"ಜೀವಲಗಾ" - "ಕನ್ನಡದ ಯುವ ಸಂಗೀತ ನಿರ್ದೇಶಕ ಪಂ. ಶರಣ್ ಚೌಧರಿ ಅವರ ಹೊಸ ಪ್ರಯತ್ನಕ್ಕೆ ಮರಾಠಿ ಸಂಗೀತ ಪ್ರೇಮಿಗಳಿಂದ ಮೆಚ್ಚುಗೆ."
**********************************
ಎಲೆ ಮರೆಯ ಕಾಯಿಯಂತೆ ಇರುವ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿನ ಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುವ ಶ್ಲಾಘನೀಯ ಕಾರ್ಯವನ್ನು ಶರನ್ಸ್ ಮ್ಯೂಜಿಕ್ ಆಕಾಡೆಮಿಯ ಪಂಡಿತ್. ಶರಣ್ ಚೌಧರಿ ಯವರು ಕಳೆದ ಒಂದು ದಶಕದಿಂದ ಮಾಡುತ್ತ ಬಂದಿದ್ದಾರೆ. ಸ್ವತಃ ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಅವರು ಯುವ ಕವಿಗಳ ಕಾವ್ಯಗಳಿಗೆ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡುವ ಮೂಲಕ ಅವರನ್ನು ಕನ್ನಡ ನಾಡಿಗೆ ಪರಿಚಯಿಸಿ ಶ್ರೇಷ್ಠತೆ ಮೆರಿಸಿದ್ದಾರೆ.
ಇತ್ತೀಚಿಗೆ ಬಾಂಬೆ ಮೂಲದ ಶ್ರೀ ಅತುಲ್ ಪಾಟೀಲ್ ರವರ ಸಾಹಿತ್ಯದ "ಜೀವಲಗಾ" ಎಂಬ ಶೀರ್ಷಿಕೆಯ ಮರಾಠಿ ಆಲ್ಬಂಗೆ ಸಂಗೀತ ಸಂಯೋಜನೆಯನ್ನು ಮಾಡಿ Sharan's Music Academy ಯ YouTube ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದ್ದು, ಇದು ಶರಣ್ ರವರ ಹೊಸ ಪ್ರಯತ್ನವಾಗಿದೆ. ಈ ಹಾಡು ಶ್ರೀಮತಿ ಸ್ವಾತಿ ನರಶಾನಾ ಮತ್ತು ರಾಜಸ್ .ಜಿ ರವರ ಯುಗಳ ಕಂಠದಲ್ಲಿ 'ಶೃಂಗಾರ ರಸ' ದಲ್ಲಿ ಸುಮಧುರವಾಗಿ ಮೂಡಿಬಂದಿದೆ.
ಈ ಮರಾಠಿ ಹೊಸ ಪ್ರೇಮಗೀತೆ, ಸಹೃದಯ ಸಂಗೀತ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು,ಮಹಾರಾಷ್ಟ್ರದ ಅಭಿಮಾನಿಗಳಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇದೇ ಹಾಡನ್ನು ಮೊದಲು ' ಸಂಚಲನ ' ಎಂಬ ಆಲ್ಬಂ ಮೂಲಕ ಕನ್ನಡ ಭಾಷೆಯಲ್ಲಿ ಬಿಡುಗಡೆ ಗೊಳಿಸಿದ್ದರು. ಅದಕ್ಕೆ ಸಿಕ್ಕ ಶೋತೃಗಳ ಸ್ಫೂರ್ತಿಯಿಂದ ಅದೇ ರಾಗ ಸಂಯೋಜನೆಯಲ್ಲಿ ವಿಭಿನ್ನ ಮರಾಠಿ ಸಾಹಿತ್ಯದಲ್ಲಿ ಈ ಗೀತೆ ಹೊರಹೊಮ್ಮಿದೆ.
ಇದಕ್ಕಿಂತಲೂ ಮುಂಚೆ, ಕೆಲವು ಕನ್ನಡದ ಹಾಡುಗಳನ್ನು ಹಿಂದಿ ಭಾಷೆಗೆ ಶರಣ್ ರವರು ಅನುವಾದಿಸಿ, ಅವುಗಳಿಗೆ, ಸಂಗೀತ ಅಳವಡಿಸಿ ಬಿಡುಗಡೆಗೊಳಿಸಿದ್ದು, ಅವುಗಳು ಜನಪ್ರಿಯಗೊಂಡಿವೆ.
ಕನ್ನಡದ ಸಂಗೀತಗಾರರ ಈ ತರದ ಹೊಸ ಪ್ರಯತ್ನ ಬೇರೆ ಬೇರೆ ಭಾಷಿಕರಿಗೆ ತಲುಪುವಂತಾಗಲಿ. ಅವರಿಂದ ಸಾರಸ್ವತ ಸಾಹಿತ್ಯ ಮತ್ತು ಸಂಗೀತ ಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂಬುದೇ ನಮ್ಮೆಲ್ಲರ ಅಭಿಲಾಷೆ.