FLOP MOVIESಫ್ಲಾಪ್ ಸಿನಿಮಾಗಳು... ಸೋಲನ್ನು ಯಾರು ಬಯಸಲ್ಲ. ಫ್ಲಾಪ್ ಆಗುತ್ತೆ ಅಂತ ಮೊದಲೇ ಗೊತ್ತಾದರೆ ಯಾರೂ ಅಂಥ ಸಿನಿಮಾ ತೆಗೆಯಲ್ಲ. ಪ್ರತಿ ವರ್ಷ ಆಯಾ ಚಿತ್ರರಂಗದಲ್ಲಿ 200 ಸಿನಿಮಾಗಳು ತೆರೆಗೆ ಬರುತ್ತಿವೆ. ಇದರಲ್ಲಿ ಹಿಟ್- ಬ್ಲಾಕ್ ಬಾಸ್ಟರ್ ಸೇರಿದರೆ 10 ಸಿನಿಮಾಗಳು ಮಾತ್ರ. ಉಳಿದ 190, ಸೋಲುಂಡ ಸಿನಿಮಾಗಳೇ. ಜೀವನ ಪರ್ಯಾಂತ ಈ ಫ್ಲಾಪ್ ಮೂವೀಗಳನ್ನು ನೋಡಲಾಗದೆ, ಅವುಗಳನ್ನು ಅನಲೈಸ್ ಮಾಡಕ್ಕೂ ಆಗದೆ ಪತ್ರಕರ್ತರಿಗೆ ತಲೆಚಿಟ್ಟಾಗಿ ವಿಮರ್ಶೆಗಳ ಮೂಲಕ ಆ ಸಿನಿಮಾಗಳನ್ನು ಹೊಡೆದುರುಳಿಸುತ್ತಾರೆ. ಯಾಕೆಂದರೆ ಎಲ್ಲಾ ಸಿನಿಮಾಗಳು ಹೀಗೇ ಅಳುತ್ತಿವೆ. ಸಿನಿಮಾಗಾಗಿ ಆಗಲೇ ಎಲ್ಲವನ್ನೂ ಮಾರಿಕೊಂಡ ನಿರ್ಮಾಪಕ ಈ ರಿವ್ಯೂಗಳ ಹೊಡೆತಕ್ಕೆ ಸಿಕ್ಕಿ ಚಿತ್ರರಂಗವನ್ನೇ ಬಿಡುತ್ತಾನೆ. ಅವನ ಜಾಗದಲ್ಲಿ ಮತ್ತೊಬ್ಬ ಬರುತ್ತಾನೆ. ಮತ್ತೊಂದು ಫ್ಲಾಪ್ ಸಿನಿಮಾ ತೆಗೆಯುತ್ತಾನೆ. 
ಸತ್ಯ ಏನ್ ಗೊತ್ತಾ, ಪ್ರತಿ ವರ್ಷ ಸೋತು, ಫ್ಲಾಪ್ ಎನಿಸಿಕೊಂಡ ಆ 190 ಸಿನಿಮಾಗಳ ಮೇಲೆಯೇ ಚಿತ್ರರಂಗ ಬದುಕುತ್ತಿದೆ. ಇಲ್ಲಿರುವ ಎಲ್ಲರಿಗೂ ಅನ್ನ ಕೊಡೋದು ಇದೇ ಫ್ಲಾಪ್ ಚಿತ್ರಗಳು. ಹೀಗಾಗಿ ಫ್ಲಾಪ್ ಸಿನಿಮಾಗಳಿಂದಲೂ ಕೂಡ ದೇಶಕ್ಕೆ ಅಷ್ಟೋ-ಇಷ್ಟೋ ಒಳ್ಳೆಯದಾಗುತ್ತಿದೆ. ಒಂದು ಫ್ಲಾಪ್ ಚಿತ್ರಕ್ಕಾಗಿ ನಿರ್ಮಾಪಕ ಕೋಟಿ ಕೋಟಿ ಖರ್ಚು ಮಾಡಿದರೆ ಹೀರೋಗಳು, ಜೂನಿಯರ್ ಆರ್ಟಿಸ್ಟ್, ಸೆಟ್, ಲೋಕೇಶನ್... ಹೀಗೆ ಎಷ್ಟೋ ಜನಕ್ಕೆ ಕೆಲಸ ಕೊಡುತ್ತಾನೆ. ಎಲ್ಲರು ಸಂಭಾವನೆ ತೆಗೆದುಕೊಳ್ಳುತ್ತಾರೆ, ಸರ್ಕಾರಕ್ಕೆ ತೆರಿಗೆ ಕೂಡ ಕಟ್ಟುತ್ತಾರೆ. ಹೋಲ್ಡಿಂಗ್, ಪೇಪರ್ ಜಾಹೀರಾತು, ವೆಬ್ ಸೈಟ್, ಹೋಟೆಲ್, ಟ್ರಾವಲ್... ಹೀಗೆ ಎಲ್ಲದಕ್ಕೂ ಹಣ ಕಟ್ಟೇ ಕಟ್ಟಿರುತ್ತಾನೆ. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಲಾಭ ಪಡೆಯುತ್ತಾರೆ. ಆದರೆ, ಆ ಸಿನಿಮಾ ಏನಾದರೂ ಹೆಚ್ಚು ಕಮ್ಮಿ ಆದರೆ ಎಲ್ಲರೂ ಸೇರಿ ಅವನ ಗ್ರಹಚಾರ ಬಿಡಿಸುತ್ತೇವೆ. ನಾವು ಮಾಡೋ ಟ್ವೀಟ್, ರಿವ್ಯೂಗಳಿಂದ ಆ ಫ್ಲಾಪ್ ಸಿನಿಮಾ ನಿರ್ಮಾಪಕನಿಗೆ ಮತ್ತೊಬ್ಬ ಹೀರೋ ಡೇಟ್ಸ್ ಕೊಡದಂತೆ, ಆ ಫ್ಲಾಪ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಮತ್ತೊಂದು ಸಿನಿಮಾ ಸಿಗದಂತೆ ಮಾಡುತ್ತೇವೆ. 
ಸಿನಿಮಾ ರಿವ್ಯೂ ಬರೆಯುವ ಎಲ್ಲರಲ್ಲೂ ಕೈ ಮುಗಿದು ಕೇಳುತ್ತಿದ್ದೇನೆ, ನೀವು ಕಾಪಾಡಬೇಕಿರುವುದು ಫ್ಲಾಪ್ ಸಿನಿಮಾಗಳನ್ನೇ. ಬ್ಲಾಕ್ ಬಾಸ್ಟರ್ ಸಿನಿಮಾಗಳನಲ್ಲ. I Know You Are All Presented Bad Movies. But ಇಲ್ಲಿ ಯಾರೂ ಜೀನಿಯಸ್ ಅಲ್ಲ. ಗೊತ್ತೋ ಗೊತ್ತಿಲ್ಲದೋ ಆ ನಿರ್ದೇಶಕ ಫ್ಲಾಪ್ ಸಿನಿಮಾ ಮಾಡಿರಬಹುದು. ಆ ಚಿತ್ರಕ್ಕೆ ಹಣ ಹಾಕಿದ ನಿರ್ಮಾಪಕನೂ ಸೋತಿರಬಹುದು. ಆದರೂ ಅವರಿಂದ ಕೆಲವರಿಗಾದರೂ ಊಟ ದಕ್ಕಿದೆ, ಕೆಲಸ ಸಿಕ್ಕಿದೆ, ಒಂದಿಷ್ಟು ಪ್ರತಿಭೆಗಳಿಗೆ ಅವಕಾಶಗಳು ಹುಟ್ಟಿಕೊಂಡಿವೆ. ಆತ ದಡ್ಡನೇ ಆಗಿರಬಹುದು ಆತ ಮತ್ತು ಆ ನಿರ್ಮಾಪಕನನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನೀವು ಒಂದು ಸಿನಿಮಾ ನೋಡಿದ ಮೇಲೆ ರಿವ್ಯೂ ರೇಟಿಂಗ್ ಒಂದೇ ಒಂದು ಸ್ಟಾರ್ ಕೊಡಬಹುದು ಅನಿಸಿದರೆ ಎರಡು ಸ್ಟಾರ್ ಕೊಡಿ, ಎರಡೇ ಕೊಡಬಹುದು ಅನಿಸಿದಾಗ ಮೂರು ಕೊಡಿ. ಅಂದರೆ ಒಂದು ಗ್ರೇಸ್ ಮಾರ್ಕ್ಸ್ ಕೊಡಿ ಅಂತ ಕೇಳಿಕೊಳ್ಳುತ್ತಿದ್ದೇನೆ. ಯಾಕೆಂದರೆ ನೀವು ಕೊಡೋ ಆ ಒಂದು ಗ್ರೇಸ್ ಮಾರ್ಕಿನ ರೇಟಿಂಗ್ ನಿಂದ ಆ ಚಿತ್ರಕ್ಕೆ ಟೀವಿ ರೈಟ್ಸ್, ಓಟಿಟಿ, ಡಬ್ಬಿಂಗ್ ರೈಟ್ಸ್ ಸೇರಿದಂತೆ ಸ್ವಲ್ಪನಾದರೂ ವಹಿವಾಟು ಆಗುತ್ತದೆ. ಅದರಿಂದ ಒಂದಿಷ್ಟು ಕುಟುಂಬಗಳಾದರೂ ಬದುಕಿಕೊಳ್ಳುತ್ತವೆ. ಅಷ್ಟೇ ಹೊರತು, ನಿರ್ಧಾಕ್ಷಿಣವಾಗಿ ಅವರನ್ನ, ಅವರ ಸಿನಿಮಾಗಳನ್ನ ಸಾಯಿಸಬೇಡಿ. ಬೇಕಾದರೆ ವೈಯಕ್ತಿಕವಾಗಿ ಸಿಕ್ಕಾಗ ಎಂಥ ಸಿನಿಮಾ ಮಾಡಿದ್ದೀಯಾ ದಡ್ಡ ಅಂತ ಕೋಪಿಸಿಕೊಂಡು ಬೈಯಿರಿ. 
  ಕಲಾ ತಾಯಿಯ ಹೊಟ್ಟೆಯಲ್ಲಿ ಹೆಚ್ಚಾಗಿ ಹುಟ್ಟಿರೋದು ಫ್ಲಾಪ್ ಡೈರೆಕ್ಟರ್, ಫ್ಲಾಪ್ ನಿರ್ಮಾಪಕರೇ. ಬ್ಲಾಕ್ ಬಾಸ್ಟರ್ ತೆಗೆಯುವ ಆ ಹತ್ತು ಸಿನಿಮಾ‌ ಮಕ್ಕಳನ್ನು ನೀವು ಎತ್ತಿಕೊಳ್ಳುವ ಅವಶ್ಯಕತೆ ಇಲ್ಲ. ನೀವೆಲ್ಲ ಎತ್ತಿ, ಮುದ್ದಿಸಿ ಪ್ರೀತಿ ತೋರಿಸಬೇಕಿರೋದು ಈ 190 ಸಿನಿಮಾಗಳ ಮಕ್ಕಳನ್ನೇ. ಯಾಕೆಂದರೆ ನೀವೂ ಕೂಡ ಆ ಕಲಾ ತಾಯಿಯ ಮಕ್ಕಳೇ. 190 ಸಿನಿಮಾ ಮಂದಿ ಕೂಡ ನಿಮ್ಮ ಅಣ್ತಮ್ಮಂದಿರೇ. ದಯವಿಟ್ಟು ಒಬ್ಬರನ್ನೊಬ್ಬರು ಶತ್ರುಗಳಂತೆ ನೋಡಬೇಡಿ. ನಿಮ್ಮ ತಮ್ಮನಿಗೆ ಮತ್ತೊಂದು ಸಿನಿಮಾ ಸಿಕ್ಕರೆ ಮತ್ತೊಂದು ಸಿನಿಮಾ ಶುರುವಾಗುತ್ತದೆ, ಆತ ಉಸಿರಾಡುತ್ತಾನೆ. ಚಿತ್ರರಂಗದಲ್ಲಿ ಅವಕಾಶ ಸಿಕ್ಕೋ, ಸಿಗದೆನೋ ಸಿನಿಮಾ ಮಾಡಲು ಆಗದೆ ಒದ್ದಾಡುತ್ತಿರುವ ಸಾವಿರಾರು ಮಂದಿ ಪೈಕಿ ಯಾರೋ ಒಬ್ಬ ಬಂದು ಒಂದು ಚಿತ್ರವನ್ನಾದರೂ ಮಾಡಿದ್ದಾನೆ. ಕೆಲವು ಫ್ಯಾಮಿಲಿಗಳಿಗಾದರೂ ಅವನ ಮತ್ತು ಆತನ ಚಿತ್ರದಿಂದ ಲೈಫ್ ಫೀಡಿಂಗ್ ಸಿಕ್ಕಿದೆ. ಹಾಗೆ ಈ ಫ್ಲಾಪ್ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು, ನಟ- ನಟಿಯರು, ಕಲಾವಿದರು, ತಂತ್ರಜ್ಞರಿಂದಲೇ ಅಲ್ಲವೇ ನಮ್ಮ ಮ್ಯಾಗಜೀನ್, ಪೇಪರ್, ವೆಬ್ ಸೈಟ್, ಚಾನಲ್, ಟ್ರೋಲ್ ಪೇಜ್, ಸೋಷಿಯಲ್ ಮೀಡಿಯಾ, ಯೂಟ್ಯೂಬ್... ಹೀಗೆ ಎಲ್ಲವೂ ರನ್ ಆಗುತ್ತಿರುವುದು. ಜನರಿಗೂ ಅವರಿಂದ ಒಂದಷ್ಟಾದರೂ ಮನರಂಜನೆ ಸಿಕ್ಕಿದೆಯಲ್ಲವೇ. ಎಲ್ಲರಿಗೂ ಏನೋ ಒಂದಿಷ್ಟು ಆಧಾಯವಂತೂ ಇದೆ ಅಲ್ಲವೇ. 
  ಕೋಟಿ ಕೋಟಿ ಹಣ ತೆಗೆದುಕೊಂಡು ಹೋಗಿ ಭೂಮಿ ಮೇಲೆ ಹಾಕಿದರೆ ಅದು ಡಬಲ್ ಆಗುತ್ತೆ, ಗೋಲ್ಡ್ ಕೊಂಡರೆ ಮನೆಯ ಲಾಕರ್ ನಲ್ಲಾದರೂ ಉಳಿಯುತ್ತದೆ. ಆದರೆ, ಹಣ ಪೂರ್ತಿ ತೆಗೆದುಕೊಂಡು ಹೋಗಿ ಒಂದು ಸಿನಿಮಾ ಮೇಲೆ ಹಾಕಿ ತನ್ನ ಸಿನಿಮಾ ನೋಡಿ ಯಾರಾದರೂ ಕ್ಲಾಪ್ಸ್ ಹೊಡಿಯಬಹುದಾ ಅಂತ ಎದುರು ನೋಡುತ್ತಿರುತ್ತೇವೆ. ಒಂದು ವೇಳೆ ಚಪ್ಪಾಳೆ ಬೀಳದೆ ಹೋದರೆ ಜೀವನಗಳು ನಾಶ ಆಗುತ್ತವೆ. ವ್ಯಾಪಾರದ ದೃಷ್ಟಿಯಿಂದ ನೋಡೋದಾದರೆ ನಿಜಕ್ಕೂ ಯಾರೂ ಸಿನಿಮಾ ತೆಗೆಯಬಾರದು. ಇಷ್ಟು ರಿಸ್ಕಿ ಬ್ಯುಸಿನೆಸ್ ಯಾರು ಮಾಡುತ್ತಾರೆ ಹೇಳಿ, ಸಿನಿಮಾ ಅಂದರೆ ಹುಚ್ಚು ಇರೋನು ಮಾತ್ರ. ಅಂತ ಹುಚ್ಚ ಬದುಕಬೇಕು. 
ಮತ್ತೊಂದು ವಿಷಯ. ಸಿನಿಮಾ ಬಿಡುಗಡೆಯ ಹಿಂದಿನ ದಿನ ವಿತರಕರು ಚಿತ್ರವನ್ನು ತೆಗೆದುಕೊಳ್ಳದೆ ಲ್ಯಾಬ್ ಗಳಲ್ಲಿ ಮಧ್ಯ ರಾತ್ರಿ ದೊಡ್ಡ ದೊಡ್ಡ ಪಂಚಾಯಿತಿಗಳು, ಸಂಧಾನ ಸಭೆಗಳು ನಡೆಯುತ್ತವೆ. ಕೇವಲ 50 ಸಾವಿರ ತನಗೆ ಕೊಟ್ಟಿಲ್ಲ ಅಂತ ಯಾರೋ ಒಬ್ಬ ಬಂದು ಸಿನಿಮಾ ಬಿಡುಗಡಗೆ ತಡೆ ತಂದಿರುತ್ತಾನೆ, ಲ್ಯಾಬ್ ಮುಂದೆ ಕೂತಿರುತ್ತಾನೆ. ನಿರ್ಮಾಪಕ ಅಳುತ್ತಾ ಕೈ ಎತ್ತುತ್ತಾನೆ. ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಕೋಟಿ ಕೋಟಿ ಹಾಕಿ ಸಿನಿಮಾ ಮಾಡಿರುವ ನಿರ್ಮಾಪಕನ ಬಳಿ 50 ಸಾವಿರಾನೂ ಇಲ್ಲವೇ ಅಂದುಕೊಳ್ಳುತ್ತಿದ್ದೆ. ಆದರೆ, ಆ ನಂತರ ನನಗೆ ಸತ್ಯ ಗೊತ್ತಾಯಿತು. ವೇಟ್ ಲಿಫ್ಟಿಂಗ್ ಮಾಡುತ್ತಾ 300 ಕೆ.ಜಿ ಭಾರ ಮೈ ಮೇಲೆ ಹಾಕಿಕೊಂಡು ನಡುಗುತ್ತಿರುವ ಬಾಡಿ ಬಿಲ್ಡರ್ ಗೆ ಇನ್ನೊಂದು 50 ಗ್ರಾಂ ಮೇಲೆ ಬಿದ್ದರೂ ಕುಸಿದು ಬೀಳುತ್ತಾನೆ. ಪ್ರತಿ ಸಿನಿಮಾ ಬಿಡುಗಡೆಯ ಹಿಂದಿನ ದಿನ ಆಯಾ ಚಿತ್ರದ ನಿರ್ಮಾಪಕನ ಪರಿಸ್ಥಿತಿ ತೂಡ ಈ 50 ಗ್ರಾಂ ಭಾರ ತಡೆಯಲಾಗದ ಬಾಡಿ ಬಿಲ್ಡರ್ ನಂತೆಯೇ. 
ನೀವು ಸಿನಿಮಾ ನೋಡುವಾಗ ಆ ಚಿತ್ರದಲ್ಲಿ ಪ್ರಾಣ ಇದಿಯಾ, ಇಲ್ಲ ಸತ್ತಿದಿಯಾ, ಇದನ್ನು ನಾನು ಏನಾದರೂ ಮಾಡಿ ರಕ್ಷಿಸಬಹುದಾ, ಈ ಚಿತ್ರ ಉಸಿರಾಡಕ್ಕೆ ನನ್ನಿಂದ ಬೇರೆ ಏನಾದರೂ ಮಾಡಲು ಸಾಧ್ಯನಾ ಅಂತ ಯೋಚನೆ ಮಾಡಿ. ನಿಜ, ಸತ್ತಿರೋ ಚಿತ್ರವನ್ನ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವುಗಳನ್ನ Average cinema ಮಾಡಕ್ಕಾದರೂ ಪ್ರಯತ್ನ ಮಾಡೋಣ. ಸಿನಿಮಾ ಅವರೇಜ್ ಆದರೂ ನಿರ್ಮಾಪಕನಿಗೆ ಒಂದೇ ಒಂದು ರೂಪಾಯಿ ಕೂಡ ಉಳಿಯಲ್ಲ. ಆದರೆ, ಅವರಿಗೆ ಮತ್ತೊಂದು ಸಿನಿಮಾ ಬರುತ್ತೆ. ಎಲ್ಲರಿಗೂ ಕೆಲಸ ಸಿಗುತ್ತದೆ, ಎಲ್ಲರು ಮತ್ತೊಂದು ಹೊತ್ತಿನ ಊಟ ಮಾಡುತ್ತಾರೆ ಅಷ್ಟೆ. ಇನ್ನೊಂದು ಮನವಿ ಫಸ್ಟ್ ಡೇ ಫಸ್ಟ್ ಶೋ ದಿನ ಲೈವ್ ಅಪ್ ಡೇಟ್ ಕೊಡೋದನ್ನು ಬಿಟ್ಟು ಬಿಡಿ. ದಯವಿಟ್ಟು ಇದನ್ನ ಯಾರೂ ಮಾಡಬೇಡಿ. ಪ್ರಪಂಚದ ಯಾವ ದೇಶದಲ್ಲೂ ಯಾರೂ ಹೀಗೆ ಮಾಡಲ್ಲ. ತೆರೆ ಮೇಲೆ ನೋಡೋ ಸಿನಿಮಾ, ನಾವು ತಿನ್ನೋ ತಟ್ಟೆಯನ್ನ ಅರ್ಧದಲ್ಲೇ ಜಡ್ಜ್ ಮಾಡೋದು ತಪ್ಪು.
  ಪ್ರತಿ ಫ್ಲಾಪ್ ಚಿತ್ರದ ಹಿಂದೆ ಹಲವು ತಿಂಗಳು- ವರ್ಷಗಳ ಶ್ರಮ ಇರುತ್ತದೆ. ನೂರು ಕುಟುಂಬಗಳು ಇರುತ್ತವೆ. ಹೀಗಾಗಿ ಫ್ಲಾಪ್ ಸಿನಿಮಾ ತೆಗೆದವನು ಕಂಡರೆ ಆತನನ್ನು ಬಿಗಿಯಾಗಿ ಒಮ್ಮೆ ಅಪ್ಪಿಕೊಳ್ಳಿ. ಯಾಕೆಂದರೆ ತನ್ನ ಸಿನಿಮಾ ಮೂಲಕ ಅವನು 100 ಜನಕ್ಕೆ ಊಟ ಹಾಕಿದ ಹೀರೋ. ಆದರೆ, ಕೆಟ್ಟ ಸಿನಿಮಾ ತೆಗೆದಿದ್ದಾನೆಂದು ಮರಕ್ಕೆ ಕಟ್ಟಿ ಹೊಡಿಬೇಡಿ. ಅವನಿಗೆ ಸಿನಿಮಾ ತೆಗೆಯೋದು ಬರಲ್ಲ ಅಂದ್ರೆ ನೀವೂ ಸಿನಿಮಾ ಮಾಡಿ ತೋರಿಸಿ. ಒಟ್ನಲ್ಲಿ ಯಾರೋ ಒಬ್ಬರು ಇಲ್ಲಿ ಸಿನಿಮಾ ಮಾಡುತ್ತಲೇ ಇರಬೇಕು. ನಾವು ತೆಗೆಯೋ ಸಿನಿಮಾ ಫ್ಲಾಪ್ ಆಗುತ್ತದೆ ಅಂತ ಮೊದಲೇ ಗೊತ್ತಿಲ್ಲದೆ ಇರೋದ್ರಿಂದಾನೇ ಇಲ್ಲಿ ಫ್ಲಾಪ್ ಸಿನಿಮಾಗಳನ್ನು ತೆಗೆಯುತ್ತಿದ್ದೇವೆ. ಆ ಫ್ಲಾಪ್ ಸಿನಿಮಾಗಳೂ ಸಹ ಇಲ್ಲದೆ ಹೋದರೆ ಎಲ್ಲರು ಇಲ್ಲಿ ಭಿಕ್ಷೆ ಬೇಡಬೇಕಾಗುತ್ತದೆ. 
- ಪೂರಿ ಜಗನ್ನಾಥ್, ನಿರ್ದೇಶಕ
(ಅನುವಾದ: Keshava Murthy )