ಪ್ರತಿಪಕ್ಷ ನಾಯಕರೆಂದಾಗ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ, ಎಂ.ಸಿ ನಾಣಯ್ಯ ರೀತಿಯ ಹಿರಿಯರು ನೆನಪಾಗುತ್ತಾರೆ. ಏಕೆಂದರೆ ಈ ಎಲ್ಲ ನಾಯಕರು ಜನರ ಮಧ್ಯೆ ಹುಟ್ಟಿಬಂದವರು. ಜನರ ಪ್ರತಿ ಸಮಸ್ಯೆಯ ಜತೆಗೆ ಬೆಳೆದವರು ಹಾಗೂ ಆ ಸಮಸ್ಯೆಯ ಪ್ರಾಥಮಿಕ ಅನುಭವ ಹೊಂದಿದ ಹೋರಾಟಗಾರರು. ಪ್ರಜೆಗಳ ಸಮಸ್ಯೆಯ ಬಗ್ಗೆ ಗಂಟೆಗಟ್ಟಲೇ ಮಾತನಾಡುವ ಅನುಭವ ಹಾಗೂ ವಿಷಯವನ್ನು ಈ ನಾಯಕರು ಹೊಂದಿದ್ದಾರೆ. ಇದೇ ಕಾರಣಕ್ಕೆ ಇವರು ಮಾತನಾಡಲು ನಿಂತಾಗ ಮುಖ್ಯಮಂತ್ರಿ, ಸಭಾಧ್ಯಕ್ಷರು ಆದಿಯಾಗಿ ಮೌನದಿಂದ ಮಾತು ಕೇಳುತ್ತಿದ್ದರು. ಇದಕ್ಕಿಂತ ದೊಡ್ಡ ವಿಚಾರವೇನೆಂದರೆ, ಈ ನಾಯಕರ ಬಳಿ ಯಾವುದೇ ಜನರು, ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕ ಸಮಸ್ಯೆಯನ್ನಿಟ್ಟುಕೊಂಡು ಹೋದಾಗ ಅವರಿಗೆ ಕಿವಿಯಾಗುತ್ತಿದ್ದರು. ಬಳಿಕ ವಿಧಾನಸಭೆಯಲ್ಲಿ ಅದಕ್ಕೆ ಧ್ವನಿಯಾಗುತ್ತಿದ್ದರು. ಹಳೆಯ ಯಡಿಯೂರಪ್ಪ, ಹಿಂದಿನ ಸಿದ್ದರಾಮಯ್ಯರಲ್ಲೂ ಇಂತಹ ಗುಣಗಳು ಇದ್ದವಂತೆ.
ಇತ್ತೀಚಿನ ದಿನಗಳಲ್ಲಿ ವಿಧಾನಸಭೆ ಅಥವಾ ಪರಿಷತ್‌ನಲ್ಲಿ ಜನರ ನೈಜ ಸಮಸ್ಯೆ ಬಗ್ಗೆ ಸಾರ್ವಜನಿಕ ಸಮಸ್ಯೆಗಳಿಗೆ ನಿಜವಾದ ಪರಿಹಾರ ಕಂಡುಕೊಳ್ಳುವ ಹೋರಾಟವನ್ನು ನೋಡಿದ್ದು ನೆನಪಾಗುತ್ತಲೇ ಇಲ್ಲ. ಕೆಲಸಕ್ಕೆ ಬಾರದ ವಿಚಾರಗಳಿಗೆ ಧರಣಿ, ಹಾರಾಟ-ಚೀರಾಟ ಮಾಡಿಕೊಂಡು ಜನರಿಗೆ ಚಳ್ಳೆಹಣ್ಣು ತಿನ್ನಿಸುವ ಕೆಲಸದಲ್ಲೇ ನಿರತರಾದವರು ಹೆಚ್ಚಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ನೋವನ್ನು ಅರ್ಥ ಮಾಡಿಕೊಳ್ಳಬಹುದಾದ, ಸರ್ಕಾರದ ನಿದ್ದೆಯನ್ನು ಹಾಳು ಮಾಡಬಲ್ಲ ವ್ಯಕ್ತಿಯು ಪ್ರತಿಪಕ್ಷ ನಾಯಕನ ಹುದ್ದೆಗೆ ಬೇಕು ಎನ್ನುವುದು ಕೇವಲ ಬಿಜೆಪಿಯವರ ನಿರೀಕ್ಷೆಯಲ್ಲ. ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ನಿರೀಕ್ಷಿಸುವುದು ಕೂಡ ಇದನ್ನೇ ಆಗಿರುತ್ತದೆ.
ಅಶೋಕ್ ಅವರು ಪದ್ಮನಾಭನಗರದಿಂದ ಸತತವಾಗಿ ಗೆದ್ದುಕೊಂಡು ಬಂದಿರಬಹುದು. ಬಿಜೆಪಿಯಲ್ಲೇ ಉಳಿದು ಪಕ್ಷ ಬದಲಾಯಿಸದ ನಾಯಕರೂ ಆಗಿರಬಹುದು. ಆದರೆ ಸರ್ಕಾರವನ್ನು ಎದುರುಹಾಕಿಕೊಂಡು ಹೋರಾಡುವ ನಾಯಕರಂತು ಅಲ್ಲವೇ ಅಲ್ಲ. ಜನರ ಸಮಸ್ಯೆಗಳ ವಿರುದ್ಧ ವಿಧಾನಸೌಧವೇ ನಡಗುವ ರೀತಿಯಲ್ಲಿ ಗುಡುಗುವ ನಾಯಕರಂತು ಅಲ್ಲವೇ ಅಲ್ಲ. ಯಾವುದಾದರೂ ಒಂದು ಸಾರ್ವಜನಿಕ ಸಮಸ್ಯೆ ಬಗ್ಗೆ ಪ್ರಾಮಾಣಿಕವಾಗಿ, ಯಾವುದೇ ವಿಷಯವನ್ನು ಮುಚ್ಚಿಡದೇ ಸರ್ಕಾರವನ್ನು ಜಾಡಿಸುವ ನಾಯಕರಂತು ಅಲ್ಲವೇ ಅಲ್ಲ. ಬಜೆಟ್, ಶಿಕ್ಷಣ, ಬಡತನ, ಪರೀಕ್ಷಾ ಅಕ್ರಮ ಸೇರಿ ಯಾವುದೇ ಜ್ವಲಂತ ಸಮಸ್ಯೆಗಳ ಬಗ್ಗೆ ನಿರರ್ಗಳ ಹಾಗೂ ಪರಿಣಾಮಕಾರಿಯಾಗಿ ಅಶೋಕ್ ಅವರು ಹತ್ತು ನಿಮಿಷ ಕೂಡ ಮಾತನಾಡುವ ನಾಯಕರಂತು ಅಲ್ಲವೇ ಅಲ್ಲ. ಏಕೆಂದರೆ ಇದು ಅವರ ಕಟು ವಾಸ್ತವದ ರಾಜಕೀಯ ಇತಿಹಾಸ. ಉದಾಹರಣೆಗಳಿದ್ದರೆ ದಯವಿಟ್ಟು ʼರಾಜಕೀಯ ಪಂಟರ್ʼಗಳು ನೀಡಬಹುದು.
ಜನರ ಸಮಸ್ಯೆಗಳೊಂದಿಗೆ ರಾಜಿಯಾಗುವವರು ಹಾಗೂ ಹೊಂದಾಣಿಕೆ ಮಾಡಿಕೊಳ್ಳವುರೆಲ್ಲ ಸಾಮ್ರಾಟರಾಗಿ ಮೆರೆಯಲಾಗದು. ಕೆಲ ಮಾಧ್ಯಮ ಹಾಗೂ ಭಜನಾ ಮಂಡಳಿಗಳಲ್ಲಿ ಸಾಮ್ರಾಟರಾದರೆ ಆಗದು. ಜನರ ಹೃದಯದಲ್ಲಿ ಸಾಮ್ರಾಟರಾಗಬೇಕು ಎಂದಾದರೆ ಜನರ ಸಮಸ್ಯೆಯೊಂದಿಗೆ ಬೆರೆಯಬೇಕು. ಆ ವಿಚಾರದಲ್ಲಿ ರಾಜಿಯಿಲ್ಲದೇ ಹೋರಾಡಬೇಕು. ಎದುರಿಗಿರುವವರು ಸಿದ್ದರಾಮಯ್ಯ, ಶಿವಕುಮಾರಣ್ಣ, ಕುಮಾರಣ್ಣ ಎಂದು ಹೊಗಳಿಕೊಂಡು ಕುಳಿತರೆ ಜನರ ಸಮಸ್ಯೆಗೆ ನ್ಯಾಯ ಸಿಗದು. ಎಲ್ಲರನ್ನೂ ಸಂಬಾಳಿಸಿಕೊಂಡು ಹೋಗಲು ಆಡಳಿತ ಪಕ್ಷದ ನಾಯಕರು ಬೇಕೇ ಹೊರತು, ಪ್ರತಿಪಕ್ಷ ನಾಯಕರಲ್ಲ. ವಿರೋಧ ಪಕ್ಷದ ನಾಯಕರ ಏಕಮೇವ ಗುಣವೆಂದರೆ ಕ್ರಿಯಾತ್ಮಕವಾಗಿ ವಿರೋಧಿಸುವುದು.
ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಶುಭದಿನ. ಸರ್ಕಾರವನ್ನು ವಿಮರ್ಶಿಸುವ ಎಲ್ಲ ಅಂಗಗಳು ಶಾಂತವಾಗುವ ಲಕ್ಷಣ ಕಾಣಿಸುತ್ತಿದೆ. ಬಾಕಿ ಇದ್ದ ಪ್ರತಿಪಕ್ಷ ಸ್ಥಾನ ಕೂಡ ಅದೇ ನಿಟ್ಟಿನಲ್ಲಿ ಸಾಗಿದೆ. ನಾನು ಇಲ್ಲಿ ಹೇಳಿದ್ದು ಸುಳ್ಳು ಎನಿಸಿದರೆ, ಅಶೋಕ್ ಅವರ ಕಳೆದ ಆರು ತಿಂಗಳಿನ ಸಾಮಾಜಿಕ ಜಾಲತಾಣದಲ್ಲಿನ ಖಾತೆಯನ್ನು ಒಮ್ಮೆ ಪರಿಶೀಲಿಸಿ ಬನ್ನಿ. ಸರ್ಕಾರದ ವಿರುದ್ಧ ಪಕ್ಷ ನಡೆಸಿದ ಹೋರಾಟದ ಕೆಲ ಚಿತ್ರಗಳನ್ನು ಬಿಟ್ಟು, ಇನ್ನೇನಾದರೂ ಇದ್ದರೆ ಒಪ್ಪಿಕೊಳ್ಳುತ್ತೇನೆ. ಕಳೆದ ಆರು ತಿಂಗಳಲ್ಲಿ ಸರ್ಕಾರದ ನಡೆಯನ್ನೂ ಟೀಕಿಸಲೂ ಒಂದೂ ವಿಷಯ ಸಿಗದವರಿಗೆ, ವಿಧಾನಸಭೆಯಲ್ಲಿ ಏನು ಸಿಕ್ಕೀತು? ಪ್ರತಿಪಕ್ಷ ನಾಯಕರಾದವರೇ ಜನರ ಪರವಾಗಿ ಧ್ವನಿ ಎತ್ತದಿದ್ದರೆ, ಸರ್ಕಾರಕ್ಕೆ ಅದಕ್ಕಿಂತ ದೊಡ್ಡ ರತ್ನಗಂಬಳಿ ಇನ್ನೊಂದಿರಲಾರದು. ಏಕೆಂದರೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಿಗೆ ಇರುವ ಅಧಿಕಾರ ಇನ್ಯಾರಿಗೂ ಇಲ್ಲ. ಹಠವಾದಿ ಪ್ರತಿಪಕ್ಷ ನಾಯಕ ಬಯಸಿದರೆ ಏನೂ ಬೇಕಾದರೂ ಮಾಡಬಹುದು.
ವಿಶೇಷ ಸೂಚನೆ: ಇದ ಯಾವುದೋ ಒಬ್ಬ ವ್ಯಕ್ತಿಯ ವಿರುದ್ಧವಲ್ಲ. ಈ ರಾಜ್ಯದ ಒಬ್ಬ ನಾಗರಿಕನಾಗಿ ಯಡಿಯೂರಪ್ಪ ರೀತಿ ಗುಡುಗುವ, ಸಿದ್ದರಾಮಯ್ಯ ರೀತಿ ಸವಾಲು ಹಾಕುವ, ನಾಣಯ್ಯ ರೀತಿ ಕಾನೂನು ಮಾತನಾಡುವ ಪ್ರತಿಪಕ್ಷ ನಾಯಕನನ್ನು ಬಯಸುವ ಅಧಿಕಾರವನ್ನು ಪ್ರಜಾಪ್ರಭುತ್ವವು ನನ್ನಂತಹ ಪ್ರತಿಯೊಬ್ಬ ನಾಗರಿಕನಿಗೂ ನೀಡಿದೆ. ಈ ಗುಣವನ್ನು ನಾನು ಅಶೋಕ್‌ರಲ್ಲಿ ಕಂಡಿರದಿದ್ದರೆ ದಯವಿಟ್ಟು ಕ್ಷಮಿಸಿ. ಇನ್ನಾದರೂ ಪ್ರದರ್ಶಿಸಲಿ ಎಂದು ಬಯಸುವ ರಾಜ್ಯದ ಮತದಾರರಲ್ಲಿ ನಾನೂ ಸೇರಿದ್ದೇನೆ.
ಲೇಖನ : ರಾಜೀವ ಎಚ್
#KarnatakaAssembly #OppositionLeader

Social Plugin