◆ ಅಂಬರೀಷ್ ಬರ್ತ್ ಡೇ ಸ್ಪೆಷಲ್ ◆
■ ಅಂಬಿಯನ್ನು ಬದಲಾಯಿಸೋದಕ್ಕೆ ಸುಮಲತಾರಿಂದಲೂ ಸಾಧ್ಯವಾಗಲಿಲ್ಲ ಯಾಕೆ? ■
ಆ ವರೆಗೆ ಹೋಟೆಲು ವಾಸ ಅನುಭವಿಸುತ್ತಿದ್ದ ಅಂಬರೀಶ್ ಸುಮಲತಾರನ್ನು ಮದುವೆಯಾಗಲು ತೀರ್ಮಾನಿಸಿದಾಗ ಅನಿವಾರ್ಯವಾಗಿ ಮನೆ ಮಾಡ ಬೇಕಾಯಿತು! ಮದುವೆ ಅಂದರೇನು? 1991ರ ಡಿಸೆಂಬರ್ 8ನೇ ತಾರೀಕಿನ ಬೆಳಿಗ್ಗೆ ಸುಮಲತಾ ಲಗೇಜ್ ತೆಗೆದುಕೊಂಡು ಅಂಬರೀಶ್ ಮನೆಗೆ ಬಂದರು. ಸಂಜೆ ಆರೂಕಾಲು ಗಂಟೆಗೆ ದೇವರ ಮುಂದೆ ನಿಂತು ಸುಮಲತಾ ಕುತ್ತಿಗೆಗೆ ಅಂಬರೀಶ್ ತಾಳಿ ಕಟ್ಟಿಬಿಟ್ಟರು! ಅಲ್ಲಿ ಇದ್ದದ್ದು ಇವರಿಬ್ಬರೇ! ಆ ಮೇಲೆ ಸೀದಾ ಮನೆ ಮಹಡಿ ಹತ್ತಿದರು! ಇದಿಷ್ಟೇ ಈ ರೆಬೆಲ್ ಸ್ಟಾರ್'ನ ಮದುವೆಯ ಕಥೆ! ಮದುವೆಗೂ ಮೊದಲು ಅಂಬಿಗೆ ಸಾಕಷ್ಟು ಆಫರ್'ಗಳು ಬಂದದ್ದು ನಿಜ. ಇವರಲ್ಲಿ ದೊಡ್ಡ ದೊಡ್ಡ ನಟೀಮಣಿಯರೂ ಇದ್ದರೆನ್ನಿ. ಆದರೆ ಯಾರಿಗೂ ಈ ಅಂಬಿ ಮದುವೆಯಾಗುತ್ತೇನೆಂದು ಮಾತು ಕೊಟ್ಟಿರಲಿಲ್ಲ. ಅಂಬರೀಶ್ ಮಾತು ಕೊಟ್ಟದ್ದು ಸುಮಲತಾಗೆ ಮಾತ್ರ. ಮಾತಿಗೆ ತಪ್ಪದ ಮಗ ಅಂಬರೀಶ್ ಸುಮಲತಾರನ್ನು ವರಿಸಿದ್ದು ಹೀಗೆ. ಮದುವೆಯಾದ ವರ್ಷವೊಂದರಲ್ಲೇ, ಅಂದರೆ 1992ರ ಅಕ್ಟೋಬರ್ 3ರಂದು ಅಭಿಷೇಕ್ ಹುಟ್ಟಿದ. ಉಡಾಫೆ ಗುಣದ ಸರದಾರ ಅಂಬರೀಶ್ ಸಂಸಾರಿಯಾದದ್ದು ಮತ್ತು ಗಂಡು ಮಗುವಿನ ತಂದೆಯಾದದ್ದು ಹೀಗೆ...
ನಿಜ ಹೇಳಬೇಕು ಅಂದ್ರೆ ಅಂಬರೀಶ್ ಅವರಿಗೆ ಮದುವೆ ಅಂದರೆ ಭಯ. ಉಂಡಾಡಿ ಗುಂಡನ ಹಾಗೆ ಬಾಳಿ ಬದುಕಿದ ವ್ಯಕ್ತಿ ಹೀಗೆ ಸಂಸಾರ ಬಂಧನಕ್ಕೆ ಒಳಗಾದರೆ ಹೇಗೆ? ಅಂಬರೀಶ್ ನಿಜಕ್ಕೂ ಸುಸ್ತು ಹೊಡೆದು ಬಿಟ್ಟರು. ಕೌಟುಂಬಿಕ ಜೀವನಕ್ಕೆ ಒಗ್ಗಿ ಕೊಳ್ಳೋದು ಇವರಿಗೆ ನಿಜಕ್ಕೂ ಕಷ್ಟವಾಯಿತು. ಆದರೆ ಅನಿವಾರ್ಯ. ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿತ್ತು ಅಂಬಿ ಬದುಕಿನ ಫಜೀತಿ!
ಆದರೆ ಮನೆಗೆ ಬಂದ ಮಹಾಲಕ್ಷ್ಮೀ ಸುಮಲತಾರದ್ದು ಶಿಸ್ತಿನ ಬದುಕು. ತಾಳ್ಮೆಯ ಪ್ರತಿರೂಪದಂತಿದ್ದ ಸುಮಲತಾ ಅಪ್ಪನನ್ನು ಮತ್ತು ಮಗನನ್ನು ದಾರಿಗೆ ತರುವಲ್ಲಿ ಯಶಸ್ವಿಯಾದರು. ಆಗ ಅಂಬರೀಶ್ ಅವರಿಗೆ 'ಬೆಚ್ಚನೆಯ ಮನೆ, ಇಚ್ಛೆಯನರಿವ ಪತ್ನಿ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...' - ಎಂಬ ವಚನದ ಅರ್ಥ ಗೊತ್ತಾದದ್ದು!
ನಿಜ ಹೇಳಬೇಕೆಂದರೆ, ಅಂಬರೀಶ್ ಅವರನ್ನು ಸಂಪೂರ್ಣವಾಗಿ ಬದಲಾಯಿಸಲು ಪ್ರಯತ್ನ ಪಟ್ಟರು ಸುಮಲತಾ. ಅದರಲ್ಲಿ 90% ಯಶಸ್ವಿಯೂ ಆದರು. ಆದರೆ 10% ಬದಲಾಯಿಸಲು ಸಾಧ್ಯವಾಗಲಿಲ್ಲ! ಅದೇನು 10%?
ಇದನ್ನು ಅಂಬರೀಷ್ ಅವರ ಮಾತಿನಲ್ಲೇ ಕೇಳಬೇಕು : 'ಮೊದಲಿನಿಂದಲೂ ನನಗೆ ಹೋಟೆಲ್ ಊಟ, ಶೂಟಿಂಗ್ ಟ್ರೀಟ್'ಮೆಂಟ್...ಅಂದರೆ ಇಷ್ಟ. ಇವೆಲ್ಲವನ್ನೂ ವರ್ಷಗಟ್ಟಲೆ ಅನುಭವಿಸಿ ಅಭ್ಯಾಸವಿದ್ದ ನನಗೆ ಮೊದಮೊದಲು ಮನೆ ಊಟ ಇಷ್ಟವಾಗುತ್ತಿರಲಿಲ್ಲ. ಮನೆಯಲ್ಲೂ ಹೋಟೆಲ್ ತರಹ ಬೆಳಗ್ಗೆ ನಾಲ್ಕೈದು ತಿಂಡಿ, ಮಧ್ಯಾಹ್ನ ನಾಲ್ಕಾರು ವಿಧದ ಊಟ : ಅಂದರೆ, ಬಿರಿಯಾನಿ, ಕಬಾಬ್, ಫ್ರೈ...ಇತ್ಯಾದಿ ಇತ್ಯಾದಿ ಇರಬೇಕು! ಎಲ್ಲವೂ ರುಚಿಕಟ್ಟಾಗಿರಬೇಕು. ಒಂದೇ ಒಂದು ತಿಂಡಿ, ಒಂದೇ ಒಂದು ಊಟ ಅಂದ್ರೆ ನನಗಾಗದು. ಇಡ್ಲಿ ಜೊತೆ ಸಾಂಬಾರ್ ಮತ್ತು ನಾಲ್ಕೈದು ತರಹ ಚಟ್ನಿ ಇರ್ಬೇಕು! ಇದಲ್ಲದೆ, ಪೊಂಗಲ್, ಖಾರಾಭಾತ್, ಪುದೀನಾ ಚಟ್ನಿ, ಮೊಸರುಬಜ್ಜಿ...ಹೀಗಿದ್ರೆನೇ ಚೆಂದ. ಇದನ್ನೆಲ್ಲಾ ನಾನು ತಿಂತೀನೋ ಬಿಡ್ತೀನೋ ಅದು ಬೇರೆ ವಿಚಾರ. ಆದ್ರೆ ಟೇಬಲ್ ಮೇಲೆ ಇವೆಲ್ಲ ಇರಲೇ ಬೇಕು! ಇವನೇನು ಬಕಾಸುರನಾ ಅಂತ ತಪ್ಪು ತಿಳ್ಕೋಬೇಡಿ. ನಾಲ್ಕು ತರಹ ತಿಂಡಿ ಇದ್ರೆ ಸ್ವಲ್ಪ ಸ್ವಲ್ಪ ಮಾತ್ರ ತಿನ್ನೋದು ನನ್ಗೆ ಅಭ್ಯಾಸವಾಗಿ ಬಿಟ್ಟಿದೆ! ಒಂದೇ ತರಹ ಇದ್ರೆ ಬೇಜಾರು. ಆದ್ರೆ ಮನೆ ಯಜಮಾನಿಯಾಗಿ ಸುಮಾ ನನ್ನ ಇಂಥಾ ಹುಚ್ಚಾಟಕ್ಕೆ ಬ್ರೇಕ್ ಹಾಕಿದ್ದಾಳೆ. ತುಂಬಾ ಖರ್ಚು, ಯಾಕೆ ಸುಮ್ನೇ ವೇಸ್ಟ್ ಮಾಡ್ತೀರಿ ಅಂತ ತಕರಾರು ಮಾಡ್ತಾಳೆ. ವೇಸ್ಟ್ ಆದ್ರೆ ಆಗ್ಲಿ, ತಿನ್ನೋದನ್ನು ಇಷ್ಟ ಪಟ್ಟು ತಿಂದ್ರೆನೇ ಚೆಂದ ಅಂತೀನಿ ನಾನು...
'ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ 30-40 ಇಡ್ಲಿ ತಿಂತಿದ್ದೆ! ಒಂದು ಡಬರಿ ಚಟ್ನಿ ಬೇಕಿತ್ತು ನಂಗೆ! ಇದು ಸಿನೆಮಾಗೆ ಬಂದ ಮೇಲೂ ಮುಂದುವರಿಯಿತು. ನನ್ನ ಹಣೆಬರಹ ಗೊತ್ತಿದ್ದರಿಂದ ಪ್ರಭಾಕರ್, ಜಯಮಾಲಾ, ಸುಧೀರ್...ಮೊದಲಾದವರೆಲ್ಲಾ ಚಿಕ್ಕನ್, ಮಟ್ಟನ್ ತರಿಸಿ ಬಿಡುತ್ತಿದ್ದರು! ಕೆಲವರಂತೂ ಮನೆಯಿಂದಲೇ ತರಿಸಿ ಕೊಡೋರು. ಡಯಟ್ ಗಿಯಟ್ ಅಂದ್ರೆ ನಾನು ಮೈಲು ದೂರ ಓಡ್ತೇನೆ! ನಾನು ಹೇಳಲು ಹೊರಟದ್ದು ಏನು ಅಂದ್ರೆ...ಸುಮಲತಾ ನನ್ನ ಬದುಕಲ್ಲಿ ಬಂದ ಮೇಲೆ ನನ್ನ ಬದುಕಿನ ಶೈಲಿಯೇ ಬದಲಾಯಿತು. ಆದರೆ ಊಟ-ತಿಂಡಿ ವಿಚಾರದಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಲಿಲ್ಲ! ಅದೇ ಇಡ್ಲಿ, ಅದೇ ಸಾಂಬಾರ್, ಅದೇ ನಾಲ್ಕೈದು ಬಗೆಯ ಚಟ್ನಿ, ಬಿರಿಯಾನಿ, ಚಿಕ್ಕನ್ ಕಬಾಬ್, ಮಟ್ಟನ್ ಫ್ರೈ, ಫಿಶ್ ಕರ್ರಿ, ಬಾಂಗ್ಡಾ ಸಾರು, ಸೀಗಡಿ ಪಲ್ಯ...ಬೇಕೇ ಬೇಕು! ಈಗೀಗ ಬೇರೆಲ್ಲಾ ವಿಚಾರಗಳಿಗೂ ನಾನು ಸುಮಲತಾಗೆ ಹೊಂದಿಕೊಂಡಿದ್ದೇನೆ. ಆದರೆ ಊಟ-ತಿಂಡಿ ವಿಚಾರದಲ್ಲಿ ಮಾತ್ರ ಅದೇ ಸುಮಲತಾ ನನ್ನ ಟೇಸ್ಟಿಗೆ ಹೊಂದಿಕೊಂಡಿದ್ದಾಳೆ. ಈವೊಂದು ವಿಚಾರದಲ್ಲಿ ಸುಮಲತಾ ಅಂತಲ್ಲ ಬೇರೆ ಯಾರೇ ಒತ್ತಡ ಹೇರಿದರೂ ಈ ಅಂಬರೀಶನನ್ನ ಬದಲಾಯಿಸಲು ಸಾಧ್ಯವಿಲ್ಲ...' - ಇಷ್ಟು ಹೇಳಿ ಒಂದು ನಿರಾಳವಾದ ನಿಟ್ಟುಸಿರು ಬಿಟ್ಟಿದ್ದರು ಅಂಬರೀಷ್. ಆದರೆ ಇಂಥಾ ಹೃದಯವಂತ ಅಂಬರೀಶ್ ಇಂದು ನಮ್ಮ ಜೊತೆಗಿಲ್ಲ. ಬೆಳಗ್ಗಿನ ತಿಂಡಿ ಮತ್ತು ಮದ್ಯಾಹ್ನದ ಊಟದ ಹೊತ್ತಲ್ಲಿ ಖಾಲಿ ಟೇಬಲ್ ನೋಡಿ ಆ ಹೆಣ್ಣು ಜೀವ ಹೇಗೆ ನೋವನ್ನು ಸಹಿಸಿಕೊಳ್ಳುತ್ತೋ ಆ ಭಗವಂತನೇ ಬಲ್ಲ!!!
- ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ....
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....

Social Plugin