ಭಾರತೀಯರಿಗೆ ಅನೇಕ ಹಬ್ಬಗಳು ಬರುತ್ತವೆ. ಗಣೇಶ ಚತುರ್ಥೀ, ನವರಾತ್ರಿ, ದೀಪಾವಳಿ ಹೀಗೇ ಪ್ರತಿಯೊಂದೂ ಸಹ ನಮ್ಮ ಪ್ರಕೃತಿಯ ಜೊತೆಗೆ ಸಂಬಂಧ ಹೊಂದಿಕೊಂಡೇ ಆಚರಿಸಲ್ಪಡುತ್ತವೆ. ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭಿಸಿ ಎಲ್ಲವೂ ಈ ಮಣ್ಣಿನೊಂದಿಗೆ ಬೆಸೆದು ಕೊಂಡಿವೆ. ಜನಪದೀಯವಾಗಿ ಆಚರಿಸುತ್ತಾ ಸಂಭ್ರ್ರಮ ಪಡುವ ದಿನಗಳಿವು. ಎಲ್ಲವೂ ಸಹ ಭೂಮಿಯನ್ನು ಆಧರಿಸಿಯೇ ಆಚರಿಸಲ್ಪಡುವುದು. ಇವೆಲ್ಲವನ್ನೂ ವ್ಯವಸಾಯದ ಆರಂಭದಿಂದ ಆಚರಿಸಿಕೊಂಡು ಬರುವುದೂ ಸಹ ವಿಶೇಷ. ಹಾಗಂತ ಇವುಗಳಿಗೆ ಯಾರೋ ಆಚರಿಸಲು ನಾಂದಿ ಹಾಡಿದರು ಎನ್ನುವುದೇ ಇಲ್ಲ. ಇದರ ಆರಂಭ ಇಂಥಹ ಕಾಲದಲ್ಲಿ ಆರಂಭಗೊಂಡಿತು ಎನ್ನುವುದೂ ನಿಖರವಾಗಿಲ್ಲ. ಆದರೆ ಇಂದು ಆಚರಿಸಲ್ಪಡುತ್ತಿರುವ ಡೇ ಗಳು ಅನರ್ಥವನ್ನೇ ಹೊತ್ತಂತೆ ಭಾಸವಾಗುತ್ತವೆ. ಅದು ನನಗೆ ಮಾತ್ರ ಇರಬಹುದು.
ಮಧ್ಯಯುಗೀನ ಕಾಲದ ಯುರೋಪಿನ ಕ್ಯಾಥೋಲಿಕ್ ದೇಶಗಳಲ್ಲಿ ಆಚರಿಸಲು ಆರಂಭಿಸಿದ ಈ ಅಪ್ಪನ ದಿನ ಮಾರ್ಚ್ ೧೯ರಂದು ಸೈಂಟ್ ಜೋಸೆಫ್‌ರ ಸ್ಮರಣೆಗಾಗಿ ಆಚರಿಸಲಾಯಿತು. ಆದರೆ ಸೋನೋರಾ ಸ್ಮಾರ್ಟ್ ಡಾಡ್ ಎನ್ನುವವರು ಅಮೇರಿಕಾದಲ್ಲಿ ೧೯೧೦ನೇ ಇಸವಿಯಿಂದ ಜೂನ್ ಮೂರನೇ ಭಾನುವಾರ ಆಚರಿಸಲು ಆರಂಭಿಸಿದರು. ಇದು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಭಾರತದಲ್ಲಿ ಇದು ಅಧಿಕೃತವೂ ಅಲ್ಲ ಸಾಂಪ್ರದಾಯಿಕವಂತೂ ಅಲ್ಲವೇ ಅಲ್ಲ. ನಮ್ಮಲ್ಲಿ ತಂದೆಯ ಸ್ಮರಣೆಯನ್ನು ದಿನಾ ಮಾಡುತ್ತೇವೆ, ಆಶೀರ್ವಾದ ಬಯಸುತ್ತೇವೆ, ತಂದೆಯ ಸ್ಮರಣೆಗಾಗಿಯೇ ತಂದೆಯ ಹೆಸರನ್ನು ಮಗನಿಗೆ ಇಡುವ ಸಂಪ್ರದಾಯವೂ ಇತ್ತು. ನಮ್ಮದು ವೃದ್ಧಾಶ್ರಮದ ಸಂಸ್ಕಾರವೇ ಅಲ್ಲ. ನಮಗೇಕೆ ಅಪ್ಪನ ದಿನ ? ವಯಕ್ತಿಕವಾಗಿ ನನಗೆ ಬೇಡ ಅಷ್ಟೇ. ಆಚರಿಸಿಕೊಳ್ಳುವವರಿಗೆಲ್ಲ ಶುಭಾಶಯಗಳು. . . .
#ನನ್ನಪ್ಪ_ದೇಹದೊಂದಿಗೆ_ನನ್ನೊಂದಿಗಿಲ್ಲ_ಆದರೆ_ಭಾವಾತ್ಮಕವಾಗಿ_ಸದಾ_ನನ್ನೊಂದಿಗೆ_ಜಾಗ್ರತ
ಪಿತುಂ ನು ಸ್ತೋಷಂ ಮಹಾ ಧರ್ಮಾಣಂ ತವಿಷೀಂ |
ಎನ್ನುವ ಋಗ್ವೇದದ ೧೮೭ನೇ ಸೂಕ್ತದ ಋಕ್ಕಿನಲ್ಲಿ ಒಂದು ವಿಷಯ ಪ್ರಸ್ತಾಪಿಸಲ್ಪಟ್ಟಿದೆ. ಇಲ್ಲಿ ಪಿತುಂ ಎನ್ನುವ ಶಬ್ದದ ವಿವರಣೆ ಸಿಗುತ್ತದೆ. ಪಿತು ಅಥವಾ ತಂದೆಯಾದವನು ನಮ್ಮ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸುವವನು ಎನ್ನುತ್ತದೆ. ಪಿತುಂ ಪಾಲಕಮನ್ನಂ ಎನ್ನುವಲ್ಲಿ ಹಸಿವಿನ ಬಾಧೆಯನ್ನು ಪರಿಹರಿಸುವವನು ಎಂದರ್ಥವು. ಈ ಪಿತು ಎನ್ನುವ ಶಬ್ದಕ್ಕೆ ಅನೇಕ ಅರ್ಥಗಳಿದ್ದರೂ ಸಹ ಹೆಚ್ಚಿನ ಅರ್ಥವನ್ನು ಕೊಡುವುದು ತನ್ನ ಮುಂದಿನ ಜನಾಂಗಕ್ಕೆ ಅಥವಾ ತನ್ನ ಮಕ್ಕಳಿಗೆ ಉತ್ತರೋತ್ತರ ಅಭಿವೃದ್ಧಿಯಾಗಲೆಂದು ಬಯಸುವವನು ತಂದೆ. "ಪಿತುರಿತ್ಯನ್ನನಾಮ ಪಾತೇರ್ವಾ" ಎನ್ನುವ ನಿರುಕ್ತದ ಅರ್ಥದಲ್ಲಿ ಪಾತೇರ್ವಾ ಎನ್ನುವುದನ್ನು ಹಸಿವಿನಿಂದ ಕಾಪಾಡುವವನು ಎಂದು ಹೇಳಲಾಗಿದೆ. ನಮ್ಮ ಎಲ್ಲಾ ಬಗೆಯ ಹಸಿವೆಗಳಿಂದ ಕಾಪಾಡುವವನು ಪಿತು ಆದುದರಿಂದ ನಮ್ಮ ತಂದೆ ಆ ಎಲ್ಲಾ ಅಭಿವೃದ್ಧಿಗಳನ್ನು ಬಯಸುವವನು. ಇದು ನಮ್ಮ ಭಾರತೀಯ ಚಿಂತನೆಯೂ ಹೌದು. ನಮ್ಮ ಸಂಸ್ಕೃತಿಯೂ ಹೌದು. ಹೌದು ನಮಗೆ ಉದಾತ್ತವಾದ ಸಂಸ್ಕಾರವನ್ನು ಕೊಟ್ಟ ತಂದೆ ನನಗೆ ನೆನಪು ! ದೇಹಮಾತ್ರ ನಮಗೆ ಉಳಿಸಿ ಆತ್ಮ ಸುಸ್ಥಾನ ತಲುಪಿ ಸದ್ಗತಿಯನ್ನು ಪಡೆದಿದೆ. ಅಪ್ಪನ ಆದರ್ಶ, ಅಪ್ಪನ ನೆನಪು ಇನ್ನೂ ಬಾಧಿಸುತ್ತದೆ.
#ಅಪ್ಪನ_ದಿನವಂತೆ

Social Plugin