ಪಾನ್‍ಬೀಡಾ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.92.48 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಪುಷ್ಮಾ ಬಸಪ್ಪ ಕಲಕಂಬ ಗೌರಿ ಪ್ರತಿಭೆಗೆ ಅಡ್ಡಿಯಾಗದ ಬಡತನ *ಪಾನ್‍ಬೀಡಾ ವ್ಯಾಪಾರ ಮಾಡುತ್ತ ಪ್ರತಿಭಾವಂತ ವಿದ್ಯಾರ್ಥಿ ಸಾಧನೆ...
ರಬಕವಿ-ಬನಹಟ್ಟಿ,ಅ11: ಪ್ರತಿಭೆಗೆ ಸಿರಿತನ, ಬಡತನವೆಂಬ ಬೇಧವಿಲ್ಲವೆಂಬುವದಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಬಡತನದಲ್ಲಿ ಬೆಂದಿರುವ ಹಲವಾರು ಕುಟುಂಬಗಳ ವಿದ್ಯಾರ್ಥಿಗಳೇ ಸಾಕ್ಷಿ. ಈ ಬಾರಿ ಪಿಯುಸಿ ಹಾಗು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಅದರಲ್ಲೂ ಬಡತನದಲ್ಲಿಯೇ ಬದುಕು ಸಾಗಿಸುತ್ತಿರುವ ಕುಟುಂಬಗಳ ವಿದ್ಯಾರ್ಥಿಗಳು ರಾಜ್ಯಾದ್ಯಂತ ಮಿಂಚುವಲ್ಲಿ ಕಾರಣವಾಗಿದ್ದು ವಿಶೇಷ.
ಇಲ್ಲೊರ್ವ ವಿದ್ಯಾರ್ಥಿನಿ ಪುಷ್ಪಾ ಬಸಪ್ಪ ಕಲಕಂಬ ಎಂಬುವಳು ದಿನಂಪ್ರತಿ ಶಾಲೆ ಮುಗಿಸಿ ಮನೆ ಮುಂಭಾಗದಲ್ಲಿರುವ ಪಾನ್‍ಬೀಡಾ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತ ಪ್ರಸಕ್ತ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.92.48 ರಷ್ಟು ಅಂಕ ಗಳಿಸಿ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವದು ನಿಜಕ್ಕೂ ಶ್ಲಾಘನೀಯವಾದುದು.
ಬನಹಟ್ಟಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಪುಷ್ಪಾ ಶಾಲೆಗೆ ಬರಬೇಕಾದರೆ ತಂದೆ-ತಾಯಿಗೆ ವ್ಯಾಪಾರದಲ್ಲಿ ನೆರವಾಗಿ ಆತಳ ಶಿಕ್ಷಣವನ್ನು ಶೃದ್ಧೆಯಿಂದ ಕಲಿತು ಯಾರಿಗೂ ಕಡಿಮೆಯಿಲ್ಲವೆಂಬಂತೆ ಮಹತ್ವದ ಸಾಧನೆ ಮಾಡುವ ಮೂಲಕ ಸರ್ಕಾರಿ ಪ್ರೌಢಶಾಲೆಗೆ ಗೌರವ ತರುವಂಥ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.
ಕನ್ನಡ 116, ಇಂಗ್ಲೀಷ್-95, ಸಮಾಜ ವಿಜ್ಞಾನ-95, ಹಿಂದಿ-100, ವಿಜ್ಞಾನ-92, ಗಣಿತ-80 ಅಂಕ ಗಳಿಸುವ ಮೂಲಕ ತನ್ನದೇಯಾದ ಪ್ರತಿಭೆ ಮೆರೆದಿದ್ದಾಳೆ. ಮುಂದಿನ ಶಿಕ್ಷಣ ವಿಜ್ಞಾನ ವಿಭಾಗಕ್ಕೆ ಹೋಗುವದಾಗಿ ಹೇಳುವ ಪುಷ್ಪಾ ಕುಟುಂಬಕ್ಕೆ ನೆರವಾಗುವ ಮೂಲಕ ತನ್ನ ಶಿಕ್ಷಣ ಮುಂದುವರೆಸುವದಾಗಿ ಹುಮ್ಮಸ್ಸಿನಿಂದ ಹೇಳುತ್ತಿರುವದು ಹೆಮ್ಮೆಯ ವಿಷಯ.
ಶಾಲೆಗೆ ತೆರಳಿ ದಿನಂಪ್ರತಿ ತಂದೆ-ತಾಯಿಯ ಉದ್ಯೋಗಕ್ಕೆ ನೆರವಾಗಿ ಮನೆಗೆಲಸ ಮುಗಿಸಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ನನಗೆ ತಂದೆ-ತಾಯಿಯ ಪ್ರೋತ್ಸಾಹವೇ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಗಿದೆಯೆಂದು ಮನದಾಳದಿಂದ ಹೇಳುತ್ತಾಳೆ.
ಪರೀಕ್ಷೆ ಎದುರಿಸುವ ಬಗ್ಗೆ ಸಲಹೆ-ಸೂಚನೆಗಳನ್ನು ನೀಡುವಲ್ಲಿ ಶಿಕ್ಷಕರಾದ ಎಂ.ಸಿ. ಮಹಾಬಳಶೆಟ್ಟಿ, ಬಿ.ಎಸ್. ಸೊನ್ನದ, ವಿ.ಎಸ್. ಕಲ್ಯಾಣಿ, ಎಂ.ಎನ್. ನಾಯಕವಾಡಿ, ಎಂ.ಎಸ್. ಮೆಂಡಿಗೇರಿ ಸೇರಿದಂತೆ ಇತರರು ನನಗೆ ಸ್ಪೂರ್ತಿಯಾಗಿದ್ದಾರೆ. ಪರೀಕ್ಷೆ ಸಂದರ್ಭಗಳ ಬಗ್ಗೆ ಮಾಹಿತಿ ನೀಡಿ, ಪರೀಕ್ಷೆಗಳಲ್ಲಿನ ಪ್ರಶ್ನೆಗಳಿಗೆ ಯಾವ ರೀತಿ ಎದುರಿಸಬೇಕೆಂದು ಪೂರ್ವಭಾವಿಯಾಗಿ ತಿಳಿಹೇಳುತ್ತಿದ್ದರು ಎಂದು ಪುಷ್ಪಾ ತಿಳಿಸಿದರು.
ದೈನಂದಿನ ಚಟುವಟಿಕೆಗಳಲ್ಲಿ ತೊಡಗಿ, ಕ್ರೀಡೆಗೂ ಮಹತ್ವ ನೀಡುವ ಮೂಲಕ ಓದಿಗೆ ಗಮನಕೊಡುತ್ತಿದ್ದೆ, ಕಾಟಾಚಾರಕ್ಕೆ ಓದದೆ ಅದನ್ನು ಅರಿವು ಮಾಡಿಕೊಳ್ಳುವ ಮೂಲಕ ಪಠ್ಯಗಳ ಪ್ರಮುಖ ವಿಷಯಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುತ್ತಿದೆ. ಇದರಿಂದ ಪರೀಕ್ಷೆಯಲ್ಲಿ ಸುಲಭವಾಗಿ ಬರೆಯಲು ಸಾಧ್ಯವಾಯಿತು.-----ಪುಷ್ಪಾ ಕಲಕಂಬ
`ಸಮಯಪ್ರಜ್ಞೆಯಿಂದ ವಿಶಾಲ ಮನಸ್ಸಿನಿಂದ ಓದಿನಲ್ಲಿ ತಲ್ಲೀಣರಾದಲ್ಲಿ ಹಾಗು ಯಾವದೇ ಗೊಂದಲವಿಲ್ಲದೆ ಅಧ್ಯಯನ ನಡೆಸಿ, ಶಿಕ್ಷಕರ ಮಾರ್ಗದರ್ಶನದೊಂದಿಗೆ ಪರೀಕ್ಷೆಯಲ್ಲಿ ಸಾಧನೆ ಸಾಧ್ಯ’.— ರವಿ ಬಸಗೊಂಡನವರ, ಉಪಪ್ರಾಚಾರ್ಯರು.
`ಪ್ರತಿಭೆಗೆ ಯಾವದೇ ಸಮಸ್ಯೆ ಎದುರಾಗದು, ವಿದ್ಯಾರ್ಥಿಗಳು ಆಟದಷ್ಟೇ ಪಾಠದಲ್ಲಿಯೂ ಗಮನ ಹರಿಸಿದ್ದಲ್ಲಿ ಎಂಥಹ ಸಮಸ್ಯೆಗಳನ್ನೂ ಎದುರಿಸಿ ಸಾಧನೆ ಮಾಡಬಹುದಾಗಿದೆ ಎನ್ನುವದಕ್ಕೆ ಪುಷ್ಪಾ ಕಲಕಂಬ ಕಾರಣವಾಗಿದ್ದಾಳೆ.’—ಎಂ.ಸಿ. ಮಹಾಬಳಶೆಟ್ಟಿ ಶಿಕ್ಷಕರು.
Social Plugin