"ನರಕ" ಏನದು ? ಹೇಗಿದೆ ??
"ಗುರುವಿಘಾತಿಯ ವೇದನಿಂದಾ
ಪರನ ಪರದಾರಾಭಿಗಾಮಿಯ
ಹರ ಮುರಾರಿಯ ಭೇದವಾದಿಯ ವಿಪ್ರನಿಂದಕನ
ಪರಗುಣಾಸೂಯಕನ ಹಿಂಸಾ
ಪರನ ಹಿಸುಣನ ಶಠನ ಕೃಪಣನ
ನರಕವಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ" ಇದು ಕುಮಾರವ್ಯಾಸ ಭಾರತದ ದ್ರೋಣಪರ್ವದ ಎಂಟನೆಯ ಸಂಧಿಯ ೩೭ನೇ ಷಟ್ಪದಿ. ಇಲ್ಲಿ ನರಕವಾಗಲಿ ಎನ್ನುವ ಮಾತು ಕುಮಾರವ್ಯಾಸ ಹೇಳುತ್ತಾನೆ. ಹಾಗಾದರೆ ಆ ನರಕ ಯಾವುದು ??? ನೋಡೋಣ ಮುಂದೆ.
ಅಭ್ರಾತರೋ ನ ಯೋಷಣೋ ವ್ಯಂತಃ ಪತಿರಿಪೋ ನ ಜನಯೋ ದುರೇವಾಃ |
ಪಾಪಾಸಃ ಸಂತೋ ಅನೃತಾ ಅಸತ್ಯಾ ಇದಂ ಪದಮಜನತಾ ಗಭೀರಂ ||
ಋಗ್ವೇದದಲ್ಲಿ ನರಕದ ಕುರಿತಾದ ಯಾವ ಸ್ಪಷ್ಟತೆಯೂ ಕಾಣಿಸುವುದಿಲ್ಲ. ನರಕ ಎನ್ನುವುದು ಇದೆಯಾ ಎನ್ನುವ ಬಗ್ಗೆ ಎಲ್ಲಿಯೂ ಪ್ರಾಯಶಃ ಸಿಗುವುದಿಲ್ಲ ಅಥವಾ ನಾನು ಓದಿಕೊಂಡಲ್ಲಿ ಸಿಗುವುದಿಲ್ಲ. ಇದರಲ್ಲಿ "ಇದಂ ಪದಮಜನತಾ ಗಭೀರಂ" ಎಂದಿರುವುದನ್ನು ನರಕಕ್ಕೆ ಹೇಳಿರಬಹುದು ಎಂದು ತೆಗೆದುಕೊಳ್ಳಬಹುದು ಎನ್ನುವುದು ಸಾಯಣಾಚಾರ್ಯರ ಅಭಿಮತ. ಈ ಆಳವಾದ ಪ್ರದೇಶವು ಪಾಪಿಷ್ಟರಿಗೆ, ಸುಳ್ಳು ಹೇಳುವವರಿಗೆ ಮತ್ತು ಅನೃತವಾದಿಗಳಿಗಾಗಿಯೇ ಮಾಡಲ್ಪಟ್ಟಿದೆ. ಇಲ್ಲಿ ನೇರ ನರಕದ ಉಲ್ಲೇಖ ಸಿಗದೇ ಇದ್ದರೂ ಪಾಪಿಗಳಿಗಾಗಿಯೇ ಪ್ರತ್ಯೇಕ ಸ್ಥಾನವೊಂದಿರುವುದನ್ನು ಋಗ್ವೇದ ನಾಲ್ಕನೇ ಮಂಡಲದ ಐದನೇ ಸೂಕ್ತದ ಐದನೇ ಋಕ್ಕು ಸೂಚಿಸುತ್ತದೆ.
ಇಂದ್ರಾಸೋಮಾ ದುಷ್ಕೃತಾ ವವ್ರೇ ಅಂತರನಾರಂಭಣೇ ತಮಸಿ ಪ್ರ ವಿಧ್ಯತಂ |
ಯಥಾ ನಾತಃ ಪುನರೇಕಶ್ಚಯನೋದಯತ್ತದ್ವಾ ಮಸ್ತು ಸಹಸೇ ಮನ್ಯು ಮಚ್ಚವಃ ||
ಇಂದ್ರ ಮತ್ತು ಸೋಮನನ್ನು ಕುರಿತಾಗಿ ಹೇಳುವ ಈ ಋಕ್ಕಿನಲ್ಲಿ ಹೇಳುವಂತೆ ದುಷ್ಟ ಕಾರ್ಯಗಳನ್ನು ಮಾಡುವವರಲ್ಲಿ ಒಬ್ಬರನ್ನಾದರೂ ಅಂಧಕಾರದಿಂದ ತುಂಬಿರುವ ಆಲವಾದ ಬಾವಿಯಲ್ಲಿ ನೂಕಬೇಕು. ಅವರು ಪುನಃ ಮೇಲೆದ್ದು ಬರದಂತಹ ಪ್ರಪಾತವಾದ ಆಳವಾದ ಪಾತಾಳಕ್ಕೆ ಹಾಕಿ ಹಿಂಸಿಸಿರಿ ಎನ್ನುವಲ್ಲಿ ನರಕವೇನೋ ಇರಬಹುದು ಅನ್ನಿಸುತ್ತದೆ ಆದರೆ ಇಲ್ಲಿಯೂ ನೇರ ಪ್ರಸ್ತಾವ ಸಿಗುತ್ತಿಲ್ಲ. ಅಸುರರ ಶಕ್ತಿಯನ್ನು ಆದಷ್ಟು ಕುಗ್ಗಿಸಿ ಎಂದು ಬೇಡಿಕೊಳ್ಳಲಾಗಿದೆ. ಅಂದರೆ ದುಷ್ಟತನವನ್ನು ದುಷ್ಕೃತ್ಯಗಳನ್ನು ತಡೆಯಬೇಕು ಎನ್ನುವ ಆಶಯ ಋಗ್ವೇದದ ೭ನೇ ಮಂಡಲದ ೧೦೪ನೇ ಸೂಕ್ತದ ೩ನೇ ಋಕ್ಕಿನಲ್ಲಿ ಕಾಣಿಸುತ್ತದೆ. ಅದೆ ಸೂಕ್ತದ ೧೧ನೇ ಋಕ್ಕಿನಲ್ಲಿ
ಪರಃ ಸೋ ಅಸ್ತು ತನ್ವಾ ತನ ಚ ತಿಸ್ರಃ ಪೃಥಿವೀ ರದೋ ಅಸ್ತು ವಿಶ್ವಾಃ |
ಪ್ರತಿ ಶುಷ್ಯತು ಯಶೋ ಅಸ್ಯ ದೇವಾ ಯೋ ನೋ ದಿವಾ ದಿಪ್ಸತಿ ಯಶ್ಚ ನಕ್ತಮ್ ||
ಎನ್ನುವಲ್ಲಿ ಯಾವ ಅಸುರನು ನಮ್ಮನ್ನು ಹಗಲೂ ಮತ್ತು ರಾತ್ರಿ ಕಾಲದಲ್ಲಿಯೂ ಏಕ ಪ್ರಕಾರವಾಗಿ ಹಿಂಸಿಸುವನೋ ಅಂತಹ ಅಸುರನು ತನ್ನ ಶರೀರವನ್ನೂ ಹಾಗೂ ತನ್ನ ಪುತ್ರಾದಿಗಳಿಂದ ಬೇರ್ಪಟ್ಟು ಎರಡನ್ನೂ ಕಳೆದುಕೊಳ್ಳಲಿ. ಅವನು ಮೂರು ಲೋಕಗಳಿಗಿಂತಲೂ ಕೆಳಗಿರುವ ಅಂಧಕಾರದ ಪ್ರದೇಶಕ್ಕೆ ಸೇರಲಿ ಎನ್ನುವುದು ಸಹ ಒಂದು ರೀತಿಯಲ್ಲಿ ನರಕವನ್ನೇ ಹೇಳಿದಂತೆ ಇದೆ. ಆದರೆ ಇವೆಲ್ಲವೂ ಭೂಮಿಯನ್ನೂ ಮೀರಿದ ಅಥವಾ ಈ ಭೂಮಿಗಿಂತಲೂ ಭಿನ್ನವಾದ ಕೆಳಗಿನ ಪ್ರದೇಶದಲ್ಲಿ ಅಂಧಕಾರದ ಒಂದು ಪ್ರದೇಶ ಇದೆ ಅನ್ನುತ್ತವೆಯೇ ಹೊರತು ನರಕವನ್ನೇ ಹೇಳುವುದು ಸ್ಪಷ್ಟವಾಗುವುದಿಲ್ಲ. ಒಂದಂತೂ ಸತ್ಯ ಎನ್ನಿಸುತ್ತದೆ ನಮ್ಮ ಜೀವಿತದ ಅವಧಿಯಲ್ಲಿ ಅಥವಾ ನಾವು ಈ ಭೂಮಿಯಲ್ಲಿ ಜೀವಿಸಿ ಇರುವ ತನಕ ಯಾವ ಸುಖವನ್ನು ಅನುಭವಿಸುತ್ತೇವೆಯೋ ಅದೇ ಮುಖ್ಯ. ಅದು ನಮಗೆ ಅನುಭವಗ್ರಾಹ್ಯವಾಗಿರುತ್ತವೆ. ನಮ್ಮ ಮರಣಾನಂತರದ ಯಾವ ಸುಖವೋ ದುಖವೋ ನಮಗಂತೂ ತಿಳಿಯಲಿಕ್ಕಿಲ್ಲ ಅಥವಾ ಅದು ಅನುಭವ ಗ್ರಾಹ್ಯವಲ್ಲ.
ಸರ್ವಾನ್ ಕಾಮಾನ್ ಯಮರಾಜ್ಯೇ ವಶ ಪ್ರದದುಷೇ ದುಹೇ | ಅಥಾಹುರ್ನಾರಕಂ ಲೋಕಂ ನಿರುಂಧಾನಸ್ಯ ಯಾಚಿತಾಂ || ೨೪:೪:೩೬; ಎನ್ನುವ ಅಥರ್ವವೇದದ ಮಂತ್ರ ನರಕದ ಉಲ್ಲೇಖವನ್ನು ಕೊಡುತ್ತದೆ. ನರಕದಲ್ಲಿ ತಾವು ಮಾಡಿದ ಪಾಪ ಕರ್ಮಗಳ ಫಲವನ್ನು ಅನುಭವಿಸುತ್ತಾರೆ ಎನ್ನುವುದನ್ನು ಸಾರಿ ಹೇಳುತ್ತದೆ.
ಅಸೌ ಯೋ ಅಧರಾದ್ ಗೃಹಸ್ತತ್ರ ಸನ್ತ್ವರಾಯ್ಯಃ |
ತತ್ರ ಸೋದಿರ್ನ್ಯುಚ್ಯತು ಸರ್ವಾಶ್ಚ ಯಾತುಧಾನ್ಯಃ || ಎನ್ನುವ ಇನ್ನೊಂದು ಮಂತ್ರದಲ್ಲಿ ಕ್ರಿಮಿ ಕೀಟ ರೋಗ ರುಜಿನಾದಿಗಳಿಂದ ತುಂಬಿರುವ ಪಿಶಾಚಗಳು ನೆಲೆಸುವಂತಹ ಅಧೋಲೋಕ ಎಂದು ಬಣ್ಣಿಸಿದ್ದು ಕಾಣಸಿಗುತ್ತದೆ. ವಾಜಸನೇಯ ಸಂಹಿತೆಯಲ್ಲಿಯೂ ಇಲ್ಲಿ ಕೊಲೆ ಪಾತಕನು ಜೀವಿಸುವನು ಎಂದಿದೆ. ಹೀಗೇ ವಿಧ ವಿಧವಾಗಿ ನರಕದ ಕುರಿತು ಸ್ವಲ್ಪ ಭಯ ಹುಟ್ಟಿಸುವುದು ಅಥರ್ವವೇದ ಮಾತ್ರ . ಇನ್ನು ಕಾಣ್ವ ಶತಪಥ ಬ್ರಾಹ್ಮಣದಲ್ಲಿ ವ್ಯಕ್ತಿ ಸತ್ತ ಬಳಿಕ ಪುನಃ ಬದುಕುತ್ತಾನೆ ಆದರೆ ಆತ ಸತ್ತ ನಂತರ ಆತನ ಕರ್ಮಗಳನ್ನು ತೂಗಿ ನೋಡುತ್ತಾರೆ ಅವನ ಸತ್ಕರ್ಮಗಳಿಗೆ ಸುಖಗಳನ್ನು ದುಷ್ಕರ್ಮಗಳಿಗೆ ದುಖವನ್ನೂ ಅನುಭವಿಸುತ್ತಾನೆ ಎಂದು ಹೇಳುತ್ತದೆ. ಹೀಗೆ ನರಕದ ವಿಷಯವಾಗಿ ವೇದಗಳಲ್ಲಿ ಅಂತಹ ಮಹತ್ವ ಇಲ್ಲದಿರುವುದು ಕಂಡು ಬಂದರೂ ತಮಸ್ಸು ಅಥವಾ ಅಂಧಕಾರದ ಒಂದು ಕಲ್ಪನೆ ಸಿಗುತ್ತದೆ. ಆದರೆ ನಾನು ಗಮನಿಸಿರಲಿಲ್ಲ ಯಜುರ್ವೇದದ ಅರುಣಪ್ರಶ್ನದಲ್ಲಿದೆ. ಅಲ್ಲಿ ನರಕದ ವಿವರಗಳು ಸಿಗುತ್ತವೆ. ಇನ್ನು ಬ್ರಾಹ್ಮಣಗಳಲ್ಲಿ ಸ್ವಲ್ಪ ಹೇಳಲ್ಪಟ್ಟಿದೆ. ತೈತ್ತಿರೀಯ ಆರಣ್ಯಕದಲ್ಲಿ ಯಮನು ಸನ್ಮಾರ್ಗದಲ್ಲಿ ನಡೆಯುವವರ ಮತ್ತು ದುರ್ಮಾರ್ಗದಲ್ಲಿ ನಡೆಯುವವರ ವಿಂಗಡಣೆ ಮಾಡುತ್ತಾನೆ ಎನ್ನುತ್ತದೆಯೇ ಹೊರತು ನರಕದ ಸ್ಪಷ್ಟತೆ ಸಿಗುವುದಿಲ್ಲ. ಹಾಗದರೆ ವೇದಗಳಲ್ಲಿ ನರಕದ ಕುರಿತಾಗಿ ಸ್ಪಷ್ಟತೆ ಅಷ್ಟಾಗಿ ಸಿಗುವುದಿಲ್ಲ ಎಂದಾಯಿತು. ರಾಮಾಯಣದಲ್ಲಿಯೂ ಅಂತಹ ವಿವರಣೆ ಸಿಗಲಾರದು ಆದರೆ ಮಹಾಭಾರತದಲ್ಲಿ ನರಕದ ಪ್ರಸ್ತಾಪವಿದೆ. ಪುತ್ರ ಎನ್ನುವ ಶಬ್ದಕ್ಕೆ ಅರ್ಥವನ್ನು ಅದೇ ನರಕದ ಕುರಿತಾಗಿ ಕೊಡುತ್ತದೆ. ಪೂತಿ ಎನ್ನುವ ನರಕದಿಂದ ಪಿತೃಗಳನ್ನು ಪಾರುಮಾಡುವುದರಿಂದ ಪುತ್ರ ಎನ್ನುವ ಶಬ್ದ ಹುಟ್ಟಿದೆ ಎನ್ನುವುದು ಅಲ್ಲಿಯೇ ಸಿಗುವುದು. ಮುಂದೆ ಗರುಡ ಪುರಾಣ ಮತ್ತು ಮಾರ್ಕಂಡೇಯ ಪುರಾಣ ಹೆಚ್ಚು ವಿವರಗಳನ್ನು ಕೊಡುತ್ತದೆ.
ಇನ್ನು ನಾನು ನೇರವಾಗಿ ನಮ್ಮ ಶಾಸನಗಳಲ್ಲಿ ಅಂದರೆ ಹತ್ತನೇ ಶತಮಾನದ ಮೊದಲಿನ ಶಾಸನಗಳಲ್ಲಿ ನರಕದ ಉಲ್ಲೇಖ ಗಮನಿಸಿದರೆ ಸುಮಾರು ೫೭೮ರಲ್ಲಿ ಬಾದಾಮಿಯಲ್ಲಿ ಚಲುಕ್ಯ ಮಂಗಲೇಶ ಹಾಕಿಸಿದ ಮೂರನೇ ಗುಹೆಯ ಪಶ್ಚಿಮದ ಗೋಡೆಯಲ್ಲಿನ ಶಾಸನದಲ್ಲಿ "ಏೞನೆಯಾ ನರಕದಾ ಪುೞು ಅಕು[ಕ್ಕು]ಮ್" ಎಮ್ದು ನರಕದ ಸಂಖ್ಯೆಯನ್ನೇ ಕೊಟ್ಟಿದ್ದಾನೆ. ಸುಮಾರು ೭ನೇ ಶತಮಾನದಲ್ಲಿ ಅಳುಪ ಚಿತ್ರವಾಹನ ಕಿಗ್ಗದ ಋಷ್ಯ ಶೃಂಗೇಶ್ವರದೇವಾಲಯದಲ್ಲಿ ಹಾಕಿಸಿದ ಶಾಸನದಲ್ಲಿ "ಪೂತಿಎನ್ವ ನರಗಕ್ಕೆ ಸಲ್ಗೆ" ಎಂದು ಹಾಕಿಸಿ ಪೂತಿ ಎನ್ನುವ ನರಕವನ್ನು ತಿಳಿಸಿಕೊಟ್ಟಿದ್ದಾನೆ. ಅದೇ ಕಾಲದಲ್ಲಿ ಅದೇ ದೇವಾಲಯದಲ್ಲಿ ಸಾಂತರ ಒಂದು ಶಾಸನ ಬರೆಸುತ್ತಾನೆ ಅಲ್ಲಿಯೂ "ಪೂತಿಎನ್ವನರಗಕ್ಕೆ ಸಲ್ವೋರ್" ಎನ್ನುತ್ತಾನೆ. ಚಳ್ಳಕೆರೆ ತಾಲೂಕು ಚಿಕ್ಕಮಧುರೆಯಲ್ಲಿ ರಾಷ್ಟ್ರಕೂಟ ಪ್ರಭೂತವರ್ಷ ಸುಮಾರು ೭೯೦ರಲ್ಲಿ ಹಾಕಿಸಿದ ಶಾಸನದಲ್ಲಿ "ನರಕೇಷು ಕ್ರಮೇಣತು" ಎನ್ನುತ್ತಾನೆ.
ಧರ್ಮಪುರಿ ಜಿಲ್ಲೆಯ ಕೋಟೆಯ ಮಾರಿಯಮ್ಮ ದೇವಾಲದಲ್ಲಿರುವ ಶಾಸನದಲ್ಲಿ ನೊಳಂಬ ಮಹೇಂದ್ರ ಪಲ್ಲವನು ೮೭೮ರಲ್ಲಿ ಒಂದು ಶಾಸನ ಬರೆಸುತ್ತಾನೆ ಅದರಲ್ಲಿ "ಅವೀಚಿ ಮೊದಲಾಗ್ ಎರ್ಪ್ಪೆತ್ತೆಂಟುಕೋಟಿ ನರಕದೊಳೊಳ್ಗುಂ" ಎಂದು ಅವೀಚಿ ಮೊದಲಾದ ೭೮ ಕೋಟಿ ನರಕಗಳಿವೆ ಎನ್ನುತ್ತಾನೆ. ಮುಂಡರಗಿ ತಾಲೂಕಿನ ಮೇವುಂಡಿ ವೆಂಕಟೇಶ್ವರ ದೇವಾಲಯದಲ್ಲಿನ ಶಾಸನ ರಾಷ್ಟ್ರಕೂಟರ ಎರಡನೇ ಕೃಷ್ಣ ೮೯೭ರಲ್ಲಿ ಹಾಕಿಸುತ್ತಾನೆ ಅಲ್ಲಿ "ರೌ[ರವ] ನರಕದೊಳ್ " ಎಂದು ಆ ನರಕದ ಪರಿಚಯ ಮಾಡಿಸುತ್ತಾನೆ ಹೀಗೆ ಕನ್ನಡದ ಶಾಸನಗಳಲ್ಲಿ ಅಲ್ಲಲ್ಲಿ ಬೇರೆ ಬೇರೆ ನರಕದ ಪ್ರಸ್ತಾವ ಬರುತ್ತದೆ. ಹೀಗೆ ನರಕ ಎನ್ನುವುದು ಒಂದು ಭಯ ಹುಟ್ಟಿಸುವ ಪದವಾಗಿ ನಮಗೆ ಲಭ್ಯವೇ ಹೊರತು ಅದೊಂದು ಅನುಭವ ಜನ್ಯ ಅನ್ನಿಸುತ್ತಿಲ್ಲ. ಇನ್ನು ಅವರವರ ಕರ್ಮಗಳಿಗನುಸಾರವಾಗಿ ಐಹಿಕ ಜೀವನದಲ್ಲಿಯೇ ಅನುಭವಿಸುವ ಕಷ್ಟ ಸುಖಗಳು ಸ್ವರ್ಗ ನರಕ ಎನ್ನಬಹುದೇನೋ. ಅನುಭವಕ್ಕೂ ಮೀರಿದ್ದೆಲ್ಲಾ ಕಲ್ಪನೆಯ ಮಟ್ಟವನ್ನು ಏರಿತ್ತವೆ ಅಷ್ಟೆ ಆದರೆ ಕಲ್ಪನೆಗೂ ಅನುಭವವೇ ಬೇಕಾಗುತ್ತದೆ. ಅದೇನೇ ಇರಲಿ ನರಕ ಎನ್ನುವುದು ನರಕವೇ !!!
#ನಂಬಿದವರ_ನರಕ

Social Plugin