ನನ್ನೊಬ್ಬನ ವೋಟಿನಿಂದ ಏನಾಗುತ್ತೆ ? ಎನ್ನುವವರು ಗಮನಿಸಿ ಪ್ಲೀಸ್. ತಪ್ಪದೆ ಮತದಾನ ಮಾಡಿ.
ಭಾರತದ ಚುನಾವಣೆಯ ಇತಿಹಾಸ ಒಮ್ಮೆ ಗಮನಿಸಿ ನೋಡಿ , ಕೇವಲ ಒಂದು ಮತದ ಅಂತರದಿಂದ ಗೆದ್ದ ಉದಾಹರಣೆಗಳು ಬಹಳಷ್ಟಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ೧೯೭೮ ರಿಂದ ೨೦೧೯ ರ ವರೆಗೆ ೧ ರಿಂದ ೧೦೦ ಮತಗಳ ಅಂತರದಲ್ಲಿ ಗೆದ್ದವರ ಸಂಖ್ಯೆ ೧೫ ಎನ್ನುತ್ತದೆ ಅಂಕಿಅಂಶ.
ಸತತವಾಗಿ ಏಳು ಬಾರಿ ಜೇವರ್ಗಿ ವಿಧಾನಸಭೆಯಿಂದ ಗೆದ್ದು ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ದಿವಂಗತ ಧರಂಸಿಂಗ್ ಅವರು ೮ ನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಆಗದೆ ಸೋತದ್ದು ಇಂದಿಗೆ ಇತಿಹಾಸ. ಅವರು ಸೋತದ್ದು ಕೇವಲ ೫೨ ಮತಗಳಿಂದ ! ಅಂದಿಗೆ ಇವರ ಮುಂದೆ ಲೆಕ್ಕಕ್ಕಿಲ್ಲ ಎನ್ನಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ೫೨ ಮತ ಹೆಚ್ಚು ಗಳಿಸಿ ಜಯದ ನಗೆ ಬೀರಿದ್ದರು .
೨೦೦೬ ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವವರಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಹೋರಾಟವಿತ್ತು. ಸಿದ್ದರಾಮಯ್ಯ ನವರು ೨೫೨ ಮತಗಳ ಅಂತರದಲ್ಲಿ ಅಂದು ಗೆದ್ದಿದ್ದರು. ಚಾಮರಾಜನಗರದ ಸಂತೇಮಾರನಳ್ಳಿ ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಧ್ರುವ ನಾರಾಯಣ ಜಿಎಡಿಎಸ್ ನ ಕೃಷ್ಣಮೂರ್ತಿಯವರನ್ನು ಕೇವಲ ೧ ಮತದ ಅಂತರದಲ್ಲಿ ಸೋಲಿಸಿ ಇತಿಹಾಸ ಬರೆಯುತ್ತಾರೆ. ವಿಪರ್ಯಾಸವೇನು ಗೊತ್ತೇ ? ಜಿಡಿಎಸ್ ನ ಕೃಷ್ಣಮೂರ್ತಿಯವರ ಕಾರಿನ ಚಾಲಕನಿಗೆ ಕಾರನ್ನು ಕಾಯಬೇಕು ಎನ್ನುವ ಕೆಲಸದ ಪ್ರಜ್ಞೆಯಲ್ಲಿ ವೋಟ್ ಮಾಡುವುದು ಮರೆತು ಬಿಟ್ಟಿದ್ದರು. ವಾಜಪೇಯಿ ಅವರ ಸರಕಾರ ಪತನಗೊಂಡಿದ್ದು ಕೂಡ ಕೇವಲ ಒಂದು ವೋಟಿನಿಂದ ಎನ್ನುವುದನ್ನು ಮಾಯೆಯಬಾರದು.
ಹೀಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಇಂತಹ ಘಟನೆಗಳು ಬಹಳ ಸಿಗುತ್ತದೆ ೧೯೩೨ ರಲ್ಲಿ ಜರ್ಮನ್ ಪ್ರೆಸಿಡೆನ್ಸಿಯಲ್ ಎಲೆಕ್ಷನ್ ರೇಸ್ ನಲ್ಲಿ ಹಿಂದೆ ಬಿದ್ದಿದ್ದ ಹಿಟ್ಲರ್ ಗೆದ್ದದ್ದು , ಸಮ್ಮಿಶ್ರ ಸರಕಾರ ರಚಿಸಿದ್ದು ಅದು ಮುಂದೊಂದು ದಿನ ಎರಡನೇ ಮಹಾಯುದ್ದಕ್ಕೆ ಕಾರಣವಾಗಿದ್ದು ಎಲ್ಲವೂ ವೋಟಿನ ಮಹಿಮೆಯಿಂದ .
ಒಂದೊರಲ್ಲಿ ಒಬ್ಬ ರಾಜನಿದ್ದ ಅವನಿಗೆ ತನ್ನ ಪ್ರಜೆಗಳ ಮೇಲೆ ಅಪಾರವಾದ ನಂಬಿಕೆ. ಅವನ ಮಂತ್ರಿಗೆ ಜನರ ಬುದ್ದಿ ಗೊತ್ತಿರುತ್ತದೆ. ಅವನು ಎಷ್ಟೇ ಹೇಳಿದರೂ ರಾಜ ಮಂತ್ರಿಯ ಮಾತನ್ನು ಒಪ್ಪುವುದಿಲ್ಲ. ಆಗ ಮಂತ್ರಿ ಒಂದು ಪ್ರಯೋಗ ಮಾಡುತ್ತಾನೆ. ರಾಜ್ಯದ ಎಲ್ಲಾ ಪ್ರಜೆಗಳು ಅವರವರ ಊರಿನ ಮುಂದೆ ಇಟ್ಟಿರುವ ಪಾತ್ರೆಯಲ್ಲಿ ಒಂದು ಲೋಟ ಹಾಲು ಸುರಿಯಬೇಕು ಎಂದು ಹೇಳಿಕೆ ಹೊರಡಿಸುತ್ತಾನೆ. ಪ್ರಯೋಗ ಮುಗಿಯುತ್ತದೆ. ಎಲ್ಲೆಡೆ ಪಾತ್ರೆಯಲ್ಲಿ ನೀರು ! ಜನರು ರಾಜನನ್ನು ಪ್ರೀತಿಸುತ್ತಿದ್ದರು ಆದರೆ ಬೇರೆಲ್ಲರೂ ಹಾಲು ಹಾಕುತ್ತಾರೆ ನಾನೊಬ್ಬ ನೀರು ಹಾಕಿದರೆ ವ್ಯತ್ಯಾಸವೇನು ಆಗುವುದಿಲ್ಲ ಎನ್ನುವ ಮನಸ್ಥಿತಿಯಲ್ಲಿ ಎಲ್ಲರೂ ನೀರು ಹಾಕಿದ್ದರು. ರಾಜನ ನಂಬಿಕೆಯನ್ನು ಕಳೆದುಕೊಂಡಿದ್ದರು.
ಹುಷಾರು , ಈ ಚುನಾವಣೆ ಕೂಡ ಮೇಲಿನ ಕಥೆಯಂತೆ ಆಗುವುದು ಬೇಡ. ಮೊದಲು ವೋಟು ಆಮೇಲೆ ಮಿಕ್ಕದ್ದು. ನಿಮ್ಮ ಭವಿಷ್ಯ ನಿಮ್ಮ ಕೈಲಿದೆ. ತಪ್ಪದೆ ವೋಟ್ ಮಾಡಿ.



Social Plugin