸಾಹಸಗಳಿಗೆ ಸಾಕ್ಷಿಯಾಗಿದ್ದಾರೆ. ಆಕಾಶದಲ್ಲೆಲ್ಲೋ ನೆಲೆ ನಿಂತಿರುವ ಅಪ್ಪ ಲೋಕೇಶ್ ತಮ್ಮ ಮಗನ ಯಶಸ್ವೀ ವೃತ್ತಿಬದುಕಿನ ಬಗ್ಗೆ ಸಂತುಷ್ಟರಾಗಿ ಆಶೀರ್ವದಿಸುತ್ತಿದ್ದಾರೆ...