ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು..... 🌼🙏🌼
◆ ಒಮ್ಮೆ ಏನಾಯಿತೂಂದ್ರೆ...ಯಾವುದೋ ಚಾನಲ್ ನೋಡ್ತಿದ್ದೆ. ನಮ್ಮ ಹೆಮ್ಮೆಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಸಂದರ್ಶನ ಪ್ರಸಾರವಾಗುತ್ತಿತ್ತು. ಒಂದು ಹಂತದಲ್ಲಿ ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ ಅವರ ಪ್ರಸ್ತಾಪ ಬಂತು. ಅವರೆಂದರು : 'ಇಂಥಾ ಮ್ಯೂಸಿಕ್ ಡೈರೆಕ್ಟರ್ ಈಗ ಎಲ್ಲಿದ್ದಾರೆ? ಅದೇ ಒಂದು ಸೊಗಸು. ಅವರು ಸಂಗೀತ ನಿರ್ದೇಶಿಸುವ ಸಿನಿಮಾಗಳಿಗಾಗಿ ಹಾಡುವುದೇ ಒಂದು ಸಂಭ್ರಮ. ರತ್ನ ಇದ್ದಾರೋ, ಇಲ್ವೋ ಗೊತ್ತಿಲ್ಲ...' - ಅಂತಂದು ಬಿಟ್ಟರು!
ವಿಷಯ ಏನು ಗೊತ್ತಾ? ಚೆನ್ನೈನಲ್ಲಿರುವ ಕನ್ನಡ ಚಿತ್ರರಂಗದ ಹಿರಿಯರನ್ನು ಭೇಟಿ ಮಾಡಿ ಬರುವ ಉದ್ದೇಶದಿಂದ ಆಗ ತಾನೇ ನಾನು ಆ ಕಡೆ ಒಂದು ಸುತ್ತು ಹಾಕಿ ಬಂದಿದ್ದೆ. ಆಗ ಈ ಆರ್.ರತ್ನ ಅವರನ್ನೂ ಭೇಟಿಯಾಗಿ, ಸಂದರ್ಶಿಸಿ ಬಂದಿದ್ದೆ! ತೊಂದರೆಯಲ್ಲಿದ್ದರು ನಿಜ, ಆದರೆ ಬದುಕಿದ್ದರು. ಈಗಲೂ ಆ ಹಿರಿಯ ಬದುಕಿದ್ದಾರೆ ಮತ್ತು ಚೆನ್ನೈನಲ್ಲೇ ಇದ್ದಾರೆ. ಅವರಿಗೆ ದೀರ್ಘಾಯುಸ್ಸು ಕೋರುತ್ತಾ ಮುಂದುವರಿಸುತ್ತಿದ್ದೇನೆ...
ಈ ವಿಷಯವನ್ನು ಎಸ್.ಪಿ.ಯವರಿಗೆ ತಿಳಿಸಬೇಕಿತ್ತು. ಅಚಾನಕವಾಗಿ ಮುಂದಿನ ವಾರವೇ ಅವರನ್ನು ಭೇಟಿಯಾಗುವ ಸಂದರ್ಭ ಬಂತು. ಯಾವುದೋ ಕಾರ್ಯಕ್ರಮಕ್ಕೆ ಎಸ್.ಪಿ. ಬಂದಿದ್ದರು. ನಾನು ಅವರನ್ನು ಭೇಟಿಯಾಗಿ ಆರ್. ರತ್ನ ಅವರ ವಿವರ ತಿಳಿಸಿದೆ. ರತ್ನ ಈಗಲೂ ಜೀವಂತವಿದ್ದಾರೆ ಎನ್ನುವುದನ್ನು ತಿಳಿದು ಸಂಭ್ರಮ ಪಟ್ಟ ಎಸ್.ಪಿ. ಚೆನ್ನೈಗೆ ಹೋದ ತಕ್ಷಣವೇ ಮಾಡಿದ ಮೊದಲ ಕೆಲಸವೆಂದರೆ ರತ್ನ ಅವರನ್ನು ಭೇಟಿಯಾದದ್ದು, ಮಾತುಕತೆಯಾಡಿದ್ದು ಮತ್ತು ಒಂದಷ್ಟು ಆರ್ಥಿಕ ಸಹಾಯ ನೀಡಿದ್ದು...! ಅಲ್ಲಿಂದ ಹಿಂದಿರುಗುವಾಗ ಕಾಲು ಮುಟ್ಟಿ ಆಶೀರ್ವಾದ ಬೇಡಿದ ಎಸ್.ಪಿ.ಬಾಲಸುಬ್ರಹ್ಮಣ್ಯ 'ಆರೋಗ್ಯವಾಗಿ, ನೂರಾರು ವರ್ಷ ಬಾಳಿರಿ...' - ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದರು. ಈಗ ನೋಡಿದರೆ ಅಂಥಾ ಗಾನಗಂಧರ್ವನೇ ಚೆನ್ನೈ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಈ ಗಂಡು ಕೋಗಿಲೆಗೆ ದೀರ್ಘಾಯುಷ್ಯವನ್ನು ಕೋರುತ್ತಾ...

Social Plugin