ಇಲ್ಲಿರುವ ಮೂರೂ ಚಿತ್ರಗಳು ಛತ್ರಪತಿ ಶಿವಾಜಿಯ ರಾಜಧಾನಿ ರಾಯಗಢದವು.
*********************
#ಮೊದಲನೆಯದು
ಛತ್ರಪತಿಯ ರಾಜದರಬಾರಿನ ಪ್ರವೇಶದ್ವಾರ.
#ಎರಡನೆಯದು
ರಾಜದರಬಾರಿನಲ್ಲಿ ಶಿವಛತ್ರಪತಿಯ ಸಿಂಹಾಸನವಿದ್ದ ಜಾಗದಲ್ಲಿ ಸ್ಥಾಪಿಸಲಾಗಿರುವ, ದರಬಾರಿನಲ್ಲಿ ಕುಳಿತುಕೊಳ್ಳುತ್ತಿದ್ದ ಭಂಗಿಯಲ್ಲಿರುವ ಶಿವಛತ್ರಪತಿಯ ಮೂರ್ತಿ.
#ಮೂರನೆಯದು
ಈ 'ವಾಘ್ಯಾ' ಯಾರು ಗೊತ್ತಾ?
"ಶಿವಛತ್ರಪತಿ ತೀರಿಕೊಂಡಾಗ, ಆತನ ಚಿತೆಗೆ ಹಾರಿ ಪ್ರಾಣಾರ್ಪಣೆ ಮಾಡಿದ ಆತನ ಪ್ರೀತಿಯ ನಾಯಿ" _ ಎನ್ನುತ್ತದೆ, ಆ ಸಮಾಧಿಯ ಮೇಲಿನ ಬರಹ. ಈಗಲೂ ವಾಘ್ಯಾ ಶಿವಛತ್ರಪತಿಯ ಸಮಾಧಿಯೆಡೆಗೇ ದಿಟ್ಟಿ ನೆಟ್ಟು ಕುಳಿತಿದೆ.
ರಾಯಗಢದ ಮೇಲಿನ ಕಲ್ಲುಕಲ್ಲುಗಳೂ ಧೂಳಿನ ಕಣಕಣವೂ ಶಿವಛತ್ರಪತಿ ಕಟ್ಟಿದ ಹಿಂದವೀ ಸಾಮ್ರಾಜ್ಯದ ಕಥೆಯನ್ನು ಹೇಳುತ್ತಿವೆ. ಅಲ್ಲಿಯ ಅರಮನೆಯ ಕಟ್ಟಡದ ಅವಶೇಷಗಳು, ಅಲ್ಲಿಯ ಶಿವಾಲಯ, ಅಲ್ಲಿ ನೆರೆಯುತ್ತಿದ್ದ ಸಂತೆಯ ಬಯಲು_ಮಳಿಗೆಗಳು, ಗುಪ್ತಸಮಾಲೋಚನೆಗಾಗಿ ಇದ್ದ ನೆಲಮಾಳಿಗೆ, ಶತ್ರುಗಳಿಗೆ, ಸ್ವರಾಜ್ಯದ್ರೋಹಿಗಳಿಗೆ ಶಿಕ್ಷೆವಿಧಿಸುತ್ತಿದ್ದ ಜಾಗ_'ಟಕ್ಮಕ್ ಟೋಕ್', ಶಿವಾಜಿಯೇ ಕಟ್ಟಿಸಿಕೊಟ್ಟಿದ್ದ ಮಸೀದಿ, ರಾಜದರಬಾರು ನಡೆಯುತ್ತಿದ್ದ ವಿಶಾಲ ಪ್ರಾಂಗಣ --- ಪ್ರತಿಯೊಂದು ಜಾಗವೂ ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಶಿವಬಾನ ಯಶೋಗಾಥೆಯನ್ನೂ ಆತನ ಶೌರ್ಯ_ಸಾಹಸದ ಕಥೆಯನ್ನೂ ಪಿಸುಗುಡುತ್ತಿವೆ.
ಶಿವಛತ್ರಪತಿಯ ಆ ಶೌರ್ಯಕಥನಕ್ಕೆ ಅಕ್ಷರರೂಪ ನೀಡಿ, ಕನ್ನಡಿಗರಿಗೆ ಆತನ ಸಮಗ್ರ ಪರಿಚಯವನ್ನು ಮಾಡಿಕೊಟ್ಟವರು ಸ್ವ. ಹೊ. ವೆ. ಶೇಷಾದ್ರಿಯವರು. ಆರೆಸ್ಸೆಸ್ ಪ್ರಚಾರಕರಾಗಿದ್ದ ಅವರ ಒಂದೊಂದು ಮಾತು_ವಾಕ್ಯವೂ ಉದ್ಬೋಧಕವಾದದ್ದು; ಎಂಥವರನ್ನೂ ಬಡಿದೆಬ್ಬಿಸುವಂಥದ್ದು. ಆ ಕಾರಣಕ್ಕಾಗಿಯೇ ೧೯೬೭ರಲ್ಲಿ ಮೊದಲ ಮುದ್ರಣ ಕಂಡ ಕೃತಿ #ಯುಗಾವತಾರ ಇಂದಿಗೂ ಹಳತಾಗಿಲ್ಲವಷ್ಟೇ ಅಲ್ಲ, ಓದುತ್ತ ಹೋದಂತೆ ಇಂದಿನ ಸಂದರ್ಭಗಳಿಗೂ ಸ್ಪಂದಿಸುತ್ತ, ಹೊಸ ಹೊಸ ಹೊಳಹುಗಳನ್ನು ಹೊಮ್ಮಿಸುತ್ತದೆ. ಹಾಗಾಗಿಯೇ, ಯುಗಾವತಾರವನ್ನು ಓದಿ ಕೆಳಗಿಡುವಾಗ, ರೋಮಾಂಚಗೊಳಿಸುವ ಶಿವಾಜಿಯ ಜೀವನ_ಸಾಧನೆಯ ಕಥನದಲ್ಲಿ; ಪ್ರತಿಕ್ಷಣವೂ ಬೆರಗುಗೊಳಿಸುತ್ತ ಸಾಗುವ ಶೇಷಾದ್ರಿಯವರ ಭಾಷೆ_ಶೈಲಿಯ ಓಘದಲ್ಲಿ ಕಳೆದುಹೋಗುವ ಸುಖವೇ ಸುಖ!_ ಎನಿಸದಿರದು.
ಜೈ ಶಿವಾಜಿ ....ಜೈ ಭವಾನಿ....
ಕೃಪೇ : #ಯುಗಾವತಾರ ಪುಸ್ತಕ




Social Plugin