ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ : ಶಿವಲಿಂಗ ಟಿರಕಿ
ರಬಕವಿ-ಬನಹಟ್ಟಿ : ನೇಕಾರಿಕೆಯನ್ನು ಮೂಲ ಮೂಲವೃತ್ತಿಯಾಗಿಸಿಕೊಂಡು ತಲೆಮಾರುಗಳಿಂದ ನೇಕಾರಿಕೆಯನ್ನು ನೆಚ್ಚಿಕೊಂಡು ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿರುವ ನೇಕಾರರನ್ನು ಸರಕಾರ ನೇಕಾರ ಕಾರ್ಮಿಕರೆಂದು ಪರಿಗಣಿಸಬೇಕೆಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿ ಮಾತನಾಡಿದ ಶಿವಲಿಂಗ ಟಿರಕಿ, ಅತಿವೃಷ್ಠಿ, ಅನಾವೃಷ್ಠಿ, ನೆರೆಹಾವಳಿ, ಬರಗಾಲ ಹಾಗೂ ಲಾಕಡೌನ್‌ನಂತಹ ಪರಿಸ್ಥಿತಿಗಳಿಂದ ನೇಕಾರರು ತೀವ್ರ ತೊಂದರೆಗೊಳಗಾಗಿದ್ದಾರೆ. ಸರಕಾರದ ಸೌಲಭ್ಯಗಳು ದೊರೆಯಲಾರದೆ ನೇಕಾರರ ಬದುಕು ಚಿಂತಾಜನಕವಾಗಿದೆ. ಕಟ್ಟಡ ಕಾರ್ಮಿಕರನ್ನು ಮಾನ್ಯ ಮಾಡಿರುವ ಸರಕಾರ ನೇಕಾರರನ್ನು ವೃತ್ತಿಪರ ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ನೀಡುವ ಸೌಲಭ್ಯಗಳನ್ನು ನೇಕಾರರಿಗೂ ನೀಡಬೇಕು. ೫೫ ವರ್ಷವಾದ ನೇಕಾರರಿಗೆ ಪ್ರತಿತಿಂಗಳು ೫ ಸಾವಿರ ಮಾಶಾಸನ ನೀಡಬೇಕು, ನೇಕಾರಿಕೆಯಲ್ಲಿರುವ ಕೂಲಿ ನೇಕಾರ, ವಾರ್ಪಿಂಗ್, ವಾಂಡರ್ ಸುತ್ತುವವರು, ವೈಪಿಂಗ್, ಬಣ್ಣ ಹಾಕುವವರು ಸೇರಿದಂತೆ ನೇಕಾರಿಕೆ ಪೂರಕ ವೃತ್ತಿಯಲ್ಲಿರುವವರನ್ನು ಸರಕಾರ ಸರ್ವೆ ಮಾಡಿ, ಅವರಿಗೆ ಸೌಲಭ್ಯ ನೀಡಬೇಕೆಂದು ಮನವಿಯ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ ಪ್ರಶಾಂತ ಚನಗೊಂಡ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದರು. ನಂದು ಗಾಯಕವಾಡ, ಶಿವಾನಂದ ಗುಂಡಿ, ರಾಜೇಂದ್ರ ಮಿರ್ಜಿ, ಭರತ ಕದ್ದಿಮನಿ, ಬಸವರಾಜ ಧಬಾಡಿ, ಸಂತೋಷ ಕೋಪರ್ಡೆ, ಶ್ರೀಶೈಲ ಚಿಂಚಖಂಡಿ, ಬಸವರಾಜ ನಾಗರಾಳ, ಈರಪ್ಪಾ ಮುದಕವಿ, ರಾಜು ಕುಕ್ಕುಗೋಳ, ಚನ್ನಪ್ಪ ಹುಣಶ್ಯಾಳ ಸೇರಿದಂತೆ ರಬಕವಿ-ಬನಹಟ್ಟಿ ತಾಲೂಕಿನ ನೇಕಾರರು ಉಪಸ್ಥಿತರಿದ್ದರು.

-ವರದಿ : ಮಾಧವಾನಂದ ಪ್ರಭುಜಿ ಕೋಪರ್ಡೆ, ಬನಹಟ್ಟಿ ಮೊ : ೯೯೬೪೩೪೩೪೫೬