ಜವಳಿ ಸಚಿವ ಶ್ರೀಮಂತ ಪಾಟೀಲರಿಗೆ ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದ ನಿಯೋಗ ಸೀರೆ ಒದಗಿಸುವ ಮೂಲಕ ಮನವಿ ಮಾಡಿದರು.
ಕನಿಷ್ಠ 12 ಲಕ್ಷ ಸೀರೆ ಖರೀದಿಸಲು ಸಚಿವರಿಗೆ ಸವದಿ ಮನವಿ
ರಬಕವಿ-ಬನಹಟ್ಟಿ,ಜು10: ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿರುವ ಜವಳಿ ಉದ್ಯಮಕ್ಕೆ ಸರ್ಕಾರದ ಆಸರೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ತೆರಳಿದ ನಿಯೋಗದಿಂದ ಜವಳಿ ಸಚಿವ ಶ್ರೀಮಂತ ಪಾಟೀಲರಿಗೆ ನೇಕಾರರು ನೇಯ್ದ ಸೀರೆಗಳನ್ನು ಸರ್ಕಾರ ಖರೀದಿಸಬೇಕೆಂಬ ಒತ್ತಾಯಕ್ಕೆ ಸಹಮತ ದೊರೆತಿದೆ.
ಗುರುವಾರ ರಾತ್ರಿ ಬೆಂಗಳೂರಿನ ಸಚಿವರ ನಿವಾಸಕ್ಕೆ ತೆರಳಿದ ನಿಯೋಗವು ನೇಕಾರರ ಪರಿಸ್ಥಿತಿ ಕುರಿತು ಸಂಪೂರ್ಣ ಮಾಹಿತಿ ಒದಗಿಸಿದ್ದಲ್ಲದೆ ಸೀರೆಗಳ ಖರೀದಿ ಕಾರ್ಯ ತುರ್ತಾಗಿ ನಡೆಯಬೇಕೆಂದು ಒತ್ತಾಯಿಸಿದರು.
ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಈಗಾಗಲೇ ಸರ್ಕಾರ ಮಟ್ಟದಲ್ಲಿ 500 ರಿಂದ 600 ರೂ.ಗಳ ಸೀರೆಗಳನ್ನು ಸುಮಾರು 6 ಲಕ್ಷದವರೆಗೆ ಖರೀದಿಸುವ ಚಿಂತನೆಯಲ್ಲಿದ್ದು ಬರುವ ಗುರುವಾರ ಕ್ಯಾಬಿನೆಟ್‍ನಲ್ಲಿ ಚರ್ಚಿಸಿ ಮುಂದುವರೆಯಲಾಗುವದೆಂದು ತಿಳಿಸಿದರು.
ಈ ಕುರಿತು ಶಾಸಕ ಸಿದ್ದು ಸವದಿ ಸಚಿವರಲ್ಲಿ ಮನವಿ ಮಾಡಿ, ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳಲ್ಲಿದ್ದು, 300 ರೂ.ಗಳಿಂದ 350 ರೂ.ಗಳವರೆಗಿನ ಸೀರೆಗಳು ಹೆಚ್ಚಿನ ಪ್ರಮಾಣದ ಉತ್ಪಾದನೆಯಲ್ಲಿವೆ. ಅದೇ ಸೀರೆಗಳು ಮಾರಾಟ ತೊಂದರೆಯಿಂದ ಗೋದಾಮು ಸೇರುತ್ತಿವೆ. ಅದೇ ಯೋಜನೆಯಲ್ಲಿ ಕನಿಷ್ಠ 12 ಲಕ್ಷ ಸೀರೆಗಳನ್ನಾದರೂ ತಾತ್ಕಾಲಿಕವಾಗಿ ಖರೀದಿ ಮಾಡುವದರಿಂದ ಕೆಳ ಹಂತದ ನೇಕಾರರಿಗೂ ಇದರ ಪ್ರಯೋಜನವಾಗುವದಲ್ಲದೆ ಶೇ.90 ರಷ್ಟು ನೇಕಾರರು ಇದೇ ಗುಣಮಟ್ಟದ ಸೀರೆಗಳ ಮಾರಾಟದಲ್ಲಿದ್ದಾರೆ. ಈ ಕುರಿತು ಸಚಿವರ ಗಮನಹರಿಸಿದರು.
ಇದೇ ಸಂದರ್ಭ ಕಾವೇರಿ ಕೈಮಗ್ಗ ಮಂಡಳಿ ಸದಸ್ಯ ಆನಂದ ಕಂಪು, ಬಿಜೆಪಿ ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ನೇಕಾರ ಧುರೀಣ ಜಿ.ಎಸ್. ಗೊಂಬಿ ಉಪಸ್ಥಿತರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin