ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಎಲ್ಲಾ ರಾಜ್ಯಗಳಲ್ಲಿ ದೇವಾಲಯ, ಚರ್ಚ್, ಮಸೀದಿಗಳನ್ನು ಮುಚ್ಚಲಾಗಿತ್ತು. ಯುಗಾದಿ, ರಾಮನವಮಿ ಸೇರಿದಂತೆ ಯಾವ ಹಬ್ಬಕ್ಕೂ ದೇವಾಲಯಗಳಿಗೆ ಭಕ್ತರ ಪ್ರವೇಶ ಇರಲಿಲ್ಲ. ಅನೇಕ ಕಡೆಗಳಲ್ಲಿ ಜಾತ್ರೆಗಳನ್ನು ನಡೆಸಿ ಲಾಕ್ಡೌನ್ ಉಲ್ಲಂಘಿಸಿದ್ದು, ಸಾಮಾಹಿಕ ನಮಾಜ್, ಪ್ರಾರ್ಥನೆಗೆ ಅವಕಾಶ ಇರದಿದ್ದರೂ ನಿಯಮ ಮೀರಿದ ಘಟನೆಗಳು ದಾಖಲಾಗಿತ್ತು.
ಆದರೆ, ಗುಡ್ ಫ್ರೈಡೇ, ರಂಜಾನ್ ಸಂದರ್ಭದಲ್ಲಿಯೂ ಚರ್ಚ್, ಮಸೀದಿಗೆ ಜನರು ಭೇಟಿ ನೀಡದಂತೆ ನಿರ್ಬಂಧ ಹೇರಲಾಗಿತ್ತು. ಈಗ ಎಲ್ಲಾ ಧಾರ್ಮಿಕ ಕೇಂದ್ರಗಳ ಬಾಗಿಲು ತೆರೆಯುವ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ಶುಕ್ರವಾರ(ಮೇ 30)ದಂದು ಪ್ರಕಟಣೆ ಹೊರಡಿಸಲಾಗಿದೆ
ಭಾರತದಲ್ಲಿ 5ನೇ ಹಂತದ ಲಾಕ್ ಡೌನ್ ಘೋಷಿಸಲಾಗಿದ್ದು, ಜೂನ್ 30ರ ತನಕ ಜಾರಿಯಲ್ಲಿರಲಿದೆ. 4ನೇ ಹಂತದ ಲಾಕ್ ಡೌನ್ ಅವಧಿ ಮೇ 31ಕ್ಕೆ ಮುಕ್ತಾಯವಾಗಲಿದೆ.
ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಅನ್ವಯ ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಎಲ್ಲಾ ರಾಜ್ಯಗಳಿಗೂ ಅನುಮತಿ ನೀಡಲಾಗಿದೆ. ಇಲ್ಲಿ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಲಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು ಈ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ.
''ದೇವಸ್ಥಾನಗಳನ್ನು ತೆರೆದರೆ ಮಸೀದಿ, ಚರ್ಚ್‌ಗಳನ್ನೂ ತೆರೆಯಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಮಂಗಳವಾರ ಈ ಬಗ್ಗೆ ಪತ್ರ ಬರೆಯಲಾಗಿದೆ. ದೇವಸ್ಥಾನ, ಮಸೀದಿ, ಚರ್ಚ್ ತೆರೆಯುವುದು ಸೇರಿ ಹಲವು ಚಟುವಟಿಕೆಗಳಿಗೆ ಅವಕಾಶ ಕೇಳಿದ್ದೇವೆ. ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದೇವೆ'' ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ನಂತರ ಜೂನ್ 1ರಿಂದಲೇ ಎಲ್ಲಾ ಧಾರ್ಮಿಕ ಕೇಂದ್ರ ತೆರೆಯಲಾಗುವುದು ಎಂದು ಘೋಷಿಸಿದ್ದರು.
ದೇವಾಲಯ, ಮಸೀದಿ, ಚರ್ಚ್ ಇನ್ನಿತರ ಧಾರ್ಮಿಕ ಕೇಂದ್ರ, ಸಾರ್ವಜನಿಕ ಪೂಜಾಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಆಯಾರಾಜ್ಯಗಳು ಈ ಮಾರ್ಗಸೂಚಿಗೆ ತಕ್ಕ ಬದಲಾವಣೆ ಮಾಡಿಕೊಳ್ಳು ಅಧಿಕಾರ ಹೊಂದಿರುತ್ತವೆ. ಕರ್ನಾಟಕದಲ್ಲಿ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಆನ್‌ಲೈನ್ ಸೇವೆಗಳ ಬುಕ್ಕಿಂಗ್ ಈಗಾಗಲೆ ಆರಂಭವಾಗಲಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವ ಪ್ರದೇಶಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ.ಜೂನ್ 30 ರ ತನಕ ಈ ಪ್ರದೇಶದಲ್ಲಿ ಲಾಕ್ಡೌನ್ ನಿಯಮಗಳು ಮುಂದುವರೆಯಲಿದೆ. ಈ ನಡುವೆ ಇಡೀ ದೇಶದಲ್ಲಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಂತಾರಾಜ್ಯ, ರಾಜ್ಯದೊಳಗೆ ಸಾರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದರೆ ಅಲ್ಲಿನ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ.
- FOR ADVERTISEMENT CONTACT - 9902523698

Social Plugin