◆ ರಚಿತಾ ರಾಮ್ ಕನ್ನಡದ ನಂಬರ್ ಒನ್ ನಟಿಯಾದದ್ದು ಹೇಗೆ? ಇಲ್ಲಿದೆ ಪವಾಡ! ◆
ಲೇಖನ : ಹಿರಿಯ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು.
     ಈ ಕಥೆಯನ್ನು ನನಗೆ ಹೇಳಿದ್ದು ತಿಪಟೂರಿನ ಹಿತೈಷಿ ದಯಾನಂದ. ಇದನ್ನು ನೀವು ನಂಬುತ್ತೀರೋ, ಬಿಡುತ್ತೀರೋ ನಿಮಗೇ ಸೇರಿದ್ದು. ಅವರವರ ಭಾವಕ್ಕೆ ಅವರವರ ಭಕುತಿಗೆ...
     ವರ್ಷಗಳ ಹಿಂದೆ ತಿಪಟೂರಿನಲ್ಲಿ ನಡೆದ ಸನ್ಮಾನ ಸಮಾರಂಭಕ್ಕೆ ಹೋದಾಗ ಈ ಘಟನೆ ನಡೆಯಿತು. ಅದು ತಿಪಟೂರಿನ 'ಬಯಲುಸೀಮೆ ಸಾಂಸ್ಕೃತಿಕ ಸಂಘ'ದವರ 18ನೇ ವಾರ್ಷಿಕೋತ್ಸವದ ಸಮಾರಂಭವೂ ಹೌದು. ಈ ಸಂಘದ ಅಧ್ಯಕ್ಷರಾದ ಭಾನು ಪ್ರಶಾಂತ್ ಅವರ ಆಹ್ವಾನದ ಮೇರೆಗೆ ನಾನು ಅಲ್ಲಿಗೆ ಹೋಗಿದ್ದೆ. ಇದರ ಹಿನ್ನೆಲೆಯಲ್ಲಿ 'ಸಂಯುಕ್ತ ಕರ್ನಾಟಕ' ಪತ್ರಿಕೆಯ ತುಮಕೂರು ಇನ್'ಚಾರ್ಜ್ ಇಂದ್ರಕುಮಾರ್ ಅವರ ಪ್ರೀತಿಯ ಒತ್ತಡವಿತ್ತು.  ಮಾರನೇ ದಿನ ಮುಂಜಾನೆ ದಯಾನಂದ ಹಾಜರ್. 'ಹೊರಡಿ ಸಾರ್, ಇಲ್ಲೇ 10 ಕಿ.ಮೀ. ದೂರದಲ್ಲಿ ಫೇಮಸ್ ಚೌಡೇಶ್ವರಿ ದೇವಸ್ಥಾನವಿದೆ, ನೋಡ್ಕೊಂಡು ಬರೋಣ  ಸಾರ್...' ಅಂದ್ರು. ಎದ್ದು ಗಾಯತ್ರಿ ಜತೆ ಹೊರಟೇ ಬಿಟ್ಟೆ. ಮಾರ್ಗ ಮಧ್ಯೆ ದಯಾನಂದ ಹೇಳಿದ ಕಥೆ ಹೀಗಿತ್ತು : 
     'ಸಾರ್, ನಟಿ ರಚಿತಾ ರಾಮ್ ಗೊತ್ತಲ್ಲಾ? ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಒದ್ದಾಡುತ್ತಿದ್ದರು. ಆಗ ಪುನೀತ್ ರಾಜಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಆಫರ್ ಬಂತು. ಸ್ವಲ್ಪ ದಿನದಲ್ಲೇ ಆ ಆಫರ್ ಬಿದ್ದು ಹೋಯಿತು. ಆಘಾತಗೊಂಡ ರಚಿತಾ ರಾಮ್ ಗಂಟುಮೂಟೆ ಕಟ್ಕೊಂಡು ತೆಲುಗು ಚಿತ್ರರಂಗಕ್ಕೆ ವಲಸೆ ಹೋಗಲು ನಿರ್ಧರಿಸಿದ್ದರು. ಕೊನೆಯ ಪ್ರಯತ್ನವೆಂದು ಇದೇ ದೇವಸ್ಥಾನಕ್ಕೆ ಬಂದು ಚೌಡೇಶ್ವರಿಯಲ್ಲಿ ಬೇಡಿಕೊಂಡರು. ಆಗ ಸಿಕ್ಕ ಆಶ್ವಾಸನೆ ಹೀಗಿತ್ತು : 'ಕಾಲ ಕೂಡಿ ಬಂದಿದೆ. ಕಳೆದುಕೊಂಡ ಅವಕಾಶ ಮತ್ತೆ ನಿನ್ನ ಕೈ ಸೇರಲಿದೆ. ಕನ್ನಡ ಚಿತ್ರರಂಗದಲ್ಲಿ ನೀನು ಏಕಮೇವಾದ್ವಿತೀಯಳಾಗಿ ಬೆಳಗುತ್ತೀ. ಹೊರಡು, ತೆಲುಗು ಚಿತ್ರರಂಗದ ಯೋಚನೆ ಬಿಟ್ಟುಬಿಡು. ಬೆಂಗಳೂರಿನಲ್ಲಿ ನಿನಗಾಗಿ ಒಂದು ಅದ್ಭುತ ಅವಕಾಶ ಕಾಯುತ್ತಿದೆ. ತಡ ಮಾಡಬೇಡ, ಹೊರಡು...' - ಹೀಗೆಂದು ಆಜ್ಞಾಪಿಸಿದ ಚೌಡೇಶ್ವರಿಯ ಮಾತು ಕೇಳಿ ಬೆಂಗಳೂರಿಗೆ ಹಿಂದಿರುಗಿದ ರಚಿತಾ ರಾಮ್ ಅವರಿಗೆ 'ನಟಸಾರ್ವಭೌಮ'ದ ಮರು ಆಫರ್ ಬಂದೇ ಬಂತಲ್ಲಾ? ಈಗ ಅವರು ಏನಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಮತ್ತೊಮ್ಮೆ ಚೌಡೇಶ್ವರಿ ಸನ್ನಿಧಾನಕ್ಕೆ ಬಂದ ರಚಿತಾ ಕೃತಜ್ಞತೆ ಸಲ್ಲಿಸಿ ಹೋಗಿದ್ದಾರೆ...' - ಇದು ದಯಾನಂದ ಹೇಳಿದ ಕಥೆ.  
     
      ನೀವು ನಂಬುವುದಿದ್ದರೆ ನಂಬಿ, ಇಲ್ಲವಾದರೆ ಬಿಡಿ. ರಚಿತಾ ರಾಮ್ ಅವರಂತೂ ಚೌಡೇಶ್ವರಿಯನ್ನು ನಂಬಿದ್ದಾರೆ. ಇನ್ನು ನೀವುಂಟು ನಿಮ್ಮ ನಂಬಿಕೆಯುಂಟು...ನಾವಂತೂ ಭಕ್ತಿಪೂರ್ವಕವಾಗಿ ಚೌಡೇಶ್ವರಿಯನ್ನು ಪೂಜಿಸಿ ಬಂದಿದ್ದೇವೆ...
■ ಇದನ್ನು ಓದಿದ ನಂತರವೂ ನೀವು 'ಶುಭಂ' ಪುಸ್ತಕವನ್ನು ತರಿಸಿಕೊಳ್ಳದಿದ್ದರೆ ಅದೊಂದು ದೊಡ್ಡ ಕೊರತೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ ಮೃಷ್ಟಾನ್ನ ಭೋಜನ ನಿಮಗಾಗಿ ಕಾದಿದೆ. 
  
       - FOR ADVERTISEMENT CONTACT - 
                      - 9902523698 -