ವೀರಭಿಕ್ಷಾವೃತ್ತಿಮಠಕ್ಕೆ ಶ್ರೀಗಳ ರಾಜಿನಾಮೆ
ಗೆದ್ದರೆ ತೇರದಾಳ ಸೋತರೆ ಹಿಮಾಲಯ-ಶಿವಶಂಕರ ಶ್ರೀ
 ರಾಜಕೀಯ ಅಖಾಡಕ್ಕೆ ಧುಮುಕಿರುವ ಹಳೇಹುಬ್ಬಳ್ಳಿಯ ವೀರಭಿಕ್ಷಾವೃತ್ತಿ ಮಠದ ಶಿವಶಂಕರ ಸ್ವಾಮೀಜಿ ತಮ್ಮ ಪೀಠಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆಂದು ಸ್ಪಷ್ಟಪಡಿಸಿದರು.
ರಬಕವಿ-ಬನಹಟ್ಟಿ ತಾಲೂಕಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ನನ್ನ ರಾಜಕೀಯ ಪ್ರವೇಶ ಮಠದ ಭಕ್ತರಿಗೆ ಮುಜುಗರವಾಗಬಾರದೆಂಬ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ರಾಜಿನಾಮೆ ನೀಡಿದ್ದೇನೆಂದು ತಿಳಿಸಿದರು.
ಮಠದ ಸಾಮಾನ್ಯ ಭಕ್ತನಾಗಿ ರಾಜಕೀಯ ಪ್ರವೇಶ ಮಾಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಸ್ಪರ್ಧೆ ನಿಶ್ಚಿತವಾಗಿದ್ದು, ಕುರುಹಿನಶೆಟ್ಟಿ, ಹಟಗಾರ ಸೇರಿದಂತೆ ನೇಕಾರ ಸಮುದಾಯಗಳ ಎಲ್ಲ ಒಳಪಂಗಡಗಳ ಭಕ್ತರ ಒತ್ತಾಯದ ಮೆರೆಗೆ ಸ್ಪರ್ಧೆ ಅನಿವಾರ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ರಾಷ್ಟ್ರೀಯ ಪಕ್ಷಗಳು ನೇಕಾರರ ಕೂಗಿಗೆ ಸಹಕರಿಸದ ಕಾರಣ ಎಲ್ಲರ ಒಮ್ಮತದ ನಿಲುವಿನಿಂದ ಈ ನಿರ್ಧಾರ ಕೈಗೊಂಡಿದ್ದು, ಕ್ಷೇತ್ರದ ಜನತೆ ಗೆಲುವಿಗೆ ಸೋಪಾನವಾಗಲಿದ್ದಾರೆಂದರು.ಪ್ರಚಾರ ಸಂದರ್ಭ ಯಾವದೇ ರ‍್ಯಾಲಿ, ಹಾರ, ತುರಾಯಿಗಳಿರುವದಿಲ್ಲ ಬದಲಾಗಿ ವಿಭೂತಿ, ಕುಂಕುಮ, ಪ್ರಸಾದವಷ್ಠೇ ಇರುವದೆಂದು ಹಟಗಾರ ಸಮಾಜದ ಚೇರಮನ್ ಶ್ರೀಶೈಲ ದಭಾಡಿ ತಿಳಿಸಿದರು.
ಕಳೆದ ಏಳೆಂಟು ವರ್ಷಗಳಿಂದ ಕ್ಷೇತ್ರದಲ್ಲಿಯೇ ಆಧ್ಯಾತ್ಮಿಕ ಕೃಷಿ ಮಾಡುತ್ತಿದ್ದೇನೆ. ಭಕ್ತರ ಪ್ರೇಮವೂ ಪ್ರಬಲವಾಗಿದ್ದು, ಇವೆಲ್ಲವೂ ಸ್ಪರ್ಧೆಗೆ ಕಾರಣವಾಗಿದೆಯೆಂದರು.ರಾಜಕೀಯದಿಂದ ಒತ್ತಡ: ರಾಜ್ಯದ ಕೆಲ ಮಠಾಧೀಶರಿಂದ ಹಾಗು ರಾಜಕೀಯ ಮುಖಂಡರಿಂದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ. 
ಇದ್ಯಾವದಕ್ಕೂ ಮಣೆ ಹಾಕದೆ ಇಟ್ಟ ಹೆಜ್ಜೆಯನ್ನು ಹಿಂದೆಯಿಡುವದಿಲ್ಲವೆಂದರು.
ಗೆದ್ದರೆ ತೇರದಾಳ..!:
 ಈ ಬಾರಿ ಆಧ್ಯಾತ್ಮದಿಂದ ರಾಜಕೀಯ ನಡೆ ನನ್ನದಾಗಿದೆ. ಗೆದ್ದರೆ ತೇರದಾಳ ಕ್ಷೇತ್ರದ ಅಭಿವೃದ್ಧಿಗೆ ಬುನಾದಿಯಾಗಲಿದೆ. ಸೋತರೆ ಹಿಮಾಲಯಕ್ಕೆ ತೆರಳುವೆ ಎಂದು ಶಿವಶಂಕರ ಶ್ರೀಗಳು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯವೆಂಬುದು ಭ್ರಷ್ಟಾಚಾರದ ಯಂತ್ರವಾಗಿದೆ. ಸ್ವಾರ್ಥ ಹಾಗು ಭ್ರಷ್ಟತೆ ನಿರ್ಮೂಲನೆಗೆ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ ಎಂದರು.ಭೀಮಶಿ ಮಗದುಮ್, ರಾಜೇಂದ್ರ ಅಂಬಲಿ, ಡಾ. ಪಂಡಿತ ಪಟ್ಟಣ, ಮಲ್ಲಿಕಾರ್ಜುನ ಬಾಣಕಾರ, ಶ್ರೀಶೈಲ ದಭಾಡಿ, ಓಂಪ್ರಕಾಶ ಕಾಬರಾ, ಗಂಗಪ್ಪ ಮುಗತಿ, ಬ್ರಿಜ್‌ಮೋಹನ ಡಾಗಾ, ದುಂಡಯ್ಯ ಕಾಡದೇವರ, ಬಸವರಾಜ ಗಿಡದಾನಪ್ಪಗೋಳ, ಸುರೇಶ ಬೀಳಗಿ, ಸೋಮು ಗೊಂಬಿ, ಶ್ರೀಪಾದ ಬಾಣಕಾರ, ರಾಜು ಕುಲಕರ್ಣಿ ಸೇರಿದಂತೆ ಅನೇಕರಿದ್ದರು.

ಶ್ರೀಗಳ ಸ್ಥಿರಾಸ್ತಿ ಶೂನ್ಯ..!
 ನಾಮಪತ್ರದ ವೇಳೆ ಆಸ್ತಿ ಘೋಷಣೆ ಸಂಬಂಧ ಶಿವಶಂಕರ ಶ್ರೀಗಳು ತಮ್ಮ ಸ್ಥಿರಾಸ್ಥಿ ಏನೂ ಇಲ್ಲವೆಂದು ಸ್ಪಷ್ಟಪಡಿಸಿದ್ದು, ಚರಾಸ್ತಿಯು 25 ಸಾವಿರ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 1,67 ಲಕ್ಷ ರೂ. ಇರುವದಾಗಿ ತಿಳಿಸಿದ್ದು, ಒಟ್ಟು 1.92 ಲಕ್ಷ ರೂ.ಗಳಷ್ಟು ಚರಾಸ್ತಿ ಘೋಷಿಸಿದ್ದು, ಅತ್ಯಂತ ಕಡಿಮೆ ಆಸ್ತಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷ.