‘ಮೆಲ್ಲಗೆ’ ಹಾಡಿಗೆ ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಇನ್ನು, ಮಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿ ಈ ಹಾಡನ್ನು ಬರೆದಿದ್ದಾರೆ. ಈ ಕುರಿತು ಮತನಾಡುವ ನಿರ್ದೇಶಕ ರಾಜ್ ಶೆಟ್ಟಿ, ‘ಇದು ಪ್ರೀತಿಯ ಕುರಿತ ಒಂದು ಮಹಿಳೆಯ ದೃಷ್ಟಿಕೋನದ ಹಾಡು'. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎನ್ನುವುದು ಬೇಕಾಗಿತ್ತು. ಹಾಗಾಗಿ, ಪೃಥ್ವಿ ಅವರಿಂದಲೇ ಬರೆಸಿದೆ’ ಎನ್ನುತ್ತಾರೆ ರಾಜ್. ಈ ಹಾಡಿನಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶ ಇದ್ದು, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ತಮ್ಮ ಸಂಯೋಜನೆಯಿಂದ ಮೋಡಿ ಮಾಡುತ್ತಾರೆ ಎನ್ನುತ್ತಾರೆ. ಸ್ವತಃ ಹಿನ್ನೆಲೆ ಗಾಯಕಿಯೂ ಆಗಿರುವ ನಾಯಕಿ ಸಿರಿ ರವಿಕುಮಾರ್ ಈ ಹಾಡಿನ ಅಭಿಮಾನಿಯಾಗಿದ್ದು, ಹಾಡನ್ನು ಪದೇಪದೇ ಕೇಳುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಾಜ್ ಮತ್ತು ಸಿರಿ ಜೊತೆಗೆ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಈ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್ ಜೊತೆಗೆ ಸೇರಿ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Social Plugin