ಸಾಂಸ್ಥಿಕ ಕ್ವಾರಂಟೈನ್ ವ್ಯಕ್ತಿ ಮೇಲೆ ಪ್ರಕರಣ
ರಬಕವಿ-ಬನಹಟ್ಟಿ,ಜೂ29: ಇಲ್ಲಿನ ಲಕ್ಷ್ಮೀ ನಗರದ ಉರ್ದುಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿರುವ ಪ್ರದೇಶದಲ್ಲಿನ ಶಂಕಿತ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿದ್ದ ಅಲೋಕ ಮುರಗೋಡ ಎಂಬಾತನು ಓರ್ವ ವ್ಯಕ್ತಿಗೆ ತಲೆ ಸುತ್ತು ಬಂದು ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಹಲವರಿಗೆ ಫೋನ್ ಕರೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗುವಂತೆ ಮಾಡಿ ವಿಪತ್ತುಕಾರಿ ಪರಿಸ್ಥಿತಿ ನಿರ್ಮಿಸಿದ ಹಿನ್ನಲೆ ಸ್ಥಳೀಯ ತಹಶೀಲ್ದಾರ ಪ್ರಶಾಂತ ಚನಗೊಂಡ ಫಿರ್ಯಾದಿ ಮೂಲಕ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ವಿಚಾರಣೆ ನಡೆಸುತ್ತಿದ್ದಾರೆ.
ಯಜ್ಞ-ಯಾಗಾದಿಗಳು ನಿರಂತರವಾಗಿ ನಡೆಯಬೇಕು:
ಜಗತ್ತಿನ ಉಳಿವೆಗಾಗಿ ಸದಾವಕಾಲ ಯಜ್ಞ ಯಾಗಾದಿಗಳು ನಡೆಯುತ್ತಿರಬೇಕು. ಧಾರ್ಮಿಕ ಕಾರ್ಯಕ್ರಮಗಳು ನಮ್ಮೆಲ್ಲರಿಗೂ ಒಳ್ಳೆಯದನ್ನೆ ಮಾಡುತ್ತವೆ ಎಂದು ತಾಲ್ಲೂಕಿನ ಬಸವಗೋಪಾಲ ಮಠದ ದಾನೇಶ್ವರ ಸ್ವಾಮೀಜಿ ನುಡಿದರು.
ಅವರು ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ಮಠದಲ್ಲಿ ಒಂದು ವಾರಗಳ ಕಾಲ ನಡೆದ ಕೋಟಿಯಜ್ಞ ಜಪ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಇಂಚಗೇರಿಯ ಸಂಪ್ರದಾಯದ ಮಾಧವಾನಂದರು ಭಕ್ತರ ಮನೆ ಮನೆಗೆ ತೆರಳಿ ಧ್ಯಾನ, ದಾನ ಮತ್ತು ಧರ್ಮದ ಮಾರ್ಗಗಳನ್ನು ಬೋಧಿಸಿದರು. ಮಾನವ ಹುಟ್ಟು ಸಾವುಗಳಿಂದ ಬಿಡುಗಡೆ ಹೊಂದಲು ಇಂಥ ಕಾರ್ಯಗಳು ಅಗತ್ಯವಾಗಿವೆ ದಾನೇಶ್ವರ ಸ್ವಾಮೀಜಿ ತಿಳಿಸಿದರು.
ಕೋಟಿಯಜ್ಞ ಜಪದ ಸಂದರ್ಭದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಹಾಕಿಕೊಂಡು ಭಾಗವಹಿಸಿದ್ದರು. ಭಕ್ತರಿಗೆ ಬಾಕ್ಸ್ಗಳನ್ನು ಹಾಕಿ ಜಪಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.
ಸುನೀಲ ಉಪಾಧ್ಯೆ ವರದಶಂಕರ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸುಮಂಗಲಾತಾಯಿ ಪಾಟೀಲ, ಸುಭಾಸ ಪಡ್ನಾಡ, ಗುರುಲಿಂಗ ಮಹೀಷವಾಡಗಿ, ಬಸಪ್ಪ ಮಾಲಗಾರ, ಶಿವಾನಂದ ಹಿರೇಮಠ, ಸಂಗಪ್ಪ ಹರಿಜನ ಸೇರಿದಂತೆ ಅನೇಕರು ಇದ್ದರು.