ಬನಹಟ್ಟಿಯ ವೀರಗಾಸೆ ಪುರವಂತ, ವಯೋವೃದ್ಧ ಮಹಾದೇವ ಸಾವಳಗಿ ಶಸ್ತ್ರಕ್ರಿಯೆ ಮೂಲಕ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ವಾಪಸ್ ಮನೆ ಸೇರಿದರು.
ಮತ್ತೆ ಕುಣಿಯಲು ಸಜ್ಜಾದ ವೀರಗಾಸೆ ಪುರವಂತ
ಡಾ. ಪದ್ಮಜೀತ ನಾಡಗೌಡ ಅಭಯ ಹಸ್ತ
ರಬಕವಿ-ಬನಹಟ್ಟಿ,ಮೇ25: ಬನಹಟ್ಟಿಯ ಹಿರಿಯ ವೀರಗಾಸೆ ಪುರವಂತ, ವಯೋವೃದ್ಧನಾಗಿ, ಕಡುಬಡವ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದ ಮಹಾದೇವ ಸಾವಳಗಿ ಯಡೂರಿನ ವೀರಭದ್ರ ದೇವಾಲಯದಲ್ಲಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭ ಬಿದ್ದ ಪರಿಣಾಮ ಸೊಂಟದಲ್ಲಿ ಶಸ್ತ್ರಕ್ರಿಯೆ ಅನಿವಾರ್ಯವಾಗಿತ್ತು. ಈ ಕುರಿತು ದಿ.11 ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ `ಸಂಕಷ್ಟದಲ್ಲಿ ಕಲಾವಿದ: ಶಸ್ತ್ರಕ್ರಿಯೆ ನೆರವಿಗಾಗಿ ಮನವಿ’ ಕುರಿತು ಸುದ್ದಿಗೆ ಸ್ಪಂದಿಸಿದ ರಬಕವಿಯ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಪದ್ಮಜೀತ ನಾಡಗೌಡಾ ಪಾಟೀಲ ನೆರವಿಗೆ ಧಾವಿಸಿ, ಹಾರೂಗೇರಿಯ ಸಂಜಯ ಪಾಟೀಲ ಎಲುಬು ಆಸ್ಪತ್ರೆಗೆ ಸೇರಿಸಿ ಅದರ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದರು.
ಇದೀಗ 12 ದಿನಗಳ ಕಾಲ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ವಾಪಸ್ ಮನೆ ತಲುಪಿರುವ ಪುರವಂತ ಮಹಾದೇವ ಸಾವಳಗಿಗೆ ಮತ್ತೇ ತನ್ನ ಪುರವಂತಿಕೆಯ ವೈಭವ ಮರಳಿ ಪಡೆಯುವಂತಾಗಿದೆ. ನೆರವು ನೀಡಿದ ಡಾ. ನಾಡಗೌಡರಿಗೆ ಪತ್ರಿಕೆ ಅಭಿನಂದಿಸುತ್ತದೆ.

Social Plugin