ಇನ್ನೆರಡು ದಿನ ಹೆಲಿಕಾಪ್ಟರ್ ಇಕಾನಮಿ?!!
ಕರ್ನಾಟಕ ಲಜ್ಜೆಯಿಂದ ತಲೆ ತಗ್ಗಿಸಬೇಕಾದ ಸಂಗತಿ ಇದು
- - - - - - - 
 ಸರ್ಕಾರಿ ವ್ಯವಸ್ಥೆಯ ಖರ್ಚೂ ಸೇರಿ ಅಂದಾಜು 500 ಕೋಟಿ ರೂ.ಗಳ ಅಧಿಕೃತ ಖರ್ಚಿನಲ್ಲಿ ಮುಗಿಯಬೇಕಾಗಿದ್ದ ಚುನಾವಣೆ ಇದು. ಆದರೆ, ಇಂದು ಚುನಾವಣಾ ಪ್ರಚಾರದ ಅಧಿಕೃತ ಅವಧಿ ಮುಗಿಯುವ ಹೊತ್ತಿಗೆ ಅಭೂತಪೂರ್ವ 375.60 ಕೋಟಿ ರೂ.ಗಳ ಅಕ್ರಮ ಹಣ, ಮದ್ಯ ಇತ್ಯಾದಿಗಳನ್ನು ಆಯೋಗ ವಶಪಡಿಸಿಕೊಂಡಿದೆ.
ಸಾಂಪ್ರದಾಯಿಕವಾಗಿ ಈ ಕಳ್ಳಾಟಗಳೆಲ್ಲ ನಡೆಯುವುದು ಪ್ರಚಾರ ಮುಗಿದು ಚುನಾವಣೆಗೆ ಮುನ್ನ ನೀರವ ಮೌನ ನೆಲೆಸಿರುವಾಗ, ಒಂದೋ ಎರಡೋ ದಿನಗಳಲ್ಲಿ. ಅವೆಲ್ಲ ನಡೆಯುವುದು ಇನ್ನೂ ಬಾಕಿ ಇದೆ. ಅದೆಷ್ಟು ಕೋಟಿಗಳ ಹಣದ ಹೊಳೆ ಇನ್ನೆರಡು ದಿನಗಳಲ್ಲಿ ಹರಿಯಲಿದೆಯೋ ಗೊತ್ತಿಲ್ಲ. ಇಲ್ಲಿಯ ತನಕ ಒಂದು ಮತಕ್ಕೆ 500 ರೂ.; ಸಭೆಗಳಲ್ಲಿ ಹಾಜರಾತಿಗೆ ಒಂದು ದಿನದ ಸಂಬಳ ಎಂದೆಲ್ಲ ಕೇಳಿದ್ದೆ. ಈ ಬಾರಿ ಪ್ರತೀ ತಲೆಗೆ 2000-5000ರೂ. ದ ತನಕ ಖರ್ಚು ಮಾಡುವ, ಸಭೆಗೆ ಹಾಜರಾದದ್ದಕ್ಕೇ 500-1000ರೂ. ಕೊಡುವ ವದಂತಿಗಳೆಲ್ಲ ಕಿವಿಗೆ ಬಿದ್ದಿವೆ. ಆ ಲೆಕ್ಕಾಚಾರಗಳೆಲ್ಲ ವಾಸ್ತವದಲ್ಲಿ ಆದದ್ದೆಷ್ಟೆಂದು ಸಿಗುವಂತಾದರೆ, ಕರ್ನಾಟಕದ ಶ್ರೀಮಂತರು ನಿಜಕ್ಕೂ ಎಷ್ಟು ಶ್ರೀಮಂತರು ಎಂಬುದು ಗೊತ್ತಾಗುತ್ತಿತ್ತು!
ಕೋವಿಡ್ ಸಂಕಟದ ಕಾಲದಲ್ಲಿ ಜೀನ್ ಡ್ರೆಝ್, ರಘುರಾಂ ರಾಜನ್ ಅವರಂತಹ ಅರ್ಥಶಾಸ್ತ್ರಜ್ಞರು ಜನರ ಕೈಯಲ್ಲಿ ನಗದು ಹಣ ಕೊಟ್ಟರೆ ಆರ್ಥಿಕತೆ ಸುಧಾರಿಸೀತು ಎಂದಿದ್ದರು. ಸರ್ಕಾರ ಅದನ್ನು ಮಾಡುವ ಬದಲು ಕೊಟ್ಟ ಲೆಕ್ಕ (ಪರೋಕ್ಷವಾಗಿ) ಮಾತ್ರ ತೋರಿಸಿತ್ತು. ಮೊದಲೇ ಗೊತ್ತಿದ್ದರೆ, ಕರ್ನಾಟಕದ ರಾಜಕೀಯ ಶ್ರೀಮಂತರಿಗೇ, ಜನ ನಂಬಿಕೊಂಡಿದ್ದಂತೆ ಹೆಲಿಕಾಪ್ಟರಿನಿಂದ ದುಡ್ಡು ಉದುರಿಸುವ ಗುತ್ತಿಗೆ ಕೊಟ್ಟುಬಿಡಬಹುದಿತ್ತು! 
ಈ ದುಡ್ಡಿನ ರಾಜಕೀಯಕ್ಕೆ ಮುಂದಿನ ಚುನಾವಣೆಗೆ ಮುನ್ನ ಕೊನೆ ಹಾಡದಿದ್ದರೆ, ಸಾವಿರ ಕೋಟಿ ರಾಜಕಾರಣಿಗಳೂ ಚುನಾವಣೆ ಎಂದರೆ ಕನಸಿನಲ್ಲೂ ಬೆಚ್ಚಿಬೀಳಬೇಕಾದೀತು... ಎಚ್ಚರ!!