ಯಾರಿಗೂ ಬೈದಿಲ್ಲ, ಆಡುಭಾಷೆ ಪದಬಳಕೆಯಾಗಿದೆ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುವೆ.
ರಬಕವಿ-ಬನಹಟ್ಟಿ,ಜೂ14: ಕೆಎಚ್‍ಡಿಸಿ ನೇಕಾರರಿಗೆ ಸಂಬಂಧ 47 ಲಕ್ಷ ರೂ.ಗಳನ್ನು ನಗರಸಭೆಯಲ್ಲಿರಿಸಿದ್ದು ನಾನೇ. ಸದ್ಯ ಜೀವನ ಉಳಿಸುವ ಸಲುವಾಗಿ ಹಿರಿಯರ ಒತ್ತಡದಿಂದ ಕೆಲ ದಾನಿಗಳೊಂದಿಗೆ ಸ್ವತಃ 1 ಕೋಟಿ ರೂ.ಗಳನ್ನು ಸೇರಿಸಿ ಕೊರೊನಾ ಸಂಕಷ್ಟದಲ್ಲಿರುವ ಎಲ್ಲ ವರ್ಗಗಳ ನೇಕಾರರಿಗೆ ತೇರದಾಳ ಕ್ಷೇತ್ರಾದ್ಯಂತ 13 ವಿಧದ ಸಾಮಗ್ರಿಗಳ 600 ರೂ.ಗಳ ಕಿಟ್ ಸುಮಾರು 26,700 ಕಿಟ್‍ಗಳನ್ನು ವಿತರಿಸಿದ್ದೇವೆ ಹೊರತು ಯಾವ ಹಣವನ್ನೂ ಲೂಟಿ ಹೊಡೆದಿಲ್ಲವೆಂದು ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.
ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಿಟ್ ತಯಾರಿಸುವ ಸಂದರ್ಭ ಆಡುಭಾಷೆಯ ಪದಬಳಕೆಗಳನ್ನು ಮಾಜಿ ಸಚಿವೆ ಉಮಾಶ್ರೀಯವರಿಗೆ ಬೈದ ರೀತಿಯಲ್ಲಿ ಬಿಂಬಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಅರಿಯಬೇಕು. ನಾನು ಯಾರಿಗೂ ಬೈದಿಲ್ಲ ಅಥವಾ ಅಸಹ್ಯಕರ ರೀತಿಯಲ್ಲಿ ಮಾತನಾಡಿಲ್ಲ. ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಮಾತನಾಡಿದ್ದು ತಪ್ಪೇ? ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಈ ಮಾತಿನಿಂದ ಮಾಜಿ ಸಚಿವರಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ ಎಂದು ಸವದಿ ತಿಳಿಸಿದರು.
ಪ್ರತಿಜ್ಞೆ: ಕೊರೊನಾ ವೈರಸ್ ತನ್ನ ಅಟ್ಟಹಾಸ ದೇಶಾದ್ಯಂತ ಇನ್ನೂ ಮೆರೆಯುತ್ತಿದೆ. ಕಡ್ಡಾಯವಾಗಿ ಸ್ಯಾನಿಟೈಜರ್, ಮಾಸ್ಕ್ ಹಾಗು ಸಾಮಾಜಿಕ ಅಂತರ ಅನಿವಾರ್ಯವಾಗಿದೆ. ಸ್ವದೇಶಿ ವಸ್ತುಗಳ ಬಳಕೆ ಸಲುವಾಗಿ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಎಲ್ಲ ವಾರ್ಡ್‍ಗಳಲ್ಲಿ ಪಕ್ಷದ ಕಾರ್ಯಕರ್ತರಿಂದ ಪ್ರತಿಜ್ಞಾ ವಿಧಿ ನಡೆಸಲಾಗುವದೆಂದು ಸವದಿ ತಿಳಿಸಿದರು.
2 ವರ್ಷದ ಸಾಧನೆ: ಕೇಂದ್ರದಲ್ಲಿ ಎರಡನೇಯ ಬಾರಿಗೆ ಪ್ರಧಾನಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರ ಸಾಧನೆ ಕುರಿತಾದ ಕರಪತ್ರಗಳನ್ನು ಪ್ರತಿ ಮನೆಗೆ ತಲುಪಿಸುವ ಯೋಜನೆ ಅನುಸಾರ ಎಲ್ಲ ಪಟ್ಟಣ ಹಾಗು ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ನಡೆಸುತ್ತಿದ್ದಾರೆ. ಯಶಸ್ವಿ ಆಡಳಿತಕ್ಕೆ ಮೋದಿಯವರ ಜನಪರ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ ಎಂದರು.
ಇದೇ ಸಂದರ್ಭ ಸುರೇಶ ಅಕ್ಕಿವಾಟ, ರಾಜು ಅಂಬಲಿ, ಆನಂದ ಕಂಪು, ಕುಮಾರ ಕದಂ ಸೇರಿದಂತೆ ಅನೇಕರಿದ್ದರು.

- FOR ADVERTISEMENT CONTACT -
                   - 9902523698 -