"ಸಾಫಲ್ಯ ರಂಗತಂಡ". ಹೆಸರಿಗೆ ತಕ್ಕಂತೆ ಇಲ್ಲಿ ಬರುವ ಪ್ರತಿಯೊಬ್ಬರೂ ಸಫಲತೆಯನ್ನು ಪಡೆದುಕೊಳ್ಳುವ ಒಂದು ಅಂಗಳವಾಗಿದೆ. ಶ್ರೀಯುತ ಎಂ.ಎನ್. ಸುರೇಶ್ ರವರ ಕುಟುಂಬ ತಮ್ಮ ಸ್ವಇಚ್ಛೆಯಂತೆ ತಮ್ಮ ಮನೆಯನ್ನೇ ರಂಗಸ್ಥಳವನ್ನಾಗಿ ಮಾರ್ಪಡಿಸಿರುವುದು ಬಹಳ ಸಂತೋಷಕರವಾದ ವಿಷಯ. ಹಾಗೆಯೇ ಸುರೇಶ್ ಅವರ ಕುಟುಂಬ ಸದಸ್ಯರಾದ ಶ್ರೀಮತಿ ಅಹಲ್ಯ ಸುರೇಶ್ ರವರು, ಶ್ರೀಯುತ ಎಂ.ಎಸ್. ಶ್ರೀಮಂತ ಸುರೇಶ್ ಅವರು ತಮ್ಮ ಇಡೀ ಜೀವನವನ್ನೇ ರಂಗಭೂಮಿಯ ಏಳಿಗೆಗೆ ಮುಡಿಪಾಗಿಟ್ಟಿರುವುದು ಅಭಿಜ್ಞತೆಯ ಪರಮಾವಧಿಯೇ ಸರಿ. ಸಾಫಲ್ಯ ಕಟ್ಟಡದ ಐದನೆಯ ಮಾಳಿಗೆ ಕೇವಲ ಮಾಳಿಗೆಯಲ್ಲ, 'ಕಲಾವಿದರನ್ನು ಸೃಷ್ಟಿಸುತ್ತಿರುವ ಕಾರ್ಖಾನೆ' ಎಂಬುವುದರಲ್ಲಿ ಎರಡು ಮಾತಿಲ್ಲ! ಆರು ನಾಟಕಗಳನ್ನು ಪ್ರಸ್ತುತಪಡಿಸುವ ಛಲಗಾರಿಕೆಯನ್ನು ರಂಗ ತಂಡವು ತೋರಿದ್ದು ಅಭೇದ ಸಾಮರ್ಥ್ಯದ ಸಂಯೋಜನೆಯಾಗಿದೆ. ನಾಟಕ ಹಬ್ಬವು ಈ ಸಾಮರ್ಥ್ಯದ ಮನೋರಂಜನೆಯನ್ನು ಸಮರ್ಥವಾಗಿ ನೋಡುಗರಿಗೆ ಉಣ ಬಡಿಸಿದೆ. ಪ್ರದರ್ಶಿತವಾದ ಆರು ನಾಟಕಗಳು ಗುಣವತ್ತಾಗಿ ಆಯ್ಕೆಯಾಗಿದ್ದವು. ಮೂರು ನಾಟಕಗಳು ಮೊದಲೇ ಪ್ರದರ್ಶಿತವಾಗಿ ಪಳಗಿದ ಕಲಾವಿದರನ್ನು ಒಳಗೊಂಡಿದ್ದು ನೋಡುಗರ ಶಹಬ್ಬಾಸ್ ಗಿರಿಗೆ ಪಾತ್ರವಾದವು ಅವುಗಳೆಂದರೆ 'ಕೃಷ್ಣೇಗೌಡರ ಆನೆ', 'ಪ್ರಮೀಳಾರ್ಜುನೀಯಂ' ಹಾಗೂ 'ವೈಶಂಪಾಯನತೀರಾ'. ಇನ್ನುಳಿದ ಮೂರು ನಾಟಕಗಳು ಮಕ್ಕಳಿಗೆಂದೆ, ಹೊಸಬರಿಗೆಂದೆ, ಕಲಿಯುವವರಿಗೋಸ್ಕರವೇ ಆಯ್ಕೆ ಮಾಡಿದಂತಿತ್ತು. ಇದರ ಪ್ರಯೋಜನವನ್ನು ಬಹಳಷ್ಟು ಮಕ್ಕಳು... ಹಿರಿಯರು... ಹೊಸಬರು... ರಂಗಭೂಮಿ ಉತ್ಸಾಹಿಕರು ಈ ಮೂರು ನಾಟಕಗಳ ಲಾಭವನ್ನು ಪಡೆದರು. ಆ ಮೂರು ನಾಟಕಗಳೆಂದರೆ 'ಸುಂದರಿ', 'ವೀರಾಂಗನೆ ಚಿಂತಾದೇವಿ' ಹಾಗೂ 'ಆಲಿಬಾಬ ಮತ್ತು ನಲವತ್ತು ಕಳ್ಳರು'. ಈ ಮೂರು ನಾಟಕಗಳಲ್ಲಿ ಪ್ರಯೋಗವು ಪರಿಮಿತಿಯಾಗಿತ್ತು, ಮೇಲೆ ತಿಳಿಸಿದ ಮೂರೂ ನಾಟಕಗಳಲ್ಲಿ ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಭಾಗವಹಿಸಿದ ಪ್ರತಿಯೊಬ್ಬರೂ ನಾಟಕದೆಡೆಗಿನ, ರಂಗಭೂಮಿಯೊಳಗಿನ ತಮ್ಮ ಆಸಕ್ತಿ ಹಾಗೂ ಸಾಮರ್ಥ್ಯದ ಯೋಗ್ಯತೆಗಳನ್ನು ಅಳೆಯುವಂತಹ ಮಾನದಂಡಕ್ಕೆ ಸಹಕಾರಿಯಾದಂತಿತ್ತು. ಹೀಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕರ್ನಾಟಕದ ಚಿರಪರಿಚಿತ ನಟರಲ್ಲಿ ಒಬ್ಬರೆನಿಸಿದ ಶ್ರೀಯುತ ಎಂ.ಎನ್. ಸುರೇಶ್ ಅವರು ಬಿಡುವಿಲ್ಲದ ಸಮಯದಲ್ಲೂ ಬಿಡುವು ಮಾಡಿಕೊಂಡು ನಾಟಕ ಉತ್ಸವವನ್ನು ಏರ್ಪಡಿಸಿದ್ದು ಶ್ಲಾಘನೀಯ. ಇನ್ನೂ ಹಲವಾರು ನಾಟಕವನ್ನು ಕಲಿಯಲು ಬಯಸುವ ಕಲಿಕಾರ್ಥಿಗಳಿಗೆ "ಸಾಫಲ್ಯ ರಂಗ ತಂಡವು" ಒಂದು ಸಮರ್ಥ ವೇದಿಕೆ ಆಗುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ‌. ಹಾಗೆಯೇ ತಮ್ಮ ಬತ್ತಳಿಕೆಯಲ್ಲಿರುವ ಬಾಣಗಳನ್ನು ಕಲಿಕಾರ್ಥಿಗಳಿಗೆ ಹೇಗೆ ಪ್ರಯೋಗಿಸಬೇಕು ಎಂದು ಹೇಳಿಕೊಡುತ್ತಿರುವ, ಕಲಿಸುತ್ತಿರುವ ಕೈಂಕರ್ಯಕ್ಕೆ "ಸಾಫಲ್ಯ ರಂಗತಂಡದ" ಅಷ್ಟೂ ರೂವಾರಿಗಳಿಗೆ ಅನಂತಾನಂತ ನಮನಗಳು.